ಸೋಮವಾರ, ಆಗಸ್ಟ್ 2, 2021
28 °C
ಅರಿವಿನ ಮನೆ ದತ್ತಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಈಶ್ವರಯ್ಯ ಮಠ ಅಭಿಪ್ರಾಯ

ಆತ್ಮವಿಮರ್ಶೆಯಿಂದ ಪೂಜ್ಯರಾದ ಬಸವಣ್ಣ: ಪ್ರಾಧ್ಯಾಪಕ ಈಶ್ವರಯ್ಯ ಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬಸವಣ್ಣನವರು ತಮ್ಮ ದೋಷಗಳ ಬಗ್ಗೆ ಪ್ರಸ್ತಾಪಿಸುತ್ತ, ಆತ್ಮ ವಿಮರ್ಶೆ ಮಾಡಿಕೊಳ್ಳುವ ಮೂಲಕ ಲೋಕಪೂಜ್ಯರಾದರು’ ಎಂದು ಪ್ರಾಧ್ಯಾಪಕ ಈಶ್ವರಯ್ಯ ಮಠ ಹೇಳಿದರು.

ಕಲಬುರ್ಗಿ ಬಸವ ಸಮಿತಿಯ ಅನು ಭವ ಮಂಟಪದಲ್ಲಿ ಸೋಮವಾರ ಶಾಂತಾಬಾಯಿ ಆಲೂರು, ಮಾಣಿಕ ಬಾಯಿ ದೇವಪ್ಪ ಮತ್ತು ಅಕ್ಕಮಹಾದೇವಿ ಮಾಯಾಣಿ, ತೇಜಮ್ಮ ಮಾಯಾಣಿ ಅವರ ಸ್ಮರಣಾರ್ಥ ನಡೆದ ಅರಿವಿನ ಮನೆ–634ನೇ ದತ್ತಿ ಕಾರ್ಯಕ್ರಮದಲ್ಲಿ ‘ಬಸವಣ್ಣನೆಂಬ ಲೋಕಚುಂಬಕ’ ಕುರಿತು ಅವರು ಮಾತನಾಡಿದರು.

‘ಚೈತನ್ಯಭರಿತ ಶಕ್ತಿಯಾದ ಬಸವಣ್ಣ ನವರನ್ನು ಶರಣರ ಸಮೂಹ ತುಂಬ ಗೌರವದಿಂದ ಸ್ಮರಿಸುತ್ತದೆ. ಎಲ್ಲ ರೀತಿಯವಿಚಾರ ಸಿದ್ಧಾಂತದವರನ್ನು ಒಂದುಗೂಡಿಸುವ ಮೂಲಕ ಎಲ್ಲರ ಹೃದಯದಲ್ಲಿ ನೆಲೆಸಿದರು. ‘ನಿಮ್ಮ ಶರಣರ ಪಾದವಲ್ಲದೆ ಅನ್ಯಕ್ಕೆಳಸದಂತೆ ಇರಿಸಯ್ಯ ಕೂಡಲ ಸಂಗಮದೇವ’ ಎಂದು ಶರಣರಮನಸ್ಸನ್ನು ಗೆದ್ದರು’ ಎಂದರು.

‘ಕಳಂಕಿತನಾದರೂ ವ್ಯಕ್ತಿಯನ್ನು ವೈಯಕ್ತಿಕವಾಗಿ ಅವಮಾನಿಸಬಾರದು ಎಂಬುದು ಶರಣರ ಸಿದ್ಧಾಂತ. ‘ಇವ ನಮ್ಮವ ಇವ ನಮ್ಮವ’ ಎನ್ನುವ ಮೂಲಕ ಜಾತಿಯತೆ ನಿರಾಕರಿಸುವುದರ ಮೂಲಕ ಬಸವಣ್ಣನವರು ಜನಪ್ರಿಯರಾದರು’ ಎಂದರು.

ಫ.ಗು. ಹಳಕಟ್ಟಿ ಜಯಂತಿ ಪ್ರಯುಕ್ತ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ದಂಡೆ ಮಾತನಾಡಿ, ‘ವಚನ ಸಾಹಿತ್ಯಕ್ಕೆ ಫ.ಗು. ಹಳಕಟ್ಟಿಯವರ ಕೊಡುಗೆ ಅಪಾರ. ಹಳಕಟ್ಟಿಯವರು ವಚನ ಸಾಹಿತ್ಯ ಶೋಧನೆ ಪ್ರಚಾರಕ್ಕೆ ತರದಿದ್ದರೆ, ವಚನಗಳು ಓದಲು ಸಿಗುವುದೇ ವಿರಳವಾಗುತ್ತಿತ್ತು. ಬಿಎಲ್‌ಡಿ ಸಂಸ್ಥೆ ಹುಟ್ಟು ಹಾಕಿದ ಕ್ರಾಂತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ. ‘ಶಿವಾನುಭವ’ ಪತ್ರಿಕೆ ಆರಂಭಿಸಿದ ಅವರು ಬಡತನ ಲೆಕ್ಕಿಸದೇ ವಚನಗಳನ್ನು ಜನಮಾನಸಕ್ಕೆ ತಲುಪಿಸಲು ಪ್ರಯತ್ನಿಸಿದರು. ವಚನ ಪಿತಾಮಹ ಎಂಬ ಬಿರುದು ಪಡೆದರು’ ಎಂದರು.

ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ವೀರಣ್ಣ ದಂಡೆ ಮಾತನಾಡಿ, ‘ಸಕಲ ಲೋಕದವರಿಗೂ ಬಸವಣ್ಣ ಚುಂಬಕ ಶಕ್ತಿಯಾಗಿದ್ದರು. ಅವರು ಸದಾ ಸ್ಮರಣೀಯರು’ ಎಂದರು.

ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ದತ್ತಿ ದಾಸೋಹಿಗಳಾದ ಬಸವರಾಜ ಮಾಯಾಣಿ ಇದ್ದರು. ಪ್ರಧಾನ ಕಾರ್ಯ
ದರ್ಶಿ ಎಚ್.ಕೆ.ಉದ್ದಂಡಯ್ಯ ಕಾರ್ಯ ಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.