ಬುಧವಾರ, ಸೆಪ್ಟೆಂಬರ್ 22, 2021
23 °C
ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಆಶಾ ಕಾರ್ಯಕರ್ತೆಯರ ಹಕ್ಕೊತ್ತಾಯ

ಮೂರು ತಿಂಗಳ ಗೌರವಧನ ಬಿಡುಗಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಆಶಾ ಕಾರ್ಯಕರ್ತೆಯರ ಬಾಕಿ ಇರುವ 3 ತಿಂಗಳ ಮಾಸಿಕ ಗೌರವಧನ ಕೂಡಲೇ ಬಿಡುಗಡೆ ಮಾಡಬೇಕು. ಕೋವಿಡ್ ಕೆಲಸದಲ್ಲಿರುವ ಆಶಾಗಳ ರಕ್ಷಣೆಗಾಗಿ ಅಗತ್ಯ ಇರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್‌ಗಳನ್ನು ಒದಗಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ವಿವಿಧೆಡೆ ಭಿತ್ತಿಪತ್ರ ಹಿಡಿದು ಹಕ್ಕೊತ್ತಾಯ ಮಂಡಿಸಿದರು.

‘ಕೊರೊನಾ ಮೊದಲನೆ ಅಲೆಯಲ್ಲಿ ತೀರಿ ಹೋದ ಆಶಾ ಕುಟುಂಬಗಳಿಗೆ ಕೋವಿಡ್ ವಿಮೆ ಹಣ ನೀಡಬೇಕು. ಆಶಾಗಳಿಗೆ ₹ 5 ಸಾವಿರ ಕೋವಿಡ್ ವಿಶೇಷ ಪ್ರೋತ್ಸಾಹ ಧನ ನೀಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮನೆಗಳಿಂದ ಬೇಡಿಕೆಗಳ ಪೋಸ್ಟರ್ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸತತ ಮೂರು ತಿಂಗಳ ಸಂಬಳ ಬಾಕಿ ಇರುವುದರಿಂದ ಕಾರ್ಯಕರ್ತೆಯರಿಗೆ ಮನೆ ಬಾಡಿಗೆ ಕಟ್ಟುವುದು, ದಿನಸಿಗಳನ್ನು ಕೊಂಡು ತರುವುದು ಸಹ ಕಷ್ಟವಾಗಿದೆ. ಆದರೂ ಸರ್ಕಾರ ನಿಯಮಿತವಾಗಿ ಸಂಬಳ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಕೋರೊನಾದ 2ನೇ ಅಲೆ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ 1900 ಆಶಾಗಳು ತಮ್ಮ ಜೀವನವನ್ನೇ ಪಣವಿಟ್ಟು ಇಲಾಖೆ ನೀಡಿದ ಕೆಲಸಗಳನ್ನು ಮಾಡುತ್ತಿದ್ದರು. ಯಾವುದೇ ಸುರಕ್ಷಾ ಸಾಧನೆಗಳನ್ನು ನೀಡದೆಯೇ ಅವರ ಕೈಗೆ ಆಕ್ಸಿಮೀಟರ್, ಬಿ.ಪಿ ಮೀಟರ್‌ಗಳನ್ನು ಕೊಟ್ಟು ಸೋಂಕಿತರನ್ನು ಪರೀಕ್ಷೆ ಮಾಡಲು ಕಳಿಸುವರು. ಇದರಿಂದಾಗಿ ನಮ್ಮ ಜಿಲ್ಲೆಯಲ್ಲಿ ಸುಮಾರು 48 ಆಶಾ ಕಾರ್ಯಕರ್ತೆಯರು ಸೋಂಕಿಗೆ ಒಳಗಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಕುಟುಂಬಗಳು ಸಹ ಸೋಂಕಿಗೆ ಒಳಗಾಗಿವೆ’ ಎಂದು ಸಂಘದ ಜಿಲ್ಲಾ ಸಂಚಾಲಕ ವಿ.ಜಿ. ದೇಸಾಯಿ ತಿಳಿಸಿದರು.

ಕಷ್ಟದ ಪರಿಸ್ಥಿತಿಯಲ್ಲಿಯೂ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ವಿಷಮಶೀತ ಜ್ವರ ಹಾಗೂ ತೀವ್ರ ಉಸಿರಟದ ತೊಂದರೆಯ ಬಗ್ಗೆ ತಪಾಸಣೆ ನಡೆಸುವುದು, ಮಾತ್ರೆ ಹಂಚುವುದು, ಕೋವಿಡ್ ಕಿಟ್ ಹಂಚುವುದು, ಲಸಿಕೆಗಾಗಿ ಮನವೊಲಿಸುವುದು, ಕೋವಿಡ್ ಸೊಂಕಿತರ ಪಟ್ಟಿ ಮಾಡುವುದು, ಸೋಂಕಿತರ ಮನೆಗೆ ಹೋಗಿ ಅವರ ಆರೋಗ್ಯದ ಮಾಹಿತಿಯನ್ನು ಸಂಗ್ರಹಿಸಿ ಇಲಾಖೆಗೆ ತಿಳಿಸುವದು ಇಂತಹ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ಆದರೆ ಇವರಿಗೆ ದುಡಿಮೆಗೆ ತಕ್ಕ ಸಂಬಳ, ಸುರಕ್ಷತಾ ಸೌಲಭ್ಯಗಳನ್ನು ನೀಡದೆ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸರ್ಕಾರ ಇವುಗಳನ್ನು ಕೂಡಲೇ ಒದಗಿಸಬೇಕೆಂದು ಎಂದು ಒತ್ತಾಯಿಸಿದರು.

ಸಂಘದ ಮುಖಂಡ ಎಸ್‌.ಎಂ. ಶರ್ಮಾ, ಜಿ .ರಾಧಾ ಹಾಗೂ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು