ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ: ಚಂದು ಪಾಟೀಲ ಶಹರ ಅಧ್ಯಕ್ಷ, ರದ್ದೇವಾಡಗಿಗೆ ಮತ್ತೆ ಮಣೆ

Published 14 ಜನವರಿ 2024, 17:57 IST
Last Updated 14 ಜನವರಿ 2024, 17:57 IST
ಅಕ್ಷರ ಗಾತ್ರ

ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗುರುವಾರ ನೂತನ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಕಲಬುರಗಿ ಶಹರ ಘಟಕಕ್ಕೆ ಕ್ರೆಡೆಲ್ ಮಾಜಿ ಅಧ್ಯಕ್ಷ ಚಂದ್ರಕಾಂತ (ಚಂದು) ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಕಲಬುರಗಿ ಗ್ರಾಮಾಂತರ ಜಿಲ್ಲೆಗೆ ಶಿವರಾಜ ಪಾಟೀಲ ರದ್ದೇವಾಡಗಿ ಅವರನ್ನೇ ಮುಂದುವರಿಸಿದ್ದಾರೆ. 

ಗ್ರಾಮಾಂತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಿ, ಅರುಣಕುಮಾರ ಪಾಟೀಲ ಕೊಡಲಹಂಗರಗಾ ಹಾಗೂ ಅವ್ವಣ್ಣ ಮ್ಯಾಕೇರಿ ಪೈಪೋಟಿ ನಡೆಸಿದ್ದರು. ಆದರೆ, ಅಂತಿಮವಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಶಿವರಾಜ ಪಾಟೀಲ ರದ್ದೇವಾಡಗಿ ಅವರಿಗೇ ಮಣೆ ಹಾಕಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವರಾಜ ಪಾಟೀಲ ಮತ ಎಣಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದಾಗ್ಯೂ, ಅವರ ವಿಧಾನಸಭೆ ಚುನಾವಣೆ ಸೋಲು ಅಧ್ಯಕ್ಷ ಪಟ್ಟಕ್ಕೆ ಕುತ್ತು ತಂದಿಲ್ಲ.

ಇನ್ನು ನಿರೀಕ್ಷೆಯಂತೆ ಶಹರ ಘಟಕಕ್ಕೆ ಬಿ.ವೈ. ವಿಜಯೇಂದ್ರ ಅವರ ಆಪ್ತರಾದ ಚಂದು ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ನಿಕಟಪೂರ್ವ ಅಧ್ಯಕ್ಷ ಸಿದ್ದಾಜಿ ಪಾಟೀಲ ಸಹ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಕುಟುಂಬದ ಆಪ್ತರೇ ಆಗಿದ್ದರು. ಚಂದು ಅವರ ನೇಮಕದೊಂದಿಗೆ ಮತ್ತೆ ಪಕ್ಷದ ಚುಕ್ಕಾಣಿ ಬಿ.ಜಿ. ಪಾಟೀಲ ಕುಟುಂಬದ ಬಳಿಯೇ ಉಳಿದಂತಾಗಿದೆ.

ಚಂದು ಪಾಟೀಲ 
ಚಂದು ಪಾಟೀಲ 
ಪಕ್ಷದ ವರಿಷ್ಠರು ನನ್ನ ಮೇಲೆ ಭರವಸೆ ಇಟ್ಟು ಈ ಜವಾಬ್ದಾರಿ ಹೊರಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗ್ರಾಮಾಂತರ ಜಿಲ್ಲಾ ಘಟಕದ ಸಮನ್ವಯದೊಂದಿಗೆ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಲಿದ್ದೇವೆ
-ಚಂದು ಪಾಟೀಲ ಬಿಜೆಪಿ ಶಹರ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT