ಭಾನುವಾರ, ಆಗಸ್ಟ್ 14, 2022
19 °C
ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ ಆರೋಪ

‘ಕೃಷಿ ಕಾಯ್ದೆ: ರೈತರ ದಿಕ್ಕುತಪ್ಪಿಸಿದ ವಿರೋಧ ಪಕ್ಷಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರ ಆದಾಯವನ್ನು ಹೆಚ್ಚಿಸಲು ಪೂರಕವಾಗಿದ್ದು, ವಿರೋಧ ಪಕ್ಷಗಳು ಉದ್ದೇಶಪೂರ್ವಕ ವಾಗಿ ರೈತರ ದಿಕ್ಕು ತಪ್ಪಿಸುತ್ತಿವೆ ಎಂದು ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ದೂರಿದರು.

 ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕಾಯ್ದೆಗಳು ಈಗಲೇ ರೂಪುಗೊಂಡಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಶರದ್ ಯಾದವ್ ಅವರು 2011ರಲ್ಲಿ ಇದೇ ಮಾದರಿಯ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಕಾಂಗ್ರೆಸ್‌ ಪ‍ಕ್ಷದ 2014 ಮತ್ತು 2019ರ ‍‍‍ಪ್ರಣಾಳಿಕೆಯಲ್ಲಿ ಇದೇ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು’ ಎಂದರು.

‘2018–19ರ ಸಂಸತ್ತಿನ ಕೃಷಿ ಸ್ಥಾಯಿ ಸಮಿತಿಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದ್ದು, ಸಮಿತಿಯು ಸಲಹೆಗಳನ್ನೊಳಗೊಂಡಂತೆ ಈ ಮಸೂದೆಯನ್ನು ತರಲಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಯಲ್ಲಿ ಕಾಂಗ್ರೆಸ್‌ನ ಕಮಲ್‌ನಾಥ್ ಹಾಗೂ ಕ್ಯಾಪ್ಟನ್ ಅಮರಿಂದರ್‌ ಸಿಂಗ್ ಸದಸ್ಯರಾಗಿದ್ದಾರೆ. ಆ ಸಮಿತಿಯ ಸಲಹೆಯಂತೆ ಸೆಪ್ಟೆಂಬರ್‌ನಲ್ಲಿ ಈ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು’ ಎಂದರು.

2020ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅತಿ ಹೆಚ್ಚು ಪ್ರಮಾಣದ ರೈತರ ಉತ್ಪನ್ನವನ್ನು ಖರೀದಿಸಲಾಗಿದೆ. ಇದು ಕನಿಷ್ಠ ಬೆಂಬಲ ಬೆಲೆ ಯೋಜನೆಯ ರದ್ದತಿ ಕುರಿತಾದ ಆರೋಪ ಸುಳ್ಳು ಎಂಬುದನ್ನು ಸ್ಪಷ್ಟಗೊಳಿಸುತ್ತದೆ’ ಎಂದು ಪ್ರತಿಪಾದಿಸಿದರು.

ದೇಶದಾದ್ಯಂತ ವಿರೋಧ ಪಕ್ಷಗಳು ಸೋತಿದ್ದು, ಹತಾಶೆಯಿಂದ ರೈತರನ್ನು ಮೋದಿ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವಾಗಿದೆ. ಖಲಿಸ್ತಾನ್ ಚಳವಳಿಯ ಮೂಲಕ ದೇಶವಿರೋಧಿ ಚಟುವಟಿಕೆ ನಡೆಸುತ್ತಿರುವ ಕೆನಡಾ ಮತ್ತು ಲಂಡನ್‌ನಲ್ಲಿರುವ ವಾಮಪಂಥೀಯರು ಈ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ ಎಂದು
ಆರೋಪಿಸಿದರು.

ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ರೈತ ಮೋರ್ಚಾ ಅಧ್ಯಕ್ಷ ರಮೇಶ ದಸ್ತಾಪುರ, ಮುಖಂಡರಾದ ಚಂದ್ರಶೇಖರ ರೆಡ್ಡಿ, ಸಾಹೇಬಗೌಡ, ಪ್ರಕಾಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.