ಭಾನುವಾರ, ಮಾರ್ಚ್ 29, 2020
19 °C
ಈ ಮಾದರಿಯ ವಾಹನಗಳ ನೋಂದಣಿಗೆ ಮಾ.31ರ ವರೆಗೆ ಮಾತ್ರ ಅವಕಾಶ; ವಿತರಕರಲ್ಲಿ ಹೆಚ್ಚಿದ ಆತಂಕ

ಬಿಎಸ್‌–4 ಕಾರು, ದ್ವಿಚಕ್ರ ವಾಹನಗಳನ್ನು ಏನು ಮಾಡುವುದು?

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: ಭಾರತ್‌ ಸ್ಟೇಜ್‌–4 (ಬಿಎಸ್‌–4) ಮಾದರಿಯ ವಾಹನಗಳ ನೋಂದಣಿಗೆ ಇದೇ 31 ಕೊನೆ ದಿನ. ಈ ಮಾದರಿಯ 1000ಕ್ಕೂ ಹೆಚ್ಚು ದ್ವಿಚಕ್ರ ವಾಹನ, 100ಕ್ಕೂ ಹೆಚ್ಚು ಕಾರು–ಇತರೆ ವಾಣಿಜ್ಯ ವಾಹನಗಳು ಜಿಲ್ಲೆಯ ವಿತರಕರ ಬಳಿ ಇವೆ. ಕೊರೊನಾ ಸೋಂಕಿನ ಹಾವಳಿಯ ಪರಿಣಾಮ ಆರು ದಿನಗಳಿಂದ ಜಿಲ್ಲೆಯ ಎಲ್ಲ ಶೋರೂಮ್‌ಗಳನ್ನು ಬಂದ್‌ ಮಾಡಿಸಿದ್ದು, ಮುಂದೇನು ಎಂಬ ಪ್ರಶ್ನೆ ವಿತರಕರನ್ನು ಕಾಡುತ್ತಿದೆ.

‘ಬಹುತೇಕ ವಾಹನಗಳ ಕಂಪನಿಗಳು ರಿಯಾಯಿತಿ ಪ್ರಕಟಿಸಿವೆ. ಕೊಳ್ಳಲು ಗ್ರಾಹಕರೂ ಉತ್ಸುಕರಾಗಿದ್ದಾರೆ. ಮೂರು ರಜಾ ದಿನಗಳನ್ನು ಕಳೆದರೆ ನೋಂದಣಿಗೆ ಉಳಿದಿರುವುದು ಎಂಟು ದಿನಗಳು ಮಾತ್ರ. ಕಾರುಗಳ ನೋಂದಣಿಗೆ ಮೂರು ದಿನ ಹಾಗೂ ದ್ವಿಚಕ್ರ ವಾಹನ ನೋಂದಣಿಗೆ ಎರಡು ದಿನಗಳ ಸಮಯ ಬೇಕು. ಜಿಲ್ಲಾ ಆಡಳಿತ ವಾಹನ ಮಾರಾಟಕ್ಕಾದರೂ ಅನುಮತಿ ನೀಡಬೇಕು’ ಎಂದು ಬಹುಪಾಲು ವಿತರಕರು ಒತ್ತಾಯಿಸುತ್ತಿದ್ದಾರೆ.

‘ಕಾರ್ಮಿಕರಿಗೆ ರಜೆ ನೀಡಿ, ಶೋರೂಮ್‌ ಬಂದ್‌ ಮಾಡಿದ್ದೇವೆ. ಕಂಪನಿಯವರು ರಿಯಾಯಿತಿ ನೀಡುತ್ತಿರುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿರುವುದರಿಂದ ಸಾಕಷ್ಟು ಜನ ಗ್ರಾಹಕರು ಖರೀದಿಸಲು ಉತ್ಸುಕರಾಗಿ ವಿಚಾರಿಸುತ್ತಿದ್ದಾರೆ. ಆದರೆ, ಶೋರೂಮ್‌ ತೆರೆಯಲೂ ಆಗುತ್ತಿಲ್ಲ. ಮುಂದೇನು ಮಾಡಬೇಕು ಎಂಬುದೂ ತೋಚುತ್ತಿಲ್ಲ’ ಎಂದು ಇಲ್ಲಿಯ ‘ವೆಂಕಟೇಶ ಹೀರೊ’ ಶೋ ರೂಮ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾಜಿ ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ. ಸರದಿಯಂತೆ ಒಬ್ಬೊಬ್ಬ ಗ್ರಾಹಕರು ಬರುವಂತೆ ನೋಡಿಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. ಕನಿಷ್ಠ ಪಕ್ಷ ಸೋಮವಾರದಿಂದ (ಇದೇ 23) ಹೊಸ ವಾಹನಗಳ ಮಾರಾಟಕ್ಕೆ ಅವಕಾಶ ನೀಡಿದರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.

‘ಕಲಬುರ್ಗಿಯ ಪ್ರಸಿದ್ಧ ಶರಣಬಸವೇಶ್ವರ ಜಾತ್ರೆ ಹಾಗೂ ಯುಗಾದಿಯ ಸಂದರ್ಭದಲ್ಲಿ ವಾಹನ ಖರೀದಿಸುವವರ ಸಂಖ್ಯೆ ಹೆಚ್ಚಿರುತ್ತಿತ್ತು. ಈ ಅವಧಿಯಲ್ಲೇ ನಮ್ಮ ಶೋರೂಮ್‌ಗಳು ಬಂದ್‌ ಆಗಿವೆ. ಕಂಪನಿಗಳು ನಮಗೆ ಪೂರೈಸಿರುವ ವಾಹನಗಳನ್ನು ವಾಪಸ್‌ ಪಡೆಯುವುದಿಲ್ಲ. ದೊಡ್ಡಮಟ್ಟದ ಹೂಡಿಕೆ ಮಾಡಿದ್ದೇವೆ. ಇರುವ ವಾಹನಗಳ ಮಾರಾಟಕ್ಕೂ ಅವಕಾಶ ಇಲ್ಲವಾಗಿದೆ. ಬಿಎಸ್‌–4 ವಾಹನಗಳ ಉತ್ಪಾದನೆಗೆ ನಿರ್ಬಂಧ ವಿಧಿಸಿದ್ದರೆ ಈ ಸ್ಥಿತಿ ಉದ್ಭವಿಸುತ್ತಿರಲಿಲ್ಲ. ಈಗ ನಾವು ಏನೂ ಮಾಡದ ಸ್ಥಿತಿಯಲ್ಲಿದ್ದೇವೆ’ ಎಂದು ಹಲವು ಕಂಪನಿಗಳ ಶೋರೂಮ್‌ಗಳನ್ನು ಹೊಂದಿರುವ ದೇವರಾಜ ಕುಲಕರ್ಣಿ ಅಸಹಾಯಕತೆ ವ್ಯಕ್ತಪಡಿಸಿದರು.

‘ನಮ್ಮಲ್ಲಿ ಬಿಎಸ್‌–4 ಕಾರುಗಳ ದಾಸ್ತಾನಿಲ್ಲ. ಕೊರೊನಾ ಕಾರಣ ನೀಡಿ ಗಡುವು ವಿಸ್ತರಿಸುವಂತೆ ಆಟೊಮೊಬೈಲ್‌ ಸಂಘಟನೆಯವರು ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ನೆರವಿಗೆ ಬಂದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದು ‘ಶಹಾ ಹುಂಡೈ’ನ ವ್ಯವಸ್ಥಾಪಕ ನಿರ್ದೇಶಕ ಆನಂದ ಶಹಾ ಹೇಳಿದರು.

‘ಹೊಸ ವಾಹನಗಳ ನೋಂದಣಿಯೂ ಸೇರಿದಂತೆ ಎಲ್ಲ ಬಗೆಯ ಸೇವೆಗಳನ್ನು ಎರಡು ದಿನಗಳಿಂದ ಸ್ಥಗಿತಗೊಳಿಸಿದ್ದೇವೆ. ಆನ್‌ಲೈನ್‌ ಮೂಲಕ ತೆರಿಗೆ ಪಾವತಿ ವ್ಯವಸ್ಥೆ ಇದೆ. ಶೋರೂಮ್‌ಗಳವರೇ ಹೊಸ ವಾಹನಗಳ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸಿ, ಚಾಸ್ಸಿ ಸಂಖ್ಯೆಯ ಪರಿಶೀಲನೆಗೆ ಮತ್ತು ನೋಂದಣಿಗೆ ಮಾತ್ರ ನಮ್ಮಲ್ಲಿ ವಾಹನ ತರುತ್ತಾರೆ. ಹೀಗಾಗಿ ನಮ್ಮ ಕಚೇರಿಯಲ್ಲಿ ವಿಳಂಬ ಆಗುವುದಿಲ್ಲ. ಕೊರೊನಾ ಸೋಂಕಿನ ಹಾವಳಿ ಕಡಿಮೆಯಾದರೆ ಸೋಮವಾರದಿಂದ ಒಂದೊಂದೇ ಹೊಸ ವಾಹನಗಳನ್ನು ತರಿಸಿಕೊಂಡು ನೋಂದಣಿ ಮಾಡಿಕೊಡುವ ಚಿಂತನೆ ಇದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು