ಅಪಘಾತದಲ್ಲಿ ಮಹಿಳೆ ಸಾವು: ಕಾರು ಚಾಲಕನಿಗೆ 14 ತಿಂಗಳು ಜೈಲು, ₹ 5 ಸಾವಿರ ದಂಡ

ಕಲಬುರಗಿ: ನಿರ್ಲಕ್ಷ್ಯತನದಿಂದ ಕಾರು ಓಡಿಸಿ ಎದುರಿಗೆ ಬಂದ ಬೈಕ್‌ಗೆ ಡಿಕ್ಕಿ ಹೊಡೆದು ಹಿಂಬದಿ ಕುಳಿತಿದ್ದ ಮಹಿಳೆಯ ಸಾವಿಗೆ ಕಾರಣನಾದ ಕಾರು ಚಾಲಕ ಶಿವಣ್ಣ ಕಿತ್ತೂರ ಎಂಬಾತನಿಗೆ ಇಲ್ಲಿನ ಸಿಜೆಎಂ ನ್ಯಾಯಾಲಯವು ವಿವಿಧ ಕಲಂಗಳಡಿ 14 ತಿಂಗಳು ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದೆ.
2018ರ ಜನವರಿ 19ರಂದು ರಾತ್ರಿ 7.30ಕ್ಕೆ ಹುಮನಾಬಾದ್ ಕಡೆಯಿಂದ ಕಾರು ಚಲಾಯಿಸಿಕೊಂಡು ಬಂದ ಶಿವಣ್ಣ ಉಪಳಾಂವ ಗ್ರಾಮದ ಬಳಿಯ ಕಿರು ಸೇತುವೆ ಬಳಿ ಹೊರಟಿದ್ದ ಚಾಂದಸಾಬ್ ನದಾಫ ಹಾಗೂ ರಹಿಮತಬಿ ದಂಪತಿಯ ಬೈಕಿಗೆ ಡಿಕ್ಕಿ ಹೊಡೆಸಿದ. ಡಿಕ್ಕಿ ರಭಸಕ್ಕೆ ನೆಲಕ್ಕೆ ಬಿದ್ದ ರಹಿಮತಬಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.
ಈ ಬಗ್ಗೆ ಗ್ರಾಮೀಣ ಠಾಣೆ ಸಿಪಿಐ ವಾಜಿದ್ ಪಟೇಲ್ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾಂತಲಾ ರಮೇಶ ದೊಡ್ಡವಾಡ ಅವರು ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದರು.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಲತಾದೇವಿ ಅ. ಕಟ್ಟಿ ವಾದ ಮಂಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.