ಭಾನುವಾರ, ಆಗಸ್ಟ್ 1, 2021
27 °C

ಕಲಬುರ್ಗಿ: ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸುವ ಶಕ್ತಿ ಪುಸ್ತಕಗಳಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪುಸ್ತಕಗಳು ನಮ್ಮನ್ನು ಪರಿಪೂರ್ಣ ಮನುಷ್ಯನನ್ನಾಗಿ ಮಾಡುತ್ತವೆ. ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಜೀವಮಾನವಿಡೀ ತಲೆ ಎತ್ತಿ ಓಡಾಡುವಂತೆ ಮಾಡಲ್ಲವು‌’ ಎಂದು ಪ್ರೊ.ಯಶ್ವಂತರಾಯ ಅಷ್ಠಗಿ ಅಭಿಪ್ರಾಯ ಪಟ್ಟರು.‌

ನಗರದಲ್ಲಿ ಶುಕ್ರವಾರ, ವಿಶ್ವಜ್ಯೋತಿ ಪ್ರತಿಷ್ಠಾನದ 12ನೇ ವರ್ಷಾಚರಣೆ ಅಂಗವಾಗಿ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ಪುಸ್ತಕಗಳನ್ನ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರೂಜಿ ಪದವಿ ಕಾಲೇಜಿನ ಸಂಸ್ಥಾಪಕ ಕಲ್ಯಾಣಕುಮಾರ ಶೀಲವಂತ ಮಾತನಾಡಿ, ‘ಆಧುನಿಕ ಯುಗದಲ್ಲಿ ಎಲ್ಲವೂ ತಂತ್ರಜ್ಞಾನಮಯ ಆಗುತ್ತಿರುವುದರಿಂದ ಪುಸ್ತಕಗಳ ಮಹತ್ವ ಕಡಿಮೆಯಾಗುತ್ತಿದೆ. ಓದುಗರ ಸಂಖ್ಯೆಯೂ ಕ್ಷೀಣಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ಗ್ರಂಥಾಲಯಗಳು ಶಾಲೆಯ ತರಗತಿಯಲ್ಲಿ ಕಲಿಯುವುದಕ್ಕಿಂತ ಹೆಚ್ಚಿನದನ್ನು ಕಲಿಸುತ್ತವೆ. ಪುಸ್ತಕಗಳನ್ನು ಓದುವುದರಿಂದ ಭಾಷಾಭಿವೃದ್ಧಿ ಆಗುವುದಲ್ಲದೆ, ಸೃಜನಶೀಲತೆ, ಒಳ್ಳೆಯ ಮನೋಭಾವ ಬೆಳೆಯುತ್ತದೆ’ ಎಂದರು.

ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ಸುಮಾರು ₹ 20 ಸಾವಿರ ಮೌಲ್ಯದ ‍ಪುಸ್ತಕಗಳನ್ನು ವಿತರಿಸಲಾಯಿತು. ಈ ಭಾಗದ ಹಿರಿಯ ಸಾಹಿತಿಗಳು ರಚಿಸಿರುವ ಕಥೆ, ಕವನ, ನಾಟಕ, ಕಾದಂಬರಿ, ವಚನ- ದಾಸ- ಜಾನಪದ ಸಾಹಿತ್ಯದ ಕೃತಿಗಳು ಇದರಲ್ಲಿವೆ.

ಶರಣಬಸವ ವಿಶ್ವವಿದ್ಯಾಲಯ ಹಾಗೂ ಖ್ವಾಜಾ ಬಂದೇನವಾಜ್ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಸುನೀಲಕುಮಾರ ಬನಶೆಟ್ಟಿ ಹಾಗೂ ಈಶ್ವರ ಬಾಳಿ ರಾವೂರ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕಿ ಜೈಶೀಲಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಅಮೃತರಾವ ಪಾಟೀಲ ಕೊಡಲಹಂಗರಗಾ, ಉದ್ಯಮಿ ಭೀಮಾಶಂಕರ ಪಾಟೀಲ, ಜಿಲ್ಲಾ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಬಿ.ಎಸ್.ಮಾಲಿಪಾಟೀಲ, ಶರಣ ಚಿಂತಕರಾದ ಶರಣರಾಜ್ ಛಪ್ಪರಬಂದಿ, ಶಿವಾನಂದ ಮಠಪತಿ, ಲಕ್ಷ್ಮೀಕಾಂತ ಜೋಳದ, ಪ್ರಭವ ಪಟ್ಟಣಕರ್, ರವಿಕುಮಾರ ಶಹಾಪುರಕರ್, ಪ್ರಭುಲಿಂಗ ಮೂಲಗೆ, ಆರ್.ಎಚ್.ಪಾಟೀಲ, ಶಿಕ್ಷಕರಾದ ರಾಜಕುಮಾರ ಊಡಗಿ, ಸುರೇಖಾ ಜಾಧವ, ಕಸ್ತೂರಿ ತಳವಾರ, ಕ್ರಿಯಾಶೀಲ ಗೆಳೆಯರ ಬಳಗದ ಸಂಚಾಲಕಿ ಭುವನೇಶ್ವರಿ ಹಳ್ಳಿಖೇಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು