ಕಲಬುರಗಿ: ಹತ್ತು ವರ್ಷಗಳ ಹಿಂದೆ ತೊಗರಿ ಕಣಜ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಭೆಯನ್ನು ಮಂಗಳವಾರದಂದು ಮತ್ತೆ ನಡೆಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿ, 371 (ಜೆ) ಕಲಂ ಸಮರ್ಪಕ ಅನುಷ್ಠಾನದ ಕುರಿತು ಕಲ್ಯಾಣ ಕರ್ನಾಟಕದ ಜನ ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ₹5,000 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅದರಂತೆ ₹3,500 ಕೋಟಿ ಮೊತ್ತದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ನೀಡುವಂತೆ ಶಾಸಕರಿಗೆ ತಿಳಿಸಲಾಗಿದೆ. ಮಂಡಳಿಗೆ ಪ್ರತಿ ವರ್ಷ ಬರುವ ಹಣವನ್ನು ಪೂರ್ಣವಾಗಿ ಖರ್ಚು ಮಾಡುವ ಸವಾಲಿನ ಜೊತೆಗೆ, ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಭಾಗದವರಿಗೆ ಮೀಸಲಾತಿ ನೀಡುವ ಕುರಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಈ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಒದಗಿಸುವುದು, ಬಂಡವಾಳ ಆಕರ್ಷಿಸಲು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ, 371 (ಜೆ) ಮೀಸಲಾತಿಯಡಿ ನೇಮಕವಾದ ನೌಕರರಿಗೆ ದಶಕ ಕಳೆದರೂ ಬಡ್ತಿ ಸಿಗದಿರುವುದು, ಈ ಭಾಗದ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗೆ ಅನುಮೋದನೆ ದೊರೆಯದಿರುವುದು, ಪ್ರವಾಸೋದ್ಯಮ ಬೆಳವಣಿಗೆಗೆ ಆದ್ಯತೆ ದೊರೆಯದಿರುವುದು, ಅಪೌಷ್ಟಿಕತೆ ನಿವಾರಣೆ, ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ದುರಸ್ತಿ ಮತ್ತಿತರ ಸಂಗತಿಗಳ ಕುರಿತು ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಬಹುನಿರೀಕ್ಷಿತ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಮಂಜೂರಾತಿ ಸಿಗಬಹುದು ಎಂಬ ಆಶಾಭಾವ ಈ ಭಾಗದ ಜನರಲ್ಲಿ ಮೂಡಿದೆ. ‘ಕಲ್ಯಾಣ’ ಭಾಗದ ಸಚಿವರು ಹಾಗೂ ಶಾಸಕರು ತಮ್ಮ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಪ್ರಸ್ತಾವ ಕಳುಹಿಸಿಕೊಟ್ಟಿದ್ದು, ಇವುಗಳ ಪೈಕಿ ಯಾವುದಕ್ಕೆ ಹಸಿರು ನಿಶಾನೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಸಚಿವ ಸಂಪುಟ ಸಭೆಯ ಪ್ರಯುಕ್ತ ಕಲಬುರಗಿ ನಗರದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ನಗರವು ಕಂಗೊಳಿಸುತ್ತಿದೆ.
ಕಲಬುರಗಿ: ‘ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಪರವಾಗಿದೆ. ಆದ್ದರಿಂದಲೇ ದಶಕದ ಹಿಂದೆ 371 (ಜೆ) ಕಲಂ ಜಾರಿ ಮಾಡುವ ಮೂಲಕ ಈ ಭಾಗಕ್ಕೆ ಶಿಕ್ಷಣ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದೇ 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವ (ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ) ಹಾಗೂ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಸೋಮವಾರ ನಗರಕ್ಕೆ ಬಂದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಣೆ ಪ್ರತ್ಯೇಕ ಕೈಗಾರಿಕಾ ನೀತಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಇಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದ್ದೇವೆ’ ಎಂದರು. ‘ಕೇಂದ್ರದಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಗೃಹಸಚಿವರಾಗಿದ್ದ ಎಲ್.ಕೆ. ಅಡ್ವಾಣಿ ಅವರು 371 (ಜೆ) ಕಲಂ ಜಾರಿ ಪ್ರಸ್ತಾವವನ್ನು ತಿರಸ್ಕರಿಸಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಲ್ಲಿಕಾರ್ಜುನ ಖರ್ಗೆ ಧರ್ಮಸಿಂಗ್ ಅವರ ಪ್ರಯತ್ನದ ಫಲವಾಗಿ 371 (ಜೆ) ಸಂವಿಧಾನ ತಿದ್ದುಪಡಿ ಮಾಡಿತು’ ಎಂದು ಹೇಳಿದರು.
ಕಲಬುರಗಿ: ‘ಕಾಂಗ್ರೆಸ್ ಎಂಬುದು ನಾಟಕ ಕಂಪನಿ ಇದ್ದಂತೆ. ಎರಡು ಗಂಟೆಯ ಸಚಿವ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿ ಕಲಬುರಗಿಗೆ ಬರುತ್ತಿದ್ದಾರೆ. ಏರ್‌ಪೋರ್ಟ್ ರಸ್ತೆಯಲ್ಲಿ ಮಾತ್ರ ಕಸ ಹೊಡೆಯುತ್ತಿದ್ದಾರೆ. ನಗರದ ಎಲ್ಲ ಕಡೆ ಬಿದ್ದ ಗುಂಡಿಗಳನ್ನು ಮುಚ್ಚಲು ಇವರಿಗೆ ಆಗುತ್ತಿಲ್ಲ. ಇನ್ನು ಈ ಭಾಗದ ಸಮಸ್ಯೆಗಳಿಗೆ ಏನು ಪರಿಹಾರ ಕಲ್ಪಿಸುತ್ತಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸರ್ಕಾರದ ಖಜಾನೆಯೂ ಖಾಲಿಯಾಗಿದೆ. ಮಳೆಯಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಲು ಇವರಿಗೆ ಆಗುತ್ತಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.