ಮಂಗಳವಾರ, ಸೆಪ್ಟೆಂಬರ್ 28, 2021
25 °C

ಕಲಬುರ್ಗಿ: ಆಶಾ ಕಾರ್ಯಕರ್ತೆಯರಿಗೆ ಭತ್ಯೆ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಶುಕ್ರವಾರ ನಡೆದ ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ 500ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಿದ್ದು, ಅವರಿಗೆ ಖರ್ಚು, ವೆಚ್ಚದ ಭತ್ಯೆ ನೀಡದೇ ಹಾಗೇ ಕಳಿಸಲಾಗಿದೆ. ಕೂಡಲೇ ದಿನದ ಭತ್ಯೆ, ಪ್ರಯಾಣದ ಖರ್ಚನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ವಿ.ಜಿ. ದೇಸಾಯಿ, ಪಾಲಿಕೆ ಚುನಾವಣೆ ಕಾರ್ಯದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯಾಧಿಕಾರಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸಿದ್ದಾರೆ. ಇವರು ದೂರದ ಹಳ್ಳಿಗಳಿಂದ ತಮ್ಮ ಸ್ವಂತ ಹಣದಲ್ಲಿ ಸಾರಿಗೆ ವೆಚ್ಚ ಭರಿಸಿದ್ದಾರೆ. ನಗರಕ್ಕೆ ಬಂದ ನಂತರ ಆಟೊ ಚಾರ್ಜ್, ಉಪಹಾರ, ಊಟದ ಸಲುವಾಗಿ ನೂರಾರು ರೂಪಾಯಿ ಖರ್ಚು ಮಾಡಿದ್ದಾರೆ. ಅಲ್ಲದೆ ಬಹುಪಾಲು ಆಶಾ ಕಾರ್ಯಕರ್ತೆಯರು ಗುರುವಾರ ರಾತ್ರಿಯೇ ನಗರಕ್ಕೆ ಬಂದು ವಾಸ್ತವ್ಯ ಮಾಡಿದ್ದಾರೆ. ಆದರೆ ಅವರಿಗೆ ಇಲಾಖೆಯಿಂದಾಗಲಿ ಅಥವಾ ಚುನಾವಣಾಧಿಕಾರಿಗಳಿಂದಾಗಲಿ ಸೌಲಭ್ಯ ಸಹಕಾರ ಸಿಗಲಿಲ್ಲ ಎಂದು ಆರೋಪಿಸಿದರು.

ಕೆಲವು ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಇನ್ನಿತರ ಚುನಾವಣೆ, ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲಿ ಕೆಲಸಕ್ಕೆ ನಿಯೋಜಿಸಿದಾಗಲೂ ಇದೇ ಪರಿಸ್ಥಿತಿ ಅನುಭವಿಸಿದ್ದಾರೆ. ಆದ್ದರಿಂದ ಇಲಾಖೇತರ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಿದ ಆಶಾ ಕಾರ್ಯಕರ್ತೆಯರಿಗೆ ಸೂಕ್ತವಾಗಿ ಖರ್ಚು–ವೆಚ್ಚಗಳ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ನಗರ ಸಂಚಾಲಕಿ ಜಯಶ್ರೀ, ರಾಧಾ ಹಾಗೂ ವಿವಿಧ ಗ್ರಾಮಗಳಿಂದ ಬಂದಿದ್ದ ಆಶಾ ಕಾರ್ಯಕರ್ತೆಯರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.