ಕಲಬುರಗಿ: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧ (ಜಿಲ್ಲಾಧಿಕಾರಿ ಕಚೇರಿ) ಆವರಣಕ್ಕೆ ಮಾತ್ರವೇ ಡಾಂಬರೀಕರಣ, ನವೀಕರಣ ಸ್ಪರ್ಶ ಸೀಮಿತವಾಗಿದ್ದು, ಉಳಿದ ರಸ್ತೆಗಳು ಗುಂಡಿಗಳಲ್ಲೇ ನರಳಾಡುತ್ತಿವೆ. ಡಿಸಿ ಕಚೇರಿಯ ಒಳಗೆ ಥಳುಕು, ನಗರದ ರಸ್ತೆಗಳೆಲ್ಲ ಹುಳುಕು ಎನ್ನುವ ಸ್ಥಿತಿಯಿದೆ.
ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಗಣ್ಯರು, ಸರ್ಕಾರದ ಉನ್ನತ ಅಧಿಕಾರಿಗಳು ಸಂಚರಿಸುವ ರಸ್ತೆಗಳಲ್ಲಿನ ತಗ್ಗು– ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ‘ಯಮ ಸ್ವರೂಪಿ’ ತಗ್ಗುಗಳಿಗೆ ಡಾಂಬರು ಸುರಿದು ತೇಪೆ ಹಾಕಲಾಗುತ್ತಿದೆ. ರಸ್ತೆ ವಿಭಜಕಗಳನ್ನು ಸ್ವಚ್ಛಗೊಳಿಸಿ, ರಸ್ತೆಯ ಎರಡೂ ಬದಿಯಲ್ಲಿನ ಮಣ್ಣು, ಹುಲ್ಲಿನ ಕಳೆಯನ್ನು ತೆಗೆಯಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯ ಬಲ ಭಾಗದ ರಸ್ತೆ ಹೊರತುಪಡಿಸಿ ಉಳಿದೆಡೆ ಡಾಂಬರೀಕರಣ ಮಾಡಲಾಗಿದೆ. ವರ್ಷಗಳಿಂದ ಸುಣ್ಣ ಬಣ್ಣದ ಕಾಣದೆ ‘ಹಳೆಯ ಮುದುಕಿ’ಯಂತೆ ಇದ್ದ ಕಟ್ಟಡದ ಗೋಡೆ, ಕಿಟಕಿ, ಬಾಗಿಲುಗಳಿಗೆ ಬಣ್ಣ ಬಳಿಯುವ ಕಾರ್ಯ ನಾಲ್ಕೈದು ದಿನಗಳಿಂದ ಜೋರಾಗಿ ನಡೆಯುತ್ತಿದೆ. ವರ್ಷಗಳಿಂದ ದೂಳು ಮೆತ್ತಿಕೊಂಡು ಬಿದ್ದಿದ್ದ ಕಡತಗಳ ಮೂಟೆಗಳು ಸ್ಥಳಾಂತರಗೊಂಡಿವೆ. ಆವರಣದಲ್ಲಿ ಬೆಳೆದು ನಿಂತಿದ್ದ ಕಳೆಗಳನ್ನೂ ಕತ್ತರಿಸಲಾಗಿದೆ.
‘ಬಹುತೇಕ ರಸ್ತೆಗಳು ಕಳೆದ ಹಲವು ವರ್ಷಗಳಿಂದ ಗುಂಡಿ ಬಿದ್ದು ಹಾಳಾಗಿವೆ. ಸಚಿವ ಸಂಪುಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೇರಿ ಸಚಿವರ ಭೇಟಿಯ ಕಾರಣಕ್ಕೆ ಆಯ್ದ ರಸ್ತೆಗಳು ಮಾತ್ರ ದಿಢೀರ್ ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಇಷ್ಟು ದಿನ ಇದೇ ರಸ್ತೆಗಳಲ್ಲಿ ಓಡಾಡಿದ ಅಧಿಕಾರಿಗಳು ಈಗ ಎಚ್ಚೆತ್ತು ರಸ್ತೆಗೆ ತೇಪೆ ಹಾಕುತ್ತಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
‘ವಾಹನ ಚಾಲಕರು, ಪ್ರಯಾಣಿಕರು ಹದಗೆಟ್ಟ ರಸ್ತೆಗಳಿಂದ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದರೂ ಕ್ರಮ ಕೈಗೊಳ್ಳದೆ ಮುಖ್ಯಮಂತ್ರಿ, ಸಚಿವರ ಅನುಕೂಲಕ್ಕಾಗಿ ಈಗ ದಿಢೀರ್ ರಸ್ತೆ ದುರಸ್ತಿ ಮಾಡುತ್ತಿರುವುದು ಸರಿಯಲ್ಲ. ತಗ್ಗು ಗುಂಡಿಗಳು ಇದ್ದಿದ್ದರೆ ನಾವು ನಿತ್ಯ ಅನುಭವಿಸುವ ಪ್ರಯಾಣದ ಕಷ್ಟ ಅವರಿಗೂ ಅನುಭವಕ್ಕೆ ಬರುತ್ತಿತ್ತು’ ಎನ್ನುತ್ತಾರೆ ಬೈಕ್ ಸವಾರ ಅನಿಲ್ ಬಿರಾದಾರ.
‘ಕೇಂದ್ರ ಬಸ್ ನಿಲ್ದಾಣದ ಮುಂಭಾಗ, ಹಳೆ ಮತ್ತು ಹೊಸ ಜೇವರ್ಗಿ ರಸ್ತೆ, ಪಿಡಿಎ ಕಾಲೇಜು ರಸ್ತೆ, ವಿವೇಕಾನಂದ ಮೇಲ್ಸೆತುವೆ, ಡಾ.ಬಿ.ಆರ್.ಅಂಬೇಡ್ಕರ್ ಮೇಲ್ಸೆತುವೆ ಸೇರಿ ನಾನಾ ಕಡೆಯ ರಸ್ತೆ ಹಾಳಾಗಿದೆ. ಆ ಕಡೆ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.
ಸಕಲ ಸೌಕರ್ಯ: ಸಚಿವ ಸಂಪುಟ ನಡೆಯುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಯಾವುದೇ ಕುಂದುಕೊರತೆ ಆಗದಂತೆ ಸಕಲ ರೀತಿಯ ಸೌಕರ್ಯ ಒದಗಿಸಲಾಗುತ್ತಿದೆ.
‘ಹಲವು ವರ್ಷಗಳಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಸಮೀಪದ ಲಿಫ್ಟ್ ಬಂದಾಗಿತ್ತು. ಸರ್ಕಾರಿ ಕಚೇರಿಯ ಕೆಲಸಕ್ಕೆಂದು ಬರುತ್ತಿದ್ದ ಹಿರಿಯರು, ಅಂಗವಿಕಲರು, ಮಕ್ಕಳ ತಾಯಂದಿರು ಮೆಟ್ಟಿಲು ಹತ್ತಿ ಮೊದಲನೇ ಮತ್ತು ಎರಡನೇ ಮಹಡಿಗೆ ಹೋಗಬೇಕಿತ್ತು. ಸಚಿವ ಸಂಪುಟದ ಸಭೆಯಿಂದಾಗಿ ಲಿಫ್ಟ್‌ಗೆ ದುರಸ್ತಿ ಭಾಗ್ಯ ಒಲಿದು ಬಂದಿದೆ’ ಎಂದು ಕಚೇರಿಯ ಸಿಬ್ಬಂದಿಯೊಬ್ಬರು ಹೇಳಿದರು.
ಹಸಿರು ಪರದೆ: ಡಿ.ಸಿ ಕಚೇರಿ ಹಿಂಭಾಗದಲ್ಲಿನ ತ್ಯಾಜ್ಯ, ಸಂಚಾರ ಪೊಲೀಸರು ಜಪ್ತಿ ಮಾಡಿದ ಹಳೆಯ ವಾಹನಗಳನ್ನು ಮರೆ ಮಾಚಲು ಹಸಿರ ಪರೆದಯನ್ನು ಹಾಕಲಾಗಿದೆ.
- ‘ಬೆರಳಲ್ಲಿ ಕೆರೆದರೆ ಕಿತ್ತು ಬರುವ ಡಾಂಬರ್’
‘ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಡಲಾದ ಡಾಂಬರು ಕೈಬೆರಳಿನಲ್ಲಿ ಕೆರೆದರೆ ಕಿತ್ತು ಬರುತ್ತಿದೆ. ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿದೆ’ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಸೇನೆ ಮುಖಂಡ ದತ್ತು ಹೈಯಾಳಕರ್. ಸೇನೆ ಮುಖಂಡರೊಂದಿಗೆ ಕೈಯಲ್ಲಿ ಡಾಂಬರ್ ಕಿತ್ತು ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯೂ ಮಾಡಿದರು. ಗುಣಮಟ್ಟದ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
‘ಡಿ.ಸಿ. ಕಚೇರಿ ನವೀಕರಣಕ್ಕೆ ₹ 1.50 ಕೋಟಿ’
‘ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಕಟ್ಟಡದ ಸುಣ್ಣ–ಬಣ್ಣ ದುರಸ್ತಿ ಡಾಂಬರೀಕರಣ ಸೇರಿದಂತೆ ಎಲ್ಲ ಬಗೆಯ ನವೀಕರಣಕ್ಕಾಗಿ ಜಿಲ್ಲಾಡಳಿತಕ್ಕೆ ₹ 2 ಕೋಟಿ ಕೇಳಿದ್ದೇವೆ. ಆದರೆ ₹ 1.50 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದುವರೆಗೂ ಯಾವುದೇ ಅನುದಾನ ಕೊಟ್ಟಿಲ್ಲ. ಆದರೂ ಕೆಲಸ ಮಾಡುತ್ತಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆ ಇಲಾಖೆಯ (ಪಿಡಬ್ಲ್ಯುಡಿ) ಇಇ ಸುಭಾಷ ಶಿಕ್ಷಣಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪಿಡಬ್ಲ್ಯುಡಿ ನಿರ್ಮಿತಿ ಕೇಂದ್ರ ಸೇರಿದಂತೆ ಐದು ಇಲಾಖೆಗಳು ನವೀಕರಣದಲ್ಲಿ ತೊಡಗಿಸಿಕೊಂಡಿವೆ. ಕಚೇರಿ ಆವರಣದಲ್ಲಿ ರಾತ್ರಿ ವೇಳೆ ಡಾಂಬರೀಕರಣ ಮಾಡಿದ್ದರಿಂದ ಕತ್ತಲಲ್ಲಿ ಒಂದಿಷ್ಟು ಡಾಂಬರು ರಸ್ತೆಯ ಆಚೆಯ ಮಣ್ಣಿನ ಮೇಲೂ ಬಿದ್ದಿದೆ. ಅದನ್ನು ಕಟ್ ಮಾಡಿ ಸರಿಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.