ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್ ಪ್ರಣಾಳಿಕೆಯಿಂದ ಸಾಲದ ಮೊತ್ತ ಹೆಚ್ಚಳ’- ವಿಶ್ವನಾಥ ಭಟ್

ಬಿಜೆಪಿ ಚುನಾವಣಾ ಪ್ರಣಾಳಿಕೆ ರೂಪಿಸುವ ಸಭೆಯಲ್ಲಿ ವಿಶ್ವನಾಥ ಭಟ್
Last Updated 13 ಮಾರ್ಚ್ 2023, 16:04 IST
ಅಕ್ಷರ ಗಾತ್ರ

ಕಲಬುರಗಿ: ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಮಹಿಳೆಯರಿಗೆ ಮಾಸಿಕ ₹ 2 ಸಾವಿರ ನೆರವು ಹಾಗೂ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವ ಭರವಸೆಗಳನ್ನು ಅನುಷ್ಠಾನಗೊಳಿಸಲು ಮುಂದಾದರೆ ರಾಜ್ಯ ಸರ್ಕಾರ ಇನ್ನಷ್ಟು ಸಾಲದ ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ ಎಂದು ಆರ್ಥಿಕ ತಜ್ಞ ವಿಶ್ವನಾಥ ಭಟ್ ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಚುನಾವಣಾ ಪ್ರಣಾಳಿಕೆ ನಿರ್ಮಾಣ ಕುರಿತ ಸಲಹೆಗಳನ್ನು ನೀಡುವ ಸಭೆಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಬಿಜೆಪಿ ಸರ್ಕಾರವು ಪರಿಶಿಷ್ಟ ಸಮುದಾಯದವರ ಮನೆಗಳಿಗೆ 75 ಯೂನಿಟ್ ವಿದ್ಯುತ್ ನೀಡುತ್ತಿದೆ. ಇದು ಸರಿಯಾದ ಕ್ರಮ. ಅದನ್ನು ಬಿಟ್ಟು ಹಸಿದವರಿಗೂ ಊಟ ಹಾಕುವುದು, ಹಸಿವಾಗದವರಿಗೂ ಊಟ ಹಾಕುವುದು ಸರಿಯಾದ ಕ್ರಮವಲ್ಲ’ ಎಂದರು.

‘ವಿದ್ಯುತ್, ಮನೆಯ ಯಜಮಾನಿಗೆ ನೆರವು ಹಾಗೂ ಉಚಿತ ಅಕ್ಕಿ ಯೋಜನೆಯನ್ನು ಜಾರಿಗೊಳಿಸಿದರೆ ವಾರ್ಷಿಕವಾಗಿ ₹ 72 ಸಾವಿರ ಕೋಟಿ ಹೊರೆ ಬೀಳಲಿದೆ. ಈಗಾಗಲೇ ಸರ್ಕಾರ ₹ 77,750 ಕೋಟಿ ಸಾಲ ಮಾಡಿದೆ. ಹೆಚ್ಚುವರಿ ಹೊರೆ ಸೇರಿದರೆ ₹ 1.50 ಲಕ್ಷ ಕೋಟಿ ಸಾಲದ ಹೊರೆ ಬೀಳಲಿದೆ. ಇದರ ಬಡ್ಡಿಯೇ ವಾರ್ಷಿಕವಾಗಿ ₹ 12 ಸಾವಿರ ಕೋಟಿ ಆಗಲಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಉಚಿತ ಅಕ್ಕಿ ಯೋಜನೆಯನ್ನು ಜಾರಿಗೊಳಿಸಿದ್ದರಾದರೂ ಕೇಂದ್ರ ಸರ್ಕಾರ ಪ್ರತಿ ಕೆ.ಜಿ. ಅಕ್ಕಿಗೆ ತಗಲುವ ₹ 32 ವೆಚ್ಚದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ₹ 29 ನೀಡುತ್ತಿತ್ತು. ಉಳಿದ ₹ 3ನ್ನು ರಾಜ್ಯ ಸರ್ಕಾರ ಭರಿಸುತ್ತಿತ್ತು. ಇದೀಗ ಕೇಂದ್ರವೇ ಪ್ರತಿ ಕೆ.ಜಿ. ಅಕ್ಕಿಗೆ ₹ 32 ಭರಿಸುತ್ತಿದೆ’ ಎಂದರು.

‘ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಜಾಲ, ರೈಲುಗಳ ಜಾಲ, ಸೆಮಿ ಕಂಡಕ್ಟರ್ ಉತ್ಪಾದನೆ ಸೇರಿದಂತೆ ನವ ಭಾರತಕ್ಕೆ ಬೇಕಾದ ಮೂಲಸೌಕರ್ಯವನ್ನು ಹಿಂದೆಂದೂ ಆಗದಷ್ಟು ಪ್ರಮಾಣದಲ್ಲಿ ಅಭಿವೃದ್ಧಿಪಡಿಸುತ್ತಿದೆ. ವಿದೇಶಿ ಉದ್ದಿಮೆದಾರರು ಚೀನಾ ಬದಲು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಹೂಡಿಕೆ ಮೊತ್ತ ಹೆಚ್ಚಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವೂ ದುಪ್ಪಟ್ಟಾಗಿದೆ’ ಎಂದು ಹೇಳಿದರು.

ಸಂಸದ ಡಾ. ಉಮೇಶ ಜಾಧವ್, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಕೆಕೆಸಿಸಿಐ ಮಾಜಿ ಅಧ್ಯಕ್ಷ ಪ್ರಶಾಂತ ಮಾನಕರ ಇದ್ದರು.

‘ಬಿಜೆಪಿ ಸಾಧನೆಗೇ ಸೀಮಿತವಾದ ಸಭೆ’

ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ಆಹ್ವಾನಿಸಲು ಬಿಜೆಪಿ ವಿವಿಧ ಔದ್ಯಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಆಹ್ವಾನ ನೀಡಿತ್ತು. ಆದರೆ, ಅವರಿಗೆ ಅವಕಾಶ ನೀಡುವ ಬದಲು ಬರೀ ವಿಶ್ವನಾಥ ಭಟ್ ಅವರು ಬಿಜೆಪಿ ಸರ್ಕಾರದ ಸಾಧನೆಗಳನ್ನು ಹೇಳಲು ಹೆಚ್ಚಿನ ಸಮಯವನ್ನು ತೆಗೆದುಕೊಂಡರು.

ಇದರಿಂದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಸಮಯ ಸಿಗದೇ ಇದ್ದುದರಿಂದ ಉದ್ಯಮಿಗಳು ಬೇಸರ ಹೊರಹಾಕಿದರು.

ಭಟ್ ಅವರ ಭಾಷಣ ಮುಗಿದ ಬಳಿಕ 15 ನಿಮಿಷಗಳಲ್ಲೇ ಸಭೆ ಮುಕ್ತಾಯವಾಗಲಿದೆ ಎಂದು ಸಂಘಟಕರು ಘೋಷಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಸಭೆಯಲ್ಲಿ ಎದ್ದು ನಿಂತ ಉದ್ಯಮಿಯೊಬ್ಬರು, ವಿಶ್ವನಾಥ ಭಟ್ ಅವರು ಒಂದು ತಾಸಿಗಿಂತ ಹೆಚ್ಚು ಹೊತ್ತು ಮಾತನಾಡಿದರೂ ನಾವು ಕೇಳಿದ್ದೇವೆ. ಈಗ ಸಮಯದ ಮಿತಿ ಹೇರಿದರೆ ಹೇಗೆ’ ಎಂದು ಪ್ರಶ್ನಿಸಿದರು.

ಭಟ್ ಅವರ ಭಾಷಣದ ಮಧ್ಯೆಯೇ ವೇದಿಕೆಯ ಮೇಲಿದ್ದ ಜನಪ್ರತಿನಿಧಿಗಳು ಕೆಲ ಹೊತ್ತು ನಿದ್ದೆಗೆ ಜಾರಿದ್ದರು! ಸಂವಾದ ಆರಂಭವಾಗುವುದಕ್ಕೂ ಮುನ್ನವೇ ಶಾಸಕ ಮತ್ತಿಮಡು ಸಭೆಯಿಂದ ನಿರ್ಗಮಿಸಿದರು.


‌‘ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಏನು?’

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಸಾಧನೆಯನ್ನು ವಿಶ್ವನಾಥ ಭಟ್ ಅವರು ಹೇಳಿದ ಬಳಿಕ ಸಂವಾದ ಶುರುವಾಯಿತು. ಸಂವಾದದಲ್ಲಿ ಭಾಗವಹಿಸಿದ ಉದ್ಯಮಿಗಳು, ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಇದರಿಂದ ಕಕ್ಕಾಬಿಕ್ಕಿಯಾದ ವಿಶ್ವನಾಥ ಭಟ್ ಈ ಭಾಗಕ್ಕೆ ರಸ್ತೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಹೇಳಲು ಮುಂದಾದರು. ಇದಕ್ಕೆ ಅರ್ಧಕ್ಕೇ ತಡೆದ ಕೆಲವರು, ಸಿಮೆಂಟ್ ಫ್ಯಾಕ್ಟರಿ, ವಿಮಾನ ನಿಲ್ದಾಣದ ಬಗ್ಗೆ ಎಷ್ಟು ವರ್ಷ ಹೇಳುತ್ತೀರಿ?’ ಎಂದು ಸಿಡಿಮಿಡಿಗೊಂಡರು.


10 ವರ್ಷಗಳಲ್ಲಿ ಯೋಜನೆ ಮತ್ತು ಯೋಜನೇತರ ಬಾಬ್ತುಗಳಲ್ಲಿ ಈ ಭಾಗಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ. ನಂಜುಂಡಪ್ಪ ವರದಿ ಶಿಫಾರಸಿನ ಅನುಸಾರ ಕೆಕೆಆರ್‌ಡಿಬಿಗೆ ₹ 20 ಸಾವಿರ ಕೋಟಿ ಸಿಗಬೇಕಿತ್ತು. ಬಿಜೆಪಿ ಸರ್ಕಾರ ಕೊಟ್ಟಿದ್ದು ಎಷ್ಟು?
ಉಮಾಕಾಂತ ನಿಗ್ಗುಡಗಿ
ಕೆಕೆಸಿಸಿಐ ಮಾಜಿ ಅಧ್ಯಕ್ಷ


ಉತ್ತರ ಕರ್ನಾಟಕದ ಹೆಸರಿನಲ್ಲಿ ಕಲಬುರಗಿಗೆ ಬರಬೇಕಿದ್ದ ಎಲ್ಲ ಯೋಜನೆಗಳು ಹುಬ್ಬಳ್ಳಿ–ಧಾರವಾಡ, ಬೆಳಗಾವಿಗೆ ಹೋಗುತ್ತಿವೆ. ಹೀಗಾಗಿ, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಪ್ರಣಾಳಿಕೆ ರೂಪಿಸಬೇಕು
ಅಮರನಾಥ ಪಾಟೀಲ
ಕೆಕೆಸಿಸಿಐ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT