ಶನಿವಾರ, ಅಕ್ಟೋಬರ್ 16, 2021
29 °C
ಕಿಸಾನ್ ಕಾಟನ್ ಇಂಡಸ್ಟ್ರೀಸ್‌ಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯ

‘ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ‘ಬಿಜೆಪಿಯ ನಾಯಕರು ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದಾಗ ರೈತರ ಹಿತಕಾಯುವುದಾಗಿ ಮಾತನಾಡುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಕೃಷಿಕರನ್ನು ರಕ್ಷಿಸುವ ಒಂದೇ ಒಂದು ಯೋಜನೆ ರೂಪಿಸದೆ ಅವರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಪಟ್ಟಣದ ಹೊರ ವಲಯದಲ್ಲಿ ನಿರ್ಮಿಸಲಾದ ಕಿಸಾನ್ ಕಾಟನ್ ಇಂಡಸ್ಟ್ರೀಸ್‌ ಕಾರ್ಖಾನೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ತೋರಿಕೆ ರಾಜಕೀಯ ಮಾಡುವವರು ತಾವು ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುತ್ತಾರೆ. ಆದರೆ ಅಧಿಕಾರ ಸಿಕ್ಕ ಮೇಲೆ ರೈತರನ್ನು ಕಡೆಗಣಿಸುತ್ತಾರೆ. ನಾವು ರೈತರ ಮಕ್ಕಳು. ಅಂತಹ ರಾಜಕಾರಣ ಮಾಡುವುದಿಲ್ಲ’ ಎಂದರು.

‘ನನ್ನ ಅಧಿಕಾರದ ಅವಧಿಯಲ್ಲಿ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಲು ಕೃಷಿ ಬೆಲೆ ಆಯೋಗ ರಚಿಸಲಾಗಿತ್ತು. ಈಗ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಕ್ಕರೆ ದರ ಕುಸಿದಾಗ ಕಬ್ಬು ಬೆಳೆಗಾರರಿಗೆ ₹ 1,800 ಕೋಟಿ ನೀಡಿದ್ದೆ. ಸಹಕಾರಿ ಸಂಘಗಳಲ್ಲಿ ಪಡೆದಿದ್ದ ಪ್ರತಿ ರೈತರ ₹ 50 ಸಾವಿರ ಸಾಲವನ್ನು ಯಾವುದೇ ಷರತ್ತಿಲ್ಲದೆ ಮನ್ನಾ ಮಾಡಲಾಗಿತ್ತು. ಲೀಟರ್ ಹಾಲಿಗೆ ₹ 5 ಬೆಂಬಲ ಬೆಲೆ ಕೊಟ್ಟು ಹೈನುಗಾರಿಕೆಗೆ ಉತ್ತೇಜನ ನೀಡಲಾಗಿತ್ತು. ಈಗ ಅಂತಹ ಯೋಜನೆಗಳಿಲ್ಲ’ ಎಂದು ಟೀಕಿಸಿದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಹತ್ತಿ ಕಾರ್ಖಾನೆಯ ಆರಂಭದಿಂದ ಹತ್ತಿ ಬೆಳೆಗಾರರಿಗೆ ಅನಕೂಲವಾಗಲಿದೆ. ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂದರು.

ಆಡಳಿತ ಮಂಡಳಿ ಸದಸ್ಯ ಮತೀನ್ ಪಟೇಲ್ ಮಾತನಾಡಿ, ಈ ಭಾಗದ ಹತ್ತಿ ಬೆಳೆಗಾರರಿಗೆ ಉತ್ಪನ್ನಗಳ ಮಾರಾಟ ಬಹುದೊಡ್ಡ ಸಮಸ್ಯೆ ಆಗಿತ್ತು. ಇದರ ಪರಿಹಾರಕ್ಕೆ ಕಾರ್ಖಾನೆ ಆರಂಭಿಸಲಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು