ಶನಿವಾರ, ನವೆಂಬರ್ 28, 2020
18 °C

ಭೀಮಾ ತೀರದ ಮನೆಗಳು ಜಲಾವೃತ: ಹೊಲದಲ್ಲಿ ಜನರ ಬಿಡಾರ!

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಭೀಮಾ ನದಿ ಪ್ರವಾಹದಿಂದಾಗಿ ಮನೆಗಳು ಮುಳುಗಿದ್ದರಿಂದ ತಾಲ್ಲೂಕಿನ ಸರಡಗಿ (ಬಿ) ಗ್ರಾಮದ ಕೆಲವರು ತಮ್ಮೆಲ್ಲ ಸಾಮಾನು, ಸರಂಜಾಮುಗಳೊಂದಿಗೆ ಊರ ಸಮೀಪದ ಹೊಲಗಳಲ್ಲಿ ಬಿಡಾರ ಹೂಡಿದ್ದಾರೆ. ಜಿಲ್ಲಾ ಆಡಳಿತ ಆರಂಭಿಸಿರುವ ಕಾಳಜಿ ಕೇಂದ್ರಗಳ ಬದಲು ತಾವೇ ಅಹಾರ ತಯಾರಿಸಿ ಉಣ್ಣುತ್ತಿದ್ದಾರೆ.

ಸೋಮವಾರ ಪ್ರವಾಹ ಸರಡಗಿ (ಬಿ) ಗ್ರಾಮವನ್ನು ಆವರಿಸಿಕೊಂಡಿದ್ದು, ಈ ವರೆಗೆ ನಿರಾಳರಾಗಿದ್ದ ಜನರು ಕುಟುಂಬ ಸಮೇತರಾಗಿ ಗಂಟು, ಮೂಟೆ ಕಟ್ಟಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದುದು ಕಂಡು ಬಂತು.

ಜಿಲ್ಲಾಡಳಿತ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದೆಯಾದರೂ ಅಲ್ಲಿ ಸಾಮಾನು ಸರಂಜಾಮುಗಳನ್ನು ಇಡುವಷ್ಟು ಜಾಗ ಇಲ್ಲ. ಹೀಗಾಗಿ, ಕೆಲ ಕುಟುಂಬಗಳವರು ಟ್ರ್ಯಾಕ್ಟರ್‌ನಲ್ಲಿ ಹಾಸಿಗೆ, ಹೊದಿಕೆ, ಬಟ್ಟೆ, ಗ್ಯಾಸ್ ಸಿಲಿಂಡರ್, ಒಲೆ, ದಿನಸಿ ವಸ್ತುಗಳನ್ನು ಹೇರಿಕೊಂಡು ಊರದ ಹೊರವಲಯದಲ್ಲಿರುವ ಹೊಲಗಳಿಗೆ ತೆರಳಿದರು.

ಸೋಮವಾರ ಮಧ್ಯಾಹ್ನದ ವೇಳೆಗೆ ಆಳೆತ್ತರದ ನೀರು ಸರಡಗಿ ಗ್ರಾಮದ ರಸ್ತೆಯಲ್ಲಿ ನಿಂತಿತ್ತು. ಹೀಗಾಗಿ ಇಡೀ ಗ್ರಾಮ ದ್ವೀಪವಾಗಿದ್ದು, ಹೊರಗಿನ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಕೆಲ ಸಾಹಸಿಗಳು ಮಾತ್ರ ಟ್ರ್ಯಾಕ್ಟರ್‌ ಬಳಸಿಕೊಂಡು ಗ್ರಾಮಕ್ಕೆ ಹೋಗಿ ಜನರನ್ನು ಕರೆತರುತ್ತಿದ್ದಾರೆ.

‘ಇನ್ನೂ ನೀರು ಬಿಡುತ್ತಾರೆ ಎಂಬ ಸುದ್ದಿ ಇದೆ. ಹಾಗಾಗಿ, ಊರಾಗ ಇರೋದು ಬ್ಯಾಡ ಅಂತ ಇಲ್ಲಿಗಿ ಬಂದೀವಿ. ಇನ್ನಷ್ಟು ನೀರು ಬಂತು ಅಂದ್ರ ಇನ್ನೊಂದಷ್ಟು ಮುಂದೆ ಹೋದರಾತು. ಏನ್ ಆದ್ರೂ ನೀರು ಇಳಿಯೂತನಕ ಇಲ್ಲಿಂದ ಹೋಗಬಾರ್ದು ಅಂತ ಮಾಡೇವಿ’ ಎಂದು ಹೊಲದಲ್ಲಿ ಸೊಸೆಯಂದಿರೊಂದಿಗೆ ಅಡುಗೆ ತಯಾರಿಯಲ್ಲಿದ್ದ ಗಂಗಾಬಾಯಿ ಹಡಗಿಲ್ ಹೇಳಿದರು.

‘ಗ್ರಾಮದಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಇನ್ನೂ ಯಾವಾಗ ನೀರು ಕಡಿಮೆಯಾಗುತ್ತದೋ ಗೊತ್ತಾಗುತ್ತಿಲ್ಲ’ ಎಂದು ಗ್ರಾಮಸ್ಥರಾದ ಸಿದ್ದಿ ಬಾಷಾ, ನಾಗೇಶ ಕಿರಣಗಿ ಆತಂಕದಿಂದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು