ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ಯಾರಿಗೆ ಸೇರಿದ್ದು? ಸ್ಪಷ್ಟೀಕರಣ ನೀಡಿ: ಮಾಜಿ ಶಾಸಕ ಬಿ.ಆರ್.ಪಾಟೀಲ ಒತ್ತಾಯ

Last Updated 19 ಏಪ್ರಿಲ್ 2019, 9:38 IST
ಅಕ್ಷರ ಗಾತ್ರ

ಕಲಬುರ್ಗಿ: ‘ಭಾರತೀಯ ಸೇನೆ ಭಾರತಕ್ಕೆ ಸೇರಿದ್ದೋ ಅಥವಾ ನರೇಂದ್ರ ಮೋದಿಗೆ ಅವರಿಗೆ ಸೇರಿದ್ದೋ ಎಂಬುದರ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸ್ಪಷ್ಟೀಕರಣ ನೀಡಬೇಕು’ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಒತ್ತಾಯಿಸಿದರು.

‘ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಅವರು ಮೋದಿ ಸೇನೆ ಎಂಬ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿರುವ ರಾಷ್ಟ್ರಪತಿ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಯಾರ ರಕ್ತದಲ್ಲಿ ಬರೆದುಕೊಡುತ್ತೇವೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಈ ಹಿಂದೆ ಕೂಡ ಅನೇಕ ಬಾರಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ಇದುವರೆಗೆ ಬರೆದುಕೊಟ್ಟಿಲ್ಲ’ ಎಂದು ಲೇವಡಿ ಮಾಡಿದರು.

ಖಂಡ್ರೆ ಗೆಲುವು ಖಚಿತ: ‘ಆಳಂದ ಮತಕ್ಷೇತ್ರದಲ್ಲಿ 12 ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಮತಯಾಚಿಸಿದ್ದೇನೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಂಚೋಳಿಯಲ್ಲಿ ಸಿ.ಬಿ.ಪಾಟೀಲ ಓಕಳಿ, ಕೈಲಾಸ ಪಾಟೀಲ ಅವರು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ವಿರೋಧಿ ಅಲೆ ಇದ್ದು, ಈಶ್ವರ ಖಂಡ್ರೆ ಸುಲಭವಾಗಿ ಜಯ ಸಾಧಿಸಲಿದ್ದಾರೆ’ ಎಂದು ಹೇಳಿದರು.

‘ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಅವರು ರಜಾಕರ ವಿರುದ್ಧ ಹೋರಾಟ ಮಾಡಿದ್ದಾರೆ. ಗಡಿ ಭಾಗದಲ್ಲಿ ಕನ್ನಡವನ್ನು ಕಟ್ಟಿ, ಬೆಳೆಸಿದ್ದಾರೆ. ಈಶ್ವರ ಕೂಡ ಸಚಿವರಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಅವರ ಜಯ ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

‘ಖೂಬಾ ಅವರು ರಾಮದೇವ ಬಾಬಾ ಅವರ ಪತಂಜಲಿ ಉತ್ಪನ್ನಗಳ ಮಾರ್ಕೆಟಿಂಗ್ ಮಾಡಿದ್ದಾರೆಯೇ ಹೊರತು ರಾಜಕೀಯವಾಗಿ ಏನೂ ಮಾಡಿಲ್ಲ. ಹೀಗಾಗಿ ಕ್ಷೇತ್ರದ ಜನ ಬೇಸತ್ತಿದ್ದಾರೆ’ ಎಂದರು.

ಸಿ.ಬಿ.ಪಾಟೀಲ ಓಕಳಿ ಮಾತನಾಡಿ, ‘ಬೀದರ್ ಮತಕ್ಷೇತ್ರದ 4 ಲಕ್ಷ ಕುಟುಂಬಗಳ ಪೈಕಿ ಇದುವರೆಗೆ 2.50 ಲಕ್ಷ ಕುಟುಂಬಗಳನ್ನು ವಿವಿಧ ಮಾಧ್ಯಮಗಳ ಮೂಲಕ ಭೇಟಿ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಬಾರಿಯ ಚುನಾವಣೆಯಲ್ಲಿ ರಾಮಂದಿರ ವಿಷಯವನ್ನು ಬದಿಗೆ ಸರಿಸಿ, ಪುಲ್ವಾಮಾ ಹಾಗೂ ಬಾಲಾಕೋಟ್ ಘಟನೆಗಳನ್ನು ಇಟ್ಟುಕೊಂಡು ಮತಯಾಚಿಸುತ್ತಿದೆ’ ಎಂದು ಆರೋಪಿಸಿದರು.

ಮುಖಂಡರಾದ ಹಣಮಂತಪ್ಪ ಭೂಸನೂರ, ಸೈಯದ್ ಮಜರ್ ಹುಸೇನ್, ಗಣೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT