ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ: ಬಂಜಾರ ಸಮುದಾಯದಿಂದ ಪ್ರತಿಭಟನೆ

ಮೀಸಲಾತಿ ಹಂಚಿಕೆ ಅವೈಜ್ಞಾನಿಕ: ಆರೋಪ
Last Updated 31 ಮಾರ್ಚ್ 2023, 16:30 IST
ಅಕ್ಷರ ಗಾತ್ರ

ಕಲಬುರಗಿ: ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು ಖಂಡಿಸಿ ಬಂಜಾರ, ಭೋವಿ, ಕೊರಚ, ಕೊರಮ ಮುಂತಾದ ಸಮುದಾಯದ ಜನರು ನಗರದಲ್ಲಿ ಶುಕ್ರವಾರ ಬೃಹತ್ ‍ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದ ಡಾ. ಉಮೇಶ ಜಾಧವ, ಸಚಿವ ಪ್ರಭು ಚವ್ಹಾಣ, ಶಾಸಕರಾದ ಡಾ. ಅವಿನಾಶ್ ಜಾಧವ ಹಾಗೂ ಪಿ. ರಾಜೀವ್ ಅವರ ಭಾವಚಿತ್ರಕ್ಕೆ ಸೀರೆ ಉಡಿಸಿದ ಬ್ಯಾನರ್ ಪ್ರದರ್ಶಿಸಿ ನಂತರ ಅಗ್ನಿಸ್ಪರ್ಶ ಮಾಡಿದರು.

‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಒಪ್ಪುವುದಿಲ್ಲ ಎನ್ನುತ್ತಲೇ ಆ ವರದಿಯನ್ನು ಆಧರಿಸಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಿ ಒಳ ಮೀಸಲಾತಿ ಹಂಚಿಕೆ ಮಾಡಿರುವುದು ನ್ಯಾಯ ಸಮ್ಮತವಲ್ಲ. ಒಳಮೀಸಲಾತಿಯೇ ಅಸಂವಿಧಾನಿಕವಾಗಿರುವಾಗ ಗುಂಪು 3ರ ಹೆಸರಿನಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ 4.5ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಸಹ ಅವೈಜ್ಞಾನಿಕ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಇದು ಭಾರತದ ಸಂವಿಧಾನ ಮತ್ತು ನಮ್ಮ ಸಮುದಾಯಗಳಿಗೆ ಮಾಡಿದ ಮಾಡಿದ ಮಹಾದ್ರೋಹ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಹೋದರ ಸಮುದಾಯಗಳ ಕುರಿತು ವಸ್ತುನಿಷ್ಠ ಅಧ್ಯಯನ ಮಾಡಿರುವುದಿಲ್ಲ. ಈ ಉಪಸಮಿತಿ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಏಕತೆ ಹಾಳು ಮಾಡಲು ಸ್ಪರ್ಶರು, ಅಸ್ಪರ್ಶರು ಎಲ್ಲ ಸೌಲಭ್ಯ ಪಡೆದವರು, ಮುಂದುವರೆದವರು, ಅಭಿವೃದ್ಧಿ ಆಗಿರುವವರು, ಎಡಗೈ, ಬಲಗೈ ಇತ್ಯಾದಿ ಅನಗತ್ಯ ಅಂಶಗಳನ್ನು ಪ್ರಸ್ತಾಪಿಸುವ ಮೂಲಕ ವಿಭಜಿಸಲಾಗಿದೆ’ ಎಂದು ಅವರು ಹೇಳಿದರು.

‘ದೇಶದ ಸಂವಿಧಾನದ ಪ್ರಕಾರ, ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆ ಅಥವಾ ರದ್ದು ಮಾಡುವುದು ಕೇಂದ್ರ ಸರ್ಕಾರದ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ರಾಜ್ಯ ಸರ್ಕಾರವು ಅನಗತ್ಯ ಹಸ್ತಕ್ಷೇಪ ಮಾಡದಂತೆ ಸೂಚಿಸಬೇಕು’ ಎಂದರು.

ಚಾರಿತ್ರಿಕ ಆಧಾರದ ಮೇಲೆ ಸಂವಿಧಾನದ ಸ್ಥಾನಮಾನ ಪಡೆದಿರುವ ಈ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಎಸ್ಸಿ ಪಟ್ಟಿಯಿಂದ ಹೊರ ಹಾಕಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ನಮ್ಮ ಸಮುದಾಯಗಳಿಗೆ ದೊಡ್ಡ ಸಹಾಯ ಮಾಡಿದ್ದೇವೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಈ ವ್ಯರ್ಥ ಪ್ರಯತ್ನಗಳ ಮೂಲಕ ಸಮುದಾಯವನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ’ ಎಂದರು.

ಶಿಕಾರಿಪುರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆ ಹಿಂಪಡೆಯಬೇಕು. ಬಂಧಿತರನ್ನು ಬಿಡುಗಡೆ ಮಾಡಬೇಕು. ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬಂಜಾರಾ ಶಕ್ತಿ ಪೀಠದ ಬಳಿರಾಮ ಮಹಾರಾಜರು, ಮುಗಳನಾಗಾಂವದ ಯಲ್ಲಾಲಿಂಗ ಪುಣ್ಯಾಶ್ರಮದ ಜೇಮಸಿಂಗ ಮಹಾರಜರು, ಕಲಕೋರಾದ ಅನೀಲ ಮಹಾರಾಜ, ಸೇವಾಲಾಲ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಾಮ ಪವಾರ, ಪ್ರಧಾನ ಕಾರ್ಯದರ್ಶಿ ವಿನೋದ ಎಲ್. ಚವ್ಹಾಣ, ಸಹ ಕಾರ್ಯದರ್ಶಿ ಚಂದು ಜಾಧವ, ಗೋರಸಿಕವಾಡಿ ಸಾಮಾಜಿಕ ಚಳವಳಿಯ ಶ್ರೀಧರ ಚವ್ಹಾಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾರಾಯಣ ಪವಾರ, ಚಿತ್ತಾಪುರ ಪುರಸಭೆ ಸದಸ್ಯ ಜಗದೀಶ ಚವ್ಹಾಣ, ಕೊರಮ ಸಮಾಜದ ಯುವ ಮುಖಂಡ ಸುನೀಲ್ ಮಾನ್ಪಡೆ, ಜಗನ್ನಾಥ ಭಜಂತ್ರಿ, ಮಲ್ಲೇಶ ಭಜಂತ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT