ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಸ್ಮಾರ್ಟ್‌ ಸಿಟಿ ಪಟ್ಟಿಗೆ: ಕೇಂದ್ರ ಸಚಿವ ಭಗವಂತ ಖೂಬಾ ಭರವಸೆ

Last Updated 31 ಆಗಸ್ಟ್ 2021, 4:52 IST
ಅಕ್ಷರ ಗಾತ್ರ

ಕಲಬುರ್ಗಿ: ಕಳೆದ ಮೂರು ದಶಕಗಳಿಂದ ಮಹಾನಗರ ಪಾಲಿಕೆಯ ಆಡಳಿತ ಕಾಂಗ್ರೆಸ್‌ ಬಳಿಯೇ ಇದೆ. ಆದರೂ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಹೀಗಾಗಿ, ಈ ಬಾರಿ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಸ್ಮಾರ್ಟ್‌ ಸಿಟಿ ಪಟ್ಟಿಗೆ ಸೇರಿಸಿ ಅತ್ಯುತ್ತಮ ನಗರವನ್ನಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು, ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ದುರಾಡಳಿತದಿಂದ ಜನರು ರೋಸಿಹೋಗಿರುವುದು, ನಾನು ಹೋಗಿದ್ದ ಎಂಟು ವಾರ್ಡ್‌ಗಳಲ್ಲಿ ಕಂಡು ಬಂದಿದೆ. ಈ ಬಾರಿ ಬಿಜೆಪಿ 30ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಹಲವು ವರ್ಷಗಳ ಬೇಡಿಕೆಯಾದ ಸ್ಮಾರ್ಟ್‌ ಸಿಟಿ ಪಟ್ಟಿಗೆ ನಗರವನ್ನು ಸೇರಿಸಲಾಗುವುದು’ ಎಂದರು.

‘ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಿರಿ ಮೀರಿದೆ. ಕೆಲವೇ ಕೆಲವು ವಾರ್ಡ್‌ಗಳಿಗೆ ಬಹುತೇಕ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ತಾರತಮ್ಯಕ್ಕೆ ಕೊನೆ ಹಾಡಲಾಗುವುದು. ಕಾಂಗ್ರೆಸ್ ಮಾಡದೇ ಬಿಟ್ಟ ಎಲ್ಲ ಕೆಲಸಗಳನ್ನು ಕೈಗೆತ್ತಿಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.

‘ಕಳೆದ ಒಂದು ತಿಂಗಳಿಂದ ಪಕ್ಷದ ಮುಖಂಡರು ನಗರದಲ್ಲಿ ಬೀಡುಬಿಟ್ಟಿದ್ದು, ಪ್ರತಿ ವಾರ್ಡ್‌ಗಳಿಗೆ ತೆರಳಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದೇವೆ. ಕಲಬುರ್ಗಿ ನಗರದಲ್ಲಿ ಒಳಚರಂಡಿ, ರಸ್ತೆ, ಉದ್ಯಾನವನ, ಶುದ್ಧ ಕುಡಿಯುವ ನೀರು ಒದಗಿಸುವುದು ಸೇರಿದಂತೆ ಸ್ವಚ್ಛ ಸುಂದರ ನಗರವನ್ನಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡಿದ್ದೇವೆ’ ಎಂದರು.

ಸಮಯ ಬೇಕು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆ. ಹೊಸ ರೈಲು ಮಾರ್ಗದ ಸರ್ವೆ ಮಾಡಬೇಕು. ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಕಲಬುರ್ಗಿ ಆಳಂದ ಮಾರ್ಗವಾಗಿ ಲಾತೂರ್ ಸಂಪರ್ಕಿಸುವ ಹೊಸ ಮಾರ್ಗದ ಸರ್ವೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ವೆಂಕಟೇಶ ಪ್ರಸಾದ್, ಬಿಜೆಪಿ ಜಿಲ್ಲಾ ವಕ್ತಾರ ಅರುಣ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT