ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗತ್ ಕಂಡ ಸಮಾಜವಾದಿ ಕನಸು ನನಸಾಗಲಿ: ಸಾಹಿತಿ ಕಾಶಿನಾಥ ಅಂಬಲಗೆ ಆಶಯ

ಶಹೀದ್ 114ನೇ ಜನ್ಮದಿನಾಚರಣೆಯಲ್ಲಿ ಸಾಹಿತಿ ಕಾಶಿನಾಥ ಅಂಬಲಗೆ ಆಶಯ
Last Updated 10 ಅಕ್ಟೋಬರ್ 2020, 2:32 IST
ಅಕ್ಷರ ಗಾತ್ರ

ಕಲಬುರ್ಗಿ: ಶೋಷಣೆ ಇಲ್ಲದ ಸಮಾಜವನ್ನು ಭಗತ್ ಸಿಂಗ್ ಹಂಬಲಿಸಿದ್ದರು. ಅದನ್ನು ನನಸು ಮಾಡುವ ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ ಎಂದು ಸಾಹಿತಿ ಪ್ರೊ.ಕಾಶಿನಾಥ ಅಂಬಲಗೆ ಅಭಿಪ್ರಾಯಪಟ್ಟರು.

ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ಶುಕ್ರವಾರ ಎಐಡಿಎಸ್‌ಓ, ಎಐಡಿವೈಓ ಹಾಗೂ ಎಐಎಂಎಸ್‌ಎಸ್‌ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದಶಹೀದ್ ಭಗತ್ ಸಿಂಗ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಗತ್‍ ಸಿಂಗ್‍ ಕ್ರಾಂತಿಯ ಕಿಡಿಯಾಗಿದ್ದು, ಅವರ ಕುಟುಂಬವೇ ಒಂದು ಕ್ರಾಂತಿಕಾರಿ ಕುಟುಂಬವಾಗಿತ್ತು. ಎಳೆಯ ವಯಸ್ಸಿನಲ್ಲಿಯೇ ತಂದೆ ಹಾಗೂ ಚಿಕ್ಕಪ್ಪಂದಿರಿದ್ದ ಸ್ಪೂರ್ತಿ ಪಡೆದ ಭಗತ್‍ಸಿಂಗ್‍ರಿಗೆ ಸ್ವತಂತ್ರ ಭಾರತದ ಕನಸು ಚಿಗುರೊಡೆಯಿತು.ಜಲಿಯನ್ ವಾಲಾಬಾಗ್ ಘಟನೆ ಎಳೆಯ ಭಗತ್‍ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಜ್ಞಾನದ ಹಸಿವು ಅಪಾರವಾಗಿತ್ತು. ಆದ್ದರಿಂದಲೇ ಅವರು ಭಾರತದ ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ಪರಕೀಯರು ಹೋದ ಮೇಲೆ ನಮ್ಮವರೇ ನಮ್ಮವರನ್ನು ತುಳಿಯುವ ದಿನಗಳು ಬರಬಾರದೆಂದು ಸಮಾಜವಾದಿ ಭಾರತದ ಕನಸನ್ನು ಕಂಡು, ಹೋರಾಟಗಳನ್ನು ಕೊನೆಯ ಉಸಿರಿರುವರೆಗೂ ಮಾಡಿದರು ಎಂದು ಹೇಳಿದರು.

ಎಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಪ್ರೊ. ಸಂಜಯ ಮಾಕಲ್‍ ಮಾತನಾಡಿ, ಸಮಾಜದಲ್ಲಿ ಜನರು ಹಿಂದೆಂದಿಗಿಂತಲೂ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ಅಸಮಾನತೆ, ನಿರುದ್ಯೋಗ, ಬಡತನ, ಜಾತಿ–ಧರ್ಮಗಳ ತಿಕ್ಕಾಟಗಳು ಮಹಿಳೆಯರ ಮೇಲಿನ ದೌರ್ಜನ್ಯದಂತಹ ಹಲವಾರು ಪಿಡುಗುಗಳಿಂದ ತೀವ್ರವಾದ ಸಂಕಷ್ಟದಲ್ಲಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಭಗತ್‍ಸಿಂಗ್ ಉತ್ತರವಾದ ಸಮಾನತೆಯ ಸಮಾಜಕ್ಕಾಗಿ ನಾವೆಲ್ಲರೂ ದುಡಿದಾಗ ಮಾತ್ರ ಭಗತ್‍ಸಿಂಗ್‍ರಿಗೆ ನಿಜವಾಗಿ ಗೌರವ ಅರ್ಪಿಸಿದಂತಾಗುತ್ತದೆ.

ಕಾರ್ಮಿಕ ಮುಖಂಡ ಎಸ್.ಎಂ. ಶರ್ಮಾ ಮಾತನಾಡಿ, ಭಗತ್‍ ಸಿಂಗ್‍ರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಸ್ಪಷ್ಟವಾಗಿ ವೈಚಾರಿಕವಾದ ನಿಲುವಿತ್ತು. ಅಂದಿನ ಕ್ರಾಂತಿಕಾರಿಗಳ ಮೇಲೆ ರಷ್ಯನ್ ಸಮಾಜವಾದಿ ಮಹಾನ್ ಕ್ರಾಂತಿಯ ಪ್ರಭಾವವಿತ್ತು. ಆದ್ದರಿಂದಲೇ ಅವರು ‘ಸ್ವಾತಂತ್ರ್ಯ ಪಡೆಯುವುದು ನಮ್ಮ ಮೊದಲ ಹೆಜ್ಜೆ; ನಮ್ಮ ಅಂತಿಮ ಗುರಿಯಿರುವುದು ದುಡಿಯುವ ಜನತೆಯ ಅಧಿಕಾರವಿರುವ ಸಮಾಜದ ನಿರ್ಮಾಣ’ ಎಂದು ಹೇಳುತ್ತಿದ್ದರು. ಸಮಾಜವನ್ನು ಒಡೆದಾಳುತ್ತಿರುವ ಇಂದಿನ ಪ್ರಭುತ್ವದ ವಿರುದ್ಧ ಸಂಘಟಿತವಾಗಿ ಹೋರಾಡುವುದು ಅತ್ಯವಶ್ಯಕ ಎಂದು ಹೇಳಿದರು.

ಎಐಡಿವೈಓ ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್, ಎಐಎಂಎಸ್‍ಎಸ್ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಈರಣ್ಣ ಇಸಬಾ, ವಿ.ಜಿ. ದೇಸಾಯಿ, ಮಹೇಶ ಎಸ್.ಬಿ, ಸಂತೋಷ ಹಿರವೆ, ಹಣಮಂತ ಎಸ್.ಎಚ್, ಅಶ್ವಿನಿ, ವಿಶ್ವನಾಥ ಭೀಮಳ್ಳಿ, ಗೌರಮ್ಮ, ಮಲ್ಲಿನಾಥ ಸಿಂಘೆ, ಸ್ನೇಹಾ ಕಟ್ಟಿಮನಿ, ಮಲ್ಲಿನಾಥ ಹುಂಡೇಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT