ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ಬಿಎಸ್‌ಪಿಗೆ ‘ಮಾಡು ಮಡಿ’ ಹೋರಾಟ: ರಾಮ್‌ಜಿ ಗೌತಮ್‌

ಪಕ್ಷದ ವಿಭಾಗ ಮಟ್ಟದ ಕಾರ್ಯಕರ್ತರ ಸಮಾವೇಶ: ರಾಮ್‌ಜಿ ಗೌತಮ್‌ ಅಭಿಮತ
Published 12 ಮಾರ್ಚ್ 2024, 16:11 IST
Last Updated 12 ಮಾರ್ಚ್ 2024, 16:11 IST
ಅಕ್ಷರ ಗಾತ್ರ

ಕಲಬುರಗಿ: ಮುಂಬರುವ ಲೋಕಸಭೆ ಚುನಾವಣೆಯು ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್‌ಪಿ) ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ ಎಂದು ಪಕ್ಷದ ಕರ್ನಾಟಕ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಮ್‌ಜಿ ಗೌತಮ್‌ ಹೇಳಿದರು.

ಇಲ್ಲಿಯ ಕೋಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ‘ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ಬಹುಜನರ ನಡಿಗೆ ಪಾರ್ಲಿಮೆಂಟ್‌ ಕಡೆಗೆ’ ಹೆಸರಿನಲ್ಲಿ ನಡೆದ ಕಲಬುರಗಿ ವಿಭಾಗಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸಂವಿಧಾನ ಸಂರಕ್ಷಣೆಗಾಗಿ ಈಗ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಸಂವಿಧಾನದ ಗೌರವ ಉಳಿಸಲು ಬಹುಜನರಾದ ನಾವು ಬಲಿದಾನಕ್ಕೂ ಸಿದ್ಧರಾಗಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ಛತ್ರಪತಿ ಶಾಹು ಮಹಾರಾಜ್, ಪೆರಿಯಾರ್ ಅವರಂತಹ ಮಹನೀಯರ ಕನಸುಗಳ ಸಾಕಾರಕ್ಕೆ ಕಟಿಬದ್ಧರಾಗಿದ್ದೇವೆ’ ಎಂದು ಹೇಳಿದರು.

‘ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರು ಸಂವಿಧಾನದ ಬದಲಾವಣೆ ಮತ್ತು ತಿದ್ದುಪಡಿಯ ಮಾತುಗಳನ್ನಾಡುತ್ತಾರೆ. ಇದು ಬಿಜೆಪಿಯ ಕಾರ್ಯಸೂಚಿ ಕೂಡ ಆಗಿದೆ. ಇದಕ್ಕೆ ನಾವು ಅವಕಾಶ ಮಾಡಿಕೊಡಬಾರದು’ ಎಂದರು.

‘ದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಒಂದು ಹೊತ್ತಿನ ಆಹಾರವೂ ಸಿಗುತ್ತಿಲ್ಲ. ಬಡವರ ರೊಟ್ಟಿ ಕಸಿದು ಶ್ರೀಮಂತರಿಗೆ ನೀಡಲಾಗುತ್ತಿದೆ. ಇಂತಹ ಅಸಮಾನತೆ ತೊಲಗಬೇಕಾದರೆ ಬಹುಜನರನ್ನು ಪ್ರತಿನಿಧಿಸುವ ನಮ್ಮವರು ಸಂಸತ್ತಿನಲ್ಲಿರಬೇಕು’ ಎಂದು ಹೇಳಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕರಾದ ನಿತಿನ್‌ ಸಿಂಗ್‌, ಎಂ. ಗೋಪಿನಾಥ್, ಎಂ. ಕೃಷ್ಣಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಇಂಗನಕಲ್, ರಾಜ್ಯ ಉಪಾಧ್ಯಕ್ಷ ಡಿ.ಎಸ್‌. ಗಂಗಾಧರ್ ಬಹುಜನ್, ಹಲವು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು, ಕಲಬುರಗಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ ಜಿಲ್ಲೆಗಳ ಅನೇಕ ಕಾರ್ಯಕರ್ತರು ಸಮಾವೇಶದಲ್ಲಿ ಹಾಜರಿದ್ದರು.

ಹುಲ್ಲೊಳಗಿನ ಹಾವು ಹೆಡೆಯೆತ್ತಿದ ಉರಗ.. ಸಮಾವೇಶದಲ್ಲಿ ಮಾತನಾಡಿದ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ವಾಸು ಕಾಂಗ್ರೆಸ್‌ ಮತ್ತು ಭಾರತೀಯ ಜನತಾ ಪಕ್ಷಗಳಿಗೆ ಕುಟುಕಿದರು. ‘ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ದಮನಕಾರಿ ನೀತಿ ಅನುಸರಿಸುವ ಕಾಂಗ್ರೆಸ್‌ ಹುಲ್ಲೊಳಗೆ ಅವಿತುಕೊಂಡಿರುವ ಹಾವು. ಆದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ಹೆಡೆ ಎತ್ತಿದ ಹಾವಿದ್ದಂತೆ. ಹುಲ್ಲೊಳಗಿನ ಹಾವು ತೀರಾ ಅಪಾಯಕಾರಿಯಾಗಿದ್ದು ಮೊದಲು ಅದನ್ನು ಮಟ್ಟ ಹಾಕಬೇಕು’ ಎಂದರು. ‘ಕರ್ನಾಟಕದ ನಾಲ್ಕು ನಡೆ ಸಮಾವೇಶಗಳನ್ನು ಮಾಡಲಾಗಿದೆ. ಕಲಬುರಗಿಯಲ್ಲಿ ಮಾಡಿದ್ದು ನಾಲ್ಕನೇಯದ್ದು. ಈ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT