ಗುರುವಾರ , ನವೆಂಬರ್ 26, 2020
19 °C

ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ; ಸಿದ್ಧರಾಮಯ್ಯಗೆ ವಿಜಯೇಂದ್ರ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇತ್ತೀಚೆಗೆ ನಡೆದ ಶಿರಾ, ರಾಜರಾಜೇಶ್ವರಿ ‌ಕ್ಷೇತ್ರದ ಉಪಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಆಮಿಷವೊಡ್ಡಿದರೆ ಮತದಾರ ಬೆಂಬಲಿಸಲ್ಲ ಎಂಬುದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು.

ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವೈಫಲ್ಯಗಳನ್ನು ಎತ್ತಿ ತೋರಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದ್ದೇವೆ. ಎಲ್ಲಿಯೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಸೋಲಿನ ಹತಾಶೆಯಿಂದ ಸಿದ್ಧರಾಮಯ್ಯ ಹೀಗೆ ಮಾತಾಡುತ್ತಿದ್ದಾರೆ ಎಂದರು.

ಹಿಂದೆ 15 ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. 15ರಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಮೊನ್ನೆ ನಡೆದ ಚುನಾವಣೆಯಲ್ಲಿ 2 ಕ್ಷೇತಗಳಲ್ಲಿ ಶಿರಾ ಕ್ಷೇತ್ರ ಗೆಲ್ಲುವುದು ದೊಡ್ಡ ಸವಾಲಾಗಿತ್ತು. ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿವೆ. ಆದರೆ, ಬಿಜೆಪಿ ಎಲ್ಲ ಸಮುದಾಯಗಳನ್ನು ಒಂದಾಗಿ ಕಂಡಿರುವುದರಿಂದ ಕಮಲ ಅರಳಿದೆ. ಎಲ್ಲಿಯೇ ಹೋದರೂ ಕಮಲ ಅರಳುತ್ತದೆ ಅನ್ನುವ ವಿಶ್ವಾಸವಿದೆ ಎಂದರು.

‘ಯಡಿಯೂರಪ್ಪ ಅವರ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ. ಬರುವ ದಿನಗಳಲ್ಲಿ ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆ ಬರಲಿದೆ. ಬಸವ ಕಲ್ಯಾಣದಲ್ಲಿ ಇಂದು ಮುಖಂಡರನ್ನು ಭೇಟಿಯಾಗುತ್ತೇನೆ. ಬಿಜೆಪಿ ರಾಜ್ಯ‌ ಘಟಕದ ಅಧ್ಯಕ್ಷರು ಯಾವ ಕ್ಷೇತ್ರದ ಜವಾಬ್ದಾರಿ ಕೊಟ್ಟರೂ ಅದನ್ನು ವಹಿಸಿಕೊಳ್ಳುತ್ತೇನೆ. ಬಸವ ಕಲ್ಯಾಣದಲ್ಲಿ ನಾನಂತೂ ಆಕಾಂಕ್ಷಿಯಲ್ಲ. ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಪಕ್ಷದ ಹೈಕಮಾಂಡ್ ನಿರ್ಣಯಿಸುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ’ ಎಂದರು.

ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಸುಭಾಷ್ ಗುತ್ತೇದಾರ, ದತ್ತಾತ್ರೇಯ ಪಾಟೀಲ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಅಂಬಿಗರ ‌ಚೌಡಯ್ಯ ಅಭಿವೃದ್ಧಿ ‌ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಬಿಜೆಪಿ ಗ್ರಾಮಾಂತರ ‌ಜಿಲ್ಲಾ ಅಧ್ಯಕ್ಷ ‌ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು