ಗುರುವಾರ , ಫೆಬ್ರವರಿ 25, 2021
28 °C
ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಸಾಧಕರು, ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ

‘ಲಾಬಿಯಿಂದ ಪ್ರಶಸ್ತಿಗಳ ಮೌಲ್ಯ ಕುಸಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡಿ ಪಡೆಯುವ ಪ್ರಶಸ್ತಿಗಳಿಗೆ ಬೆಲೆಯೇ ಇಲ್ಲವಾಗಿದೆ. ಸಾಧನೆಯನ್ನು ಗುರುತಿಸಿ ನೀಡುವ ಪ್ರಶಸ್ತಿಗೆ ಮಾತ್ರ ಜನಮನ್ನಣೆ ಸಿಗುತ್ತದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ರಾಜೇಂದ್ರ ಯರನಾಳೆ ಹೇಳಿದರು.

ನಗರದಲ್ಲಿ ಮಂಗಳವಾರ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜದಲ್ಲಿ ಪ್ರಶಸ್ತಿಗಳ ಬಗ್ಗೆ ಭಿನ್ನಭಿನ್ನ ಅಭಿಪ್ರಾಯಗಳಿವೆ. ಪ್ರಶಸ್ತಿ ಪಡೆದವರ ಸಾಧನೆಯನ್ನು ಜನರು ಗುರುತಿಸಿದಾಗ ಮಾತ್ರ ಅದಕ್ಕೆ ಮೌಲ್ಯ ಬರಲಿದೆ. ಕಸಿದುಕೊಳ್ಳುವ ಪ್ರಶಸ್ತಿಗಿಂತ ಗುರುತಿಸಿ ಕೊಡುವ ಪ್ರಶಸ್ತಿ ಬಹಳ ದೊಡ್ಡದು’ ಎಂದರು.

ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ‘ಅತ್ಯುತ್ತಮ ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದೆ’ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್, ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿ ಮಾತನಾಡಿದರು. ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 

‘ಅರ್ಜಿ ಹಾಕಿ ಹುಟ್ಟಿದವರ ನಡುವೆ’ ಕೃತಿಗೆ ಕೋಲಾರದ ಗುರುಮೂರ್ತಿ, ‘ರೆಕ್ಕೆ ಬಲಿತ ಹಕ್ಕಿ’ ಕೃತಿಗೆ ಗೋಕಾಕನ ಶಕುಂತಲ ಹಿರೇಮಠ, ‘ಹೈಕುಗಳು’ ಕೃತಿಗೆ ಹುಮ್ನಾಬಾದ್‌ ಜಯದೇವಿ ಗಾಯಕವಾಡ ಅವರಿಗೆ ‘ಅವ್ವ’ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಎಸ್.ಎಸ್. ಗುಬ್ಬಿ, ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಬ್ಬರಾವ್ ಕುಲಕರ್ಣಿ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕ ಶಂಕರಲಿಂಗ ಹೆಂಬಾಡಿ ಅವರಿಗೆ ‘ಅವ್ವ ಗೌರವ’ ಪ್ರಶಸ್ತಿ ನೀಡಲಾಯಿತು.

ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಹೊಸ್ಮನಿ, ಮುದ್ರಣಾಲಯ ಇಲಾಖೆ ನಿರ್ದೇಶಕ ಲಕ್ಷ್ಮೀನಾರಾಯಣ, ಪ್ರತಿಷ್ಠಾನದ ಕಾರ್ಯದರ್ಶಿ ಶ್ವೇತಾ ವಡ್ಡನಕೆರಿ, ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಉಪನಿರ್ದೇಶಕ ಅಜಯಕುಮಾರ, ಅಪ್ಪಾರಾವ್ ಅಕ್ಕೋನಿ, ಉಪೇಂದ್ರ ಪಾಟೀಲ, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ವಡ್ಡನಕೇರಿ, ಶಿವರಂಜನ್ ಸತ್ಯಂಪೇಟೆ, ಮೈಪಾಲ್ ರೆಡ್ಡಿ ಮುನ್ನೂರ್, ಗವಿಸಿದ್ಧಪ್ಪ ಪಾಟೀಲ, ಶಿವಶರಣಪ್ಪ ಬಿರಾದಾರ, ಬಸವರಾಜ ವಡ್ಡನಕೇರಿ, ಬಸವರಾಜ ಜನಕಟ್ಟಿ ಇದ್ದರು.

ಬಿ.ಎಚ್. ನಿರಗುಡಿ ಕಾರ್ಯಕ್ರಮ ನಿರೂಪಿಸಿದರು. ನಾಗಪ್ಪ ಗೋಗಿ ಅವರು ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು