ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯಕ್ಕೆ ಅಪ್ಪನ ಕೆರೆ ಒತ್ತುವರಿ: ಶಾಸಕ ಪ್ರಿಯಾಂಕ್ ಖರ್ಗೆ

ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ: ಶಾಸಕ ಪ್ರಿಯಾಂಕ್ ಖರ್ಗೆ ಎಚ್ಚರಿಕೆ
Last Updated 3 ಸೆಪ್ಟೆಂಬರ್ 2022, 16:54 IST
ಅಕ್ಷರ ಗಾತ್ರ

ಕಲಬುರಗಿ: ‘ನಗರದ ಅಪ್ಪನ ಕೆರೆಯ ದಂಡೆಯಲ್ಲಿ ₹ 20 ಕೋಟಿ ವೆಚ್ಚದಲ್ಲಿ ಸೌಂದರೀಕರಣ ಕಾಮಗಾರಿ, ಮಹಾಪುರುಷರ ಪ್ರತಿಮೆ ಸ್ಥಾಪನೆ ಕಾರ್ಯ ಮಹಾನಗರ ಪಾಲಿಕೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕೈಗೊಂಡಿವೆ. ಆದರೆ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸೇರಿ ವಿವಿಧ ಸಂಸ್ಥೆಗಳಿಂದ ಇನ್ನೂ ಒಪ್ಪಿಗೆಯೇ ಸಿಕ್ಕಿಲ್ಲ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

‘ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಅಧಿಕಾರಿಗಳು ಮನಸೋಇಚ್ಛೆ ನಿರ್ಣಯ ಕೈಗೊಳ್ಳುತ್ತಿದ್ದಾರೆ. ನಾನು ಪ್ರವಾಸೋದ್ಯಮ ಸಚಿವನಾಗಿದ್ದ ವೇಳೆ ಕೆರೆಯನ್ನು ಪ್ರವಾಸಿ ತಾಣವಾಗಿಸಲು ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯಲು ಯತ್ನಿಸಿದ್ದೆ’ಎಂದುಅವರುಶನಿವಾರಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.

‘ಕೆರೆ ಮಧ್ಯಭಾಗದ ದ್ವೀಪದಲ್ಲಿ ಹಕ್ಕಿಗಳು ವಾಸವಿರುವ ಕಾರಣ ಅವುಗಳ ಆವಾಸಕ್ಕೆ ಧಕ್ಕೆ ಬರಲಿದೆ ಎಂಬ ಕಾರಣಕ್ಕೆ ಅನುಮತಿ ಸಿಕ್ಕಿರಲಿಲ್ಲ. ₹ 20 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸುತ್ತಿರುವವರು ನನ್ನಂತೆಯೇ ವಿವಿಧ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಲು ಯತ್ನಿಸಿರಬಹುದು ಎಂದು ಭಾವಿಸಿದ್ದೆ. ಆದರೆ, ಅನುಮತಿ ಪಡೆದಿಲ್ಲ’ ಎಂದರು.

‘ಕೆರೆಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕು. ಕೆರೆ ನೀರಿನ ಸಂಗ್ರಹಕ್ಕೆ ಧಕ್ಕೆ ಆಗಬಾರದು. ನೀರಿನ ಒಳಹರಿವು, ಹೊರಹರಿವಿಗೆ ಸಮಸ್ಯೆ ಆಗಬಾರದು ಎಂದು ಪ್ರಾಧಿಕಾರ ಸೂಚಿಸಿದೆ’ ಎಂದು ಅವರು ತಿಳಿಸಿದರು.

‘ಟ್ಯಾಂಕ್ ಬಂಡ್ ರಸ್ತೆಯ ಭಾಗದ ಕೆರೆಯ ಒಂದು ಭಾಗ ಒತ್ತುವರಿ ಮಾಡಿ ಕಟ್ಟೆ ನಿರ್ಮಿಸಲಾಗಿದೆ. ನಿಯಮಾವಳಿ ಉಲ್ಲಂಘಿಸಿದ ಮಾಹಿತಿ ಸಿಕ್ಕ ಕೂಡಲೇ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್‌ ಮುಖಂಡರಾದ ಅಲ್ಲಮಪ್ರಭು ಪಾಟೀಲ, ಸುಭಾಷ್ ರಾಠೋಡ, ಸಂತೋಷ ಬಿಲಗುಂದಿ, ಈರಣ್ಣ ಝಳಕಿ ಇದ್ದರು.

ಮೇಲ್ಸೇತುವೆ ನಿರ್ಮಾಣ ವೆಚ್ಚ ₹ 69 ಕೋಟಿಗೆ ಏರಿದ್ದು ಏಕೆ?

‘ವಾಹನ ದಟ್ಟಣೆ ನಿವಾರಿಸಲು ಸೇಡಂಗೆ ಸಂಪರ್ಕ ಕಲ್ಪಿಸಲು ಕಲಬುರಗಿ ಹೊರವಲಯದ ರಿಂಗ್ ರಸ್ತೆಯಲ್ಲಿ ರಾಮಮಂದಿರದ ಕಡೆ 1.5 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಮೊದಲು ₹ 49 ಕೋಟಿ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಈಗ ₹ 69 ಕೋಟಿಗೆ ಏರಿದ್ದು ಏಕೆ’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ, ಒಂದೂವರೆ ಕಿ.ಮೀ. ಉದ್ದದ ನಾಲ್ಕು ಲೇನ್ ಮೇಲ್ಸೇತುವೆಗೆ ₹ 29 ಕೋಟಿ ಖರ್ಚಾಗುತ್ತದೆ. ಆದರೆ ₹ 49 ಕೋಟಿಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಾಗಿದ್ದು ಹೇಗೆ? ಮೊತ್ತ ಹೆಚ್ಚಳವಾಗಿದ್ದು ಹೇಗೆ? ಹಾಗಿದ್ದರೆ, ಕೆಕೆಆರ್‌ಡಿಬಿಯ ಕಾಮಗಾರಿಗಳ ವೆಚ್ಚವೂ ಹೆಚ್ಚಾಗಬೇಕಿತ್ತು’ ಎಂದರು.

‘ಮೇಲ್ಸೇತುವೆ ನಿರ್ವಹಣೆ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಆಡಳಿತಾತ್ಮಕ ಒಪ್ಪಿಗೆ ಪಡೆದಿಲ್ಲ. ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿಯವರು ಆಡಳಿತಾತ್ಮಕ ಅನುಮೋದನೆ ಪಡೆಯದೇ ಡಿಪಿಆರ್‌ ಕಾಮಗಾರಿ ಟೆಂಡರ್ ಕರೆದಿರುವುದು ಹೇಗೆಂದು ಕೇಳಿದ್ದಾರೆ. ನಿಯಮ ಉಲ್ಲಂಘನೆಯಾಗಿದ್ದು ಮೇಲ್ನೋಟಕ್ಕೆ ಕಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ’ ಎಂದರು.

ಕೆರೆ ಕಾಮಗಾರಿಗೆ ಜಿಲ್ಲಾಧಿಕಾರಿ ತಡೆ

ಕಳೆದ ತಿಂಗಳು ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮೇಲ್ನೋಟಕ್ಕೆ ಅಪ್ಪನ ಕೆರೆ ಒತ್ತುವರಿ ಮಾಡಿಕೊಂಡು ಕಾಮಗಾರಿ ನಡೆಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಆರಂಭಿಸುವ ಮುನ್ನ ಪ್ರಾಧಿಕಾರ ವಿಧಿಸಿದ ಷರತ್ತುಗಳನ್ನು ಪೂರೈಸಲಾಗಿದೆಯೇ? ಸಕ್ಷಮ ಪ್ರಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಲಾಗಿದೆಯೇ ಎಂಬ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಪ್ರಶ್ನಿಸಿದ್ದಾರೆ. ಈ ಕುರಿತ ದಾಖಲೆಗಳನ್ನು ಸಲ್ಲಿಸುವವರೆಗೂ ಕಾಮಗಾರಿಯನ್ನು ನಡೆಸದಂತೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿವಿಧ ಕಾಮಗಾರಿಗಳು ಕೈಗೊಂಡಿರುವ ಕುರಿತು 15 ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ವತಿಯಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು
–ಪ್ರಿಯಾಂಕ್ ಖರ್ಗೆ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT