ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಿಗೇ ಸವಾಲೊಡ್ಡಿದ ವೀರಯೋಧ

Last Updated 2 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ದಶಕದ ಹಿಂದೆ ಕಾಶ್ಮೀರದಲ್ಲಿ ಘಟಿಸಿದ್ದ ನೆಲಬಾಂಬ್ ಸ್ಫೋಟ ಕರ್ನಾಟಕದ ಯೋಧ ಆನಂದನ್ ಗುಣಶೇಖರನ್ ಅವರ ಎಡಗಾಲನ್ನು ಕಿತ್ತುಕೊಂಡಿತು. ಆದರೆ ಅವರ ಜೀವನಪ್ರೀತಿ, ಛಲವನ್ನು ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ.

ಆದ ದುರ್ಘಟನೆಗೆ, ಅಂಗವೈಕಲ್ಯದ ಜೀವನಕ್ಕೆ ದೂಡಿದ ವಿಧಿಯನ್ನು ನಿಂದಿಸುತ್ತ ಕೂರಲಿಲ್ಲ ಆನಂದ್. ತ್ರಿವರ್ಣ ಧ್ವಜದ ಮೇಲಿನ ಪ್ರೀತಿಗಾಗಿ ಸೇನೆಯನ್ನು ಸೇರಿದ್ದಾರೋ ಆ ಒಲವು ಮಾಸಿರಲಿಲ್ಲ. ವಿಧಿಗೇ ಸವಾಲೊಡ್ಡಿ ನಿಂತರು. ‘ಬ್ಲೇಡ್‌ ರನ್ನರ್‌’ ಆಗಿ ರೂಪುಗೊಂಡರು. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಭಾರತದ ಬಾವುಟ ಹೆಮ್ಮೆಯಿಂದ ಹಾರುವಂತೆ ಮಾಡಿದರು. ಈಚೆಗೆ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದಿದ್ದ ಪ್ಯಾರಾ ಏಷ್ಯನ್‌ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದು ಗಮನ ಸೆಳೆದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ‘ಬ್ಲೇಡ್‌ ರನ್ನರ್‌’ಎಂಬ ಹಿರಿಮೆಯೂ ಅವರದ್ದು. ಬೆಂಗಳೂರಿನ ನಿವಾಸಿಯೂ ಆಗಿರುವ ಅವರು, ಇಲ್ಲಿನ ಎಂ.ಇ.ಜಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸಾಧನೆಯ ಹಾದಿಯ ಬಗ್ಗೆ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

1.ಈ ಬಾರಿಯ ಏಷ್ಯನ್‌ ಕೂಟದಲ್ಲಿ ಎರಡು ಪದಕಗಳನ್ನು ಜಯಿಸಿದ್ದೀರಿ. ಈ ಸಾಧನೆ ಮಾಡಿದ ಭಾರತದ ಮೊದಲ‘ಬ್ಲೇಡ್‌ ರನ್ನರ್‌’ನೀವು. ಹೇಗನಿಸುತ್ತಿದೆ?

– 2014ರ ಏಷ್ಯನ್‌ ಕೂಟದಲ್ಲಿ ಮೊದಲ ಸಲ ಭಾಗವಹಿಸಿದ್ದೆ. ಆಗ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಿರಲಿಲ್ಲ. ಆ ನೋವು ಕಾಡುತ್ತಿತ್ತು. ಈ ಬಾರಿ ಶ್ರೇಷ್ಠ ಸಾಮರ್ಥ್ಯ ತೋರಬೇಕೆಂದು ಪಣ ತೊಟ್ಟಿದ್ದೆ. ಇದಕ್ಕಾಗಿ ಕಠಿಣ ತಾಲೀಮು ನಡೆಸಿದ್ದೆ. 100,200 ಮತ್ತು 400 ಮೀಟರ್ಸ್‌ ಓಟಗಳಲ್ಲಿ ಪದಕ ಗೆಲ್ಲಲೇಬೇಕೆಂಬುದು ಕನಸಾಗಿತ್ತು. ಜಪಾನ್‌ ಮತ್ತು ಸೌದಿ ಅರೇಬಿಯಾದ ಓಟಗಾರರಿಂದ ಪ್ರಬಲ ಪೈಪೋಟಿ ಎದುರಾಯಿತು. ಜೊತೆಗೆ ಮೂರು ವಿಭಾಗಗಳಲ್ಲೂ ಸತತವಾಗಿ (ಹೀಟ್ಸ್‌, ಸೆಮಿಫೈನಲ್‌) ಓಡಿ ಸಾಕಷ್ಟು ದಣಿದಿದ್ದೆ. ಇದರ ನಡುವೆಯೂ 400 ಮೀಟರ್ಸ್‌ನಲ್ಲಿ ಬೆಳ್ಳಿ ಮತ್ತು 200 ಮೀಟರ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದು ಖುಷಿ ನೀಡಿದೆ. ದೇಶಕ್ಕೆ ಪದಕ ಗೆದ್ದುಕೊಟ್ಟಿದ್ದು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಈ ಸಾಧನೆಯಿಂದ ಜವಾಬ್ದಾರಿ ಹೆಚ್ಚಿದೆ. ಮುಂದಿನ ಕೂಟದಲ್ಲಿ ಮೂರು ವಿಭಾಗಗಳಲ್ಲೂ ಚಿನ್ನದ ಪದಕ ಜಯಿಸಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು ಸಾಗುತ್ತೇನೆ.

2.2008, ಜೂನ್‌ 4ರ ಆ ಘಟನೆಯ ಬಗ್ಗೆ ಹೇಳಿ?

–2005ರಲ್ಲಿ ಭಾರತೀಯ ಸೇನೆ ಸೇರಿದೆ. ಅಲ್ಲಿ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. 2008ರ ಜೂನ್‌ 4ರಂದು ಜಮ್ಮು ಮತ್ತು ಕಾಶ್ಮೀರದ ಕುಪವಾರ ಜಿಲ್ಲೆಯ ತುಂಬ್ ಪ್ರದೇಶದಲ್ಲಿ ಪಹರೆಯಲ್ಲಿದ್ದೆ. ಆಗ ನೆಲಬಾಂಬ್‌ ಸ್ಫೋಟಿಸಿತ್ತು. ಘಟನೆಯ ನಂತರ ಪ್ರಜ್ಞೆ ತಪ್ಪಿತ್ತು. ಸಹೊದ್ಯೋಗಿಗಳು ಹೆಲಿಕಾಪ್ಟರ್‌ ಮೂಲಕ ಶ್ರೀನಗರಕ್ಕೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಎಡಗಾಲಿನ ಮಂಡಿಯ ಕೆಳಭಾಗವನ್ನು ಕತ್ತರಿಸಲೇಬೇಕು ಎಂದು ಹೇಳಿದಾಗ ಆಘಾತವಾಗಿತ್ತು. ಆಗಲೇ ಬದುಕು ಮುಗಿಯಿತು ಅಂದುಕೊಂಡಿದ್ದೆ. ಆಸ್ಪತ್ರೆಯಿಂದ ಮನೆಗೆ ಹೋದಾಗ ನನ್ನ ಸ್ಥಿತಿ ಕಂಡು ಎಲ್ಲರೂ ಮರುಗಿದರು. ಕೆಲಸ ಬಿಟ್ಟು ಮನೆಯಲ್ಲೇ ಇರು ಎಂದು ಅಪ್ಪ, ಅಮ್ಮ ಹೇಳಿದರು. ಆದರೆ ಮನಸ್ಸು ಒಪ್ಪಲಿಲ್ಲ.

3.ಕ್ರೀಡೆಯಲ್ಲಿ ಸಾಧನೆ ಮಾಡುದ ಛಲ ಹುಟ್ಟಿದ್ದು ಹೇಗೆ?

ಮೊದಲಿನಿಂದಲೂ ಆಸಕ್ತಿ ಇತ್ತು. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೆ. ಆಸ್ಪತ್ರೆಯಲ್ಲಿದ್ದಾಗ ಅಮೆರಿಕದ ‘ಬ್ಲೇಡ್‌ ರನ್ನರ್‌’ಆಸ್ಕರ್‌ ಪಿಸ್ಟೋರಿಯಸ್‌ ಕುರಿತ ಲೇಖನ ಓದಿದೆ. ಅದು ನನ್ನಲ್ಲಿ ಹೊಸ ಸ್ಫೂರ್ತಿ ತುಂಬಿತು. ಆತ ಎರಡು ಕಾಲಿಲ್ಲದಿದ್ದರೂ ಅಷ್ಟೊಂದು ಸಾಧನೆ ಮಾಡಿದ್ದಾನೆ. ನಾನ್ಯಾಕೆ ಕೊರಗುತ್ತಾ ಕೂರಬೇಕು. ಆತನಂತೆ ಜಗಮೆಚ್ಚುವ ಸಾಧನೆ ಮಾಡಲೇಬೇಕು ಎಂದು ನಿರ್ಧರಿಸಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮರದ ಕಾಲು ಅಳವಡಿಸಿ ಅಭ್ಯಾಸ ನಡೆಸಿದೆ. 2012ರಲ್ಲಿ ಮರದ ಕಾಲಿನೊಂದಿಗೆ ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸಿದೆ. ರಸ್ತೆಯಲ್ಲಿ ಓಡುವಾಗ ಮರದ ತುಂಡು ಮೊಣಕಾಲಿಗೆ ತಾಗಿದಾಗಲೆಲ್ಲಾ ವಿಪರೀತ ನೋವಾಗುತ್ತಿತ್ತು. ಹೀಗಿದ್ದರೂ ಎದೆಗುಂದದೆ 2.5 ಕಿಲೊ ಮೀಟರ್‌ ಓಡಿದ್ದೆ.

4. ಅಂತರರಾಷ್ಟ್ರೀಯ ಕೂಟದಲ್ಲಿ ನೀವು ಮೊದಲು ಪದಕ ಜಯಿಸಿದ್ದು ಯಾವಾಗ?

2014ರ ಜೂನ್‌ನಲ್ಲಿ ಟ್ಯುನಿಷಿಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್‌ ಗ್ರ್ಯಾನ್‌ ಪ್ರೀ ಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದೆ.. ಆ ಕೂಟದಲ್ಲಿ 200 ಮೀಟರ್ಸ್‌ ಹಾಗೂ 4X100 ಮೀಟರ್ಸ್‌ ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿದ್ದೆ. 100 ಮೀಟರ್ಸ್‌ ಓಟದಲ್ಲಿ ಬೆಳ್ಳಿಯ ಸಾಧನೆ ಮೂಡಿಬಂದಿತ್ತು. ಹೀಗಾಗಿ ಅದೇ ವರ್ಷ ಇಂಚೇನ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ಲಭಿಸಿತ್ತು. 2015ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಆರ್ಮಿ ಪ್ಯಾರಾ ಕ್ರೀಡಾಕೂಟದಲ್ಲೂ ಪದಕಗಳ ಸಾಧನೆ ಮಾಡಿದ್ದೆ. ಅದೇ ವರ್ಷ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ತಲಾ ಒಂದು ಚಿನ್ನ ಮತ್ತು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದೆ. ಅದು ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು.

5.ಏಷ್ಯನ್‌ ದಾಖಲೆಯ ಬಗ್ಗೆ ಹೇಳಿ?

2015ರ ವಿಶ್ವ ಮಿಲಿಟರಿ ಕ್ರೀಡಾಕೂಟದ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ 24.04 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಬಾರಿ ಏಷ್ಯನ್‌ ದಾಖಲೆ ನಿರ್ಮಿಸಿದ್ದೆ. 2016ರಲ್ಲಿ ದುಬೈಯಲ್ಲಿ ನಡೆದಿದ್ದ ಏಷ್ಯಾ ಒಸೀನಿಯಾ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 400 ಮೀಟರ್ಸ್‌ನಲ್ಲಿ 54.67 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಚೀನಾದ ಲೂಯಿ ಜಿಂಗ್‌ ಅವರ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದೆ.

6.ಸೇನೆಯ ಅಧಿಕಾರಿಗಳ ಬೆಂಬಲದ ಕುರಿತು

ಸೇನೆಯ ಅಧಿಕಾರಿಗಳ ಬೆಂಬಲ ಮತ್ತು ಪ್ರೋತ್ಸಾಹದಿಂದಲೇ ಎತ್ತರದ ಸಾಧನೆ ಮಾಡಲು ಸಾಧ್ಯವಾಗಿದೆ.‘ಬ್ಲೇಡ್‌ ರನ್ನರ್‌’ಗಳ ಬಗ್ಗೆ ಅಂತರ್ಜಾಲದಲ್ಲಿ ಓದಿ ತಿಳಿದುಕೊಂಡ ನಂತರ ಮೇಲಧಿಕಾರಿಗಳ ಬಳಿ ಹೋಗಿ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡುವ ಕನಸಿನ ಬಗ್ಗೆ ಹೇಳಿದೆ. ಅವರು ನನ್ನ ಮನವಿಗೆ ಸ್ಪಂದಿಸಿದರು. ಐರ್ಲೆಂಡ್‌ನಿಂದ ಐದು ಲಕ್ಷ ಬೆಲೆಯ ‘ರನ್ನಿಂಗ್‌ ಬ್ಲೇಡ್‌‌’ತರಿಸಿಕೊಟ್ಟರು. ಜೊತೆಗೆ ಅಭ್ಯಾಸಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಟ್ಟರು. ‘ರನ್ನಿಂಗ್ ಬ್ಲೇಡ್‌’ಅನ್ನು ಆರು ತಿಂಗಳಿಗೊಮ್ಮೆ ಬದಲಿಸಬೇಕು. ಇದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಸೇನೆಯೇ ಭರಿಸುತ್ತಿದೆ.

7.ನಿಮ್ಮ ಕೋಚ್‌ ಬಗ್ಗೆ ಹೇಳಿ?

ಮೊಹಮ್ಮದ್‌ ಅವರು ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಒಲಿಂಪಿಯನ್‌ಗಳಾದ ಎಂ.ಆರ್‌.ಪೂವಮ್ಮ ಮತ್ತು ಅರೋಕ್ಯ ರಾಜೀವ್‌ ಅವರಿಗೂ ಅವರೇ ತರಬೇತಿ ನೀಡುತ್ತಾರೆ. ತರಬೇತಿಯ ವೇಳೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಾರೆ. ಹೊಸ ತಂತ್ರಗಳನ್ನು ಹೇಳಿಕೊಡುತ್ತಾರೆ.

8.ಮುಂದಿನ ಗುರಿ?

ಮುಂದಿನ ವರ್ಷ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ವಿಶ್ವ ಮಿಲಿಟರಿ ಕ್ರೀಡಾಕೂಟ ನಡೆಯುತ್ತವೆ. ಅವುಗಳಲ್ಲಿ ಚಿನ್ನದ ಪದಕ ಜಯಿಸ ಬೇಕು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಪದಕ ಜಯಿಸುವ ಮಹಾದಾಸೆ ಇದೆ. ಇದಕ್ಕಾಗಿ ಕಠಿಣ ತಾಲೀಮು ನಡೆಸುತ್ತಿದ್ದೇನೆ.

9. ನೀವು ಎಲ್ಲಿ ಅಭ್ಯಾಸ ಮಾಡುತ್ತೀರಿ?

ಪ್ಯಾರಾ ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲೇ ನಿತ್ಯ ತಾಲೀಮು ನಡೆಸುತ್ತಿದ್ದೆ. ಈಗ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT