ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರ ಸರ್ವಸ್ಪರ್ಶ, ಸರ್ವವ್ಯಾಪಿ; ಬಸವರಾಜ ಬೊಮ್ಮಾಯಿ

Last Updated 15 ನವೆಂಬರ್ 2022, 5:54 IST
ಅಕ್ಷರ ಗಾತ್ರ

ಕಲಬುರಗಿ: ‘ನಮ್ಮ ಬದುಕಿನಲ್ಲಿ ಹಾಸುಹೊಕ್ಕಿರುವ ಸಹಕಾರದ ಗುಣಧರ್ಮ ರಾಜ್ಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇರಿ ಎಲ್ಲಾ ರಂಗಗಳಲ್ಲಿ ಬೆಳವಣಿಗೆ ಸಾಧಿಸಿ ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿ ವಿಸ್ತಾರಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸೇಡಂ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ರಾಜ್ಯ ಸಹಕಾರ ಮಹಾಮಂಡಳ, ಕಲಬುರಗಿ–ಯಾದಗಿರಿ ಜಿಲ್ಲಾ
ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕ್, ರಾಜ್ಯ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ, ರಾಜ್ಯ ಸಹಕಾರ ಕೈಗಾರಿಕಾ ಮಹಾಮಂಡಳಿ, ಹಾಪ್‌ಕಾಮ್ಸ್, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಪ್ರಾಂತ್ಯದ ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆ ವತಿಯಿಂದ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಹಕಾರ ಮನುಕುಲಕ್ಕಾಗಿ ಇರುವ ನೈಜ ಗುಣಧರ್ಮ. ಸಹಕಾರ ತತ್ವ ಬ್ಯಾಂಕ್‌ಗೆ ಮಾತ್ರವಲ್ಲ, ನಮ್ಮ ಬದುಕಿಗೂ ಸಂಬಂಧಿಸಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಮುಚ್ಚಿ ಹೋಗುತ್ತಿದ್ದ ಡಿಸಿಸಿ ಬ್ಯಾಂಕು ಅಧಿಕಾರಿಗಳ, ಸದಸ್ಯರ, ಅಧ್ಯಕ್ಷರ ಸಹಕಾರದಿಂದ ಕಾಯಕಲ್ಪಗೊಂಡು ಸದೃಢವಾಗಿದೆ. ಒಬ್ಬರಿಗೂ ಸಾಲ ಕೊಡಲು ಆಗದ ಸ್ಥಿತಿಯಲ್ಲಿ ಇದ್ದ ಬ್ಯಾಂಕ್, ಒಂದು ವರ್ಷದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ 2 ಲಕ್ಷ ರೈತರಿಗೆ ₹1,012 ಕೋಟಿ ಸಾಲ ವಿತರಿಸಿದೆ. ಇದೆಲ್ಲಾ ಸಾಧ್ಯವಾಗಿದ್ದು ಸಹಕಾರ ತತ್ವದಿಂದ’ ಎಂದು ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ‘ಸರ್ಕಾರದ ನೆರವಿನಿಂದ ಸಹಕಾರ ಬ್ಯಾಂಕ್ ಉಳಿದಿದ್ದು, ರಾಜ್ಯದ 21 ಜಿಲ್ಲಾ ಬ್ಯಾಂಕ್‌ಗಳು ಲಾಭದಲ್ಲಿ ನಡೆಯುತ್ತಿವೆ. ಕಡ್ಡಾಯವಾಗಿ ರೈತರಿಗೆ ಸಾಲ ಕೊಡಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಧಿಕಾರಿ
ಹಾಗೂ ಸಿಬ್ಬಂದಿ ಪ್ರಾಮಾಣಿವಾಗಿ ಕೆಲಸ ಮಾಡಬೇಕು’ ಎಂದರು.

ಸಚಿವ ಪ್ರಭು ಚವಾಣ್, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಉಮೇಶ ಜಾಧವ, ಶಶೀಲ ಜಿ.ನಮೋಶಿ, ಬಿ.ಜಿ.ಪಾಟೀಲ,ಕ್ರೆಡಿಲ್ ಅಧ್ಯಕ್ಷ ಚಂದು ಪಾಟೀಲ, ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ್, ಸಹಕಾರ ಸಂಘಗಳ ನಿಬಂಧಕ ಡಾ. ಕ್ಯಾಪ್ಟನ್ ಕೆ. ರಾಜೇಂದ್ರ,
ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಎಸ್‌ಪಿ ಇಶಾ ಪಂತ್, ಜಿ.ಪಂ ಸಿಇಒ ಗಿರೀಶ ಡಿ. ಬದೋಲೆ, ಸೇಡಂ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಡಿಸಿಸಿ ಬ್ಯಾಂಕ್, ವಿವಿಧ ಸಹಕಾರ ಸಂಘಗಳ ನಿರ್ದೇಶಕರು, ಸದಸ್ಯರು ಇದ್ದರು.


‘ಕಾಗಿಣಾ ಏತ ನೀರಾವರಿ ಯೋಜನೆಗೆ ಚಾಲನೆ ಶೀಘ್ರ’

‘ಕಾಗಿಣಾ ನದಿಗೆ ಅಡ್ಡಲಾಗಿ ಕಟ್ಟುವ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ನಾನೇ ಬಂದು
ಯೋಜನೆಗೆ ಚಾಲನೆ ನೀಡುವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದಕ್ಕೂ ಮುನ್ನ ತೇಲ್ಕೂರ ಅವರು, ‘ಸೇಡಂ ತಾಲ್ಲೂಕಿನ 40 ಗ್ರಾಮಗಳ 25 ಸಾವಿರ ಹೆಕ್ಟೇರ್‌ಗೆ ನೀರು ಒದಗಿಸುವಕಾಗಿಣಾ ಏತ ನೀರಾವರಿ ಯೋಜನೆಗೆ ₹630 ಕೋಟಿ ವೆಚ್ಚವಾಗಲಿದೆ. ಸನ್ನತಿ ಬ್ರಿಡ್ಜ್‌ ಕಂ ಬ್ಯಾರೇಜ್‌ನಿಂದ 80 ಗ್ರಾಮಗಳ54 ಕೆರೆಗಳಿಗೆ ನೀರು ಹರಿಸುವ ₹592 ಕೋಟಿ ವೆಚ್ಚದ ಯೋಜನೆ ಸಹ ಸಿದ್ಧಪಡಿಸಲಾಗಿದೆ’ ಎಂದರು.

‘ರಾಜಕೀಯ ಪಕ್ಷಗಳಿಗೆ ಪಾಠ’

‘ಪ್ರಜಾಪ್ರಭುತ್ವದಡಿ ಇರುವ ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಆಧುನಿಕ ಸರ್ದಾರ್ ಪಟೇಲರಂತೆಯೇ ಇರುವ ಗೃಹ ಸಚಿವ ಅಮಿತ್ ಶಾ ಅವರನ್ನು ಸಹಕಾರ ಸಚಿವರಾಗಿ ಮಾಡಲಾಗಿದೆ. ಸಹಕಾರ ಸಂಬಾಳಿಸುವುದು ಸುಲಭದ ಕೆಲಸವಲ್ಲ. ರಾಜಕೀಯ ‌ಪಕ್ಷಗಳು ಸಹಕಾರ ಸಂಘಗಳನ್ನು ನೋಡಿ ಕಲಿಯುವ ಪರಿಸ್ಥಿತಿಯಿದೆ. ಯಾವಾಗ ಯಾರ ಜೊತೆ ಸೇರುತ್ತಾರೋ, ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಪ್ರದಾನ

ಸಹಕಾರ ಕ್ಷೇತ್ರದಲ್ಲಿನ ಸಾಧನೆಗಾಗಿ ಕಲಬುರಗಿ ವಿಭಾಗ ಮಟ್ಟದಲ್ಲಿ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಹಿರಿಯ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಠಗಿ ಮತ್ತು ಸಹಕಾರಿ ಧುರೀಣ ಅಪ್ಪಾರಾವ ಪಾಟೀಲ ಅತನೂರ, ಯಾದಗಿರಿಯ ಡಾ.‌ಸುರೇಶ ಸಜ್ಜನ, ಬೀದರ್‌ನ ಸೂರ್ಯಕಾಂತ ನಾಗಮಾರಪಳ್ಳಿ ಮತ್ತು ಸೂರ್ಯಕಾಂತ ಮಠಪತಿ, ರಾಯಚೂರಿನ ಡಾ.ಶಿವಶರಣಪ್ಪ, ಬಳ್ಳಾರಿಯ ಹಾಗಲೂರು ಮಲ್ಲಣ್ಣಗೌಡ ಹಾಗೂ ಗುಜ್ಜಲ ಹಣುಮಂತಪ್ಪ, ಕೊಪ್ಪಳದ ಶಂಕುತಲಾ ಹಾಲಯ್ಯ, ಶರಣಪ್ಪ ಹ್ಯಾಟಿ, ರಾಜೇಶಕುಮಾರ ಶೆಟ್ಟಲ್ ಹಾಗೂ ಶಿವಪ್ಪ ವಾಡು ಅವರಿಗೆ ‘ಸಹಕಾರ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಲಬುರಗಿ ತರಬೇತಿ ಸಂಸ್ಥೆಯ ವಸತಿ ನಿಲಯದ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಯಿತು. ಫಲಾನುಭವಿಗಳಿಗೆ ಸಾಲದ ಪತ್ರ, ಆರೋಗ್ಯ ಕಾರ್ಡ್, ಕಾರ್ಮಿಕ ಕಾರ್ಡ್‌, ಯಶಸ್ವಿನಿ ಕಾರ್ಡ್‌ ವಿತರಿಸಲಾಯಿತು.

ಯಾರು ಏನಂದರು?

₹5,000 ಕೋಟಿ ಸಾಲ ವಿತರಣೆ ಗುರಿ

ಮುಳುಗುತ್ತಿದ್ದ ಡಿಸಿಸಿ ಬ್ಯಾಂಕ್‌ಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಂದ ನೂರಾರು ಕೋಟಿ ರೂಪಾಯಿ ಠೇವಣಿ ಇರಿಸಿ, ಅಪೆಕ್ಸ್ ಬ್ಯಾಂಕ್‌ನ ಸಾಲ ತೀರಿಸಿ ₹1,012 ಕೋಟಿ ಸಾಲ ವಿತರಿಸಿದ್ದೇವೆ. ಮುಂದಿನ 3 ವರ್ಷಗಳಲ್ಲಿ ₹5 ಸಾವಿರ ಕೋಟಿ ಸಾಲ ವಿತರಿಸುವ ಗುರಿ ಇದೆ.

–ರಾಜಕುಮಾರ ಪಾಟೀಲ ತೇಲ್ಕೂರ, ಅಧ್ಯಕ್ಷ, ಡಿಸಿಸಿ ಬ್ಯಾಂಕ್‌, ಕಲಬುರಗಿ–ಯಾದಗಿರಿ

ಸಹಕಾರ ಏಳಿಗೆಯ ಪ್ರತೀಕ

‘ಸಹಕಾರ ನಾಡಿನ ಏಳಿಗೆಯ ಪ್ರತೀಕವಾಗಿದ್ದು ರೈತರು, ಕೂಲಿ ಕಾರ್ಮಿಕರು, ಉದ್ಯೋಗಸ್ಥರ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ₹7 ಲಕ್ಷ ಕೋಟಿಗೆ ಮೀಸಲಾಗಿದ್ದ ಅನುದಾನವನ್ನು ₹16 ಲಕ್ಷ‌ ಕೋಟಿಗೆ ಏರಿಸಿದ ಕೇಂದ್ರ ಸರ್ಕಾರವು ನಬಾರ್ಡ್, ಅಪೆಕ್ಸ್, ಡಿಸಿಸಿ ಬ್ಯಾಂಕ್‌ಗಳ ಮೂಲಕ ಸಾಲ‌ ನೀಡುತ್ತಿದೆ.

–ಭಗವಂತ ಖೂಬಾ, ಕೇಂದ್ರ ಸಚಿವ

ಕರ್ನಾಟಕದಲ್ಲೂ ಮುಂಚೂಣಿ

ಸಹಕಾರ ಕ್ಷೇತ್ರದಲ್ಲಿ ಮಹಾರಾಷ್ಟ್ರ ಸಾಕಷ್ಟು ಮುಂಚೂಣಿಯಲ್ಲಿದೆ. ಅದೇ ಹಾದಿಯಲ್ಲಿ ಕರ್ನಾಟಕವೂ ಮುಂಚೂಣಿಯತ್ತ ಸಾಗುತ್ತಿದೆ. ಕೇಂದ್ರ ಸರ್ಕಾರವು ಸಹಕಾರ ಇಲಾಖೆಗೆ ಪ್ರೋತ್ಸಾಹ ನೀಡಿ ಪ್ರತ್ಯೇಕ ಇಲಾಖೆ‌ ರಚಿಸಿ ಸಹಕಾರ ಕ್ಷೇತ್ರವನ್ನು ಯಶಸ್ವಿಯಾಗಿ ಮಾಡಲು ಶ್ರಮಿಸುತ್ತಿದೆ.

–ಮುರುಗೇಶ್ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ

ತೇಲ್ಕೂರರಿಂದ ಸಾರ್ಥಕ ಕೆಲಸ

ರಾಜಕುಮಾರ ಪಾಟೀಲ ತೇಲ್ಕೂರ ಅವರು ನಮಗೆ ಬಹಳ ಕಾಟ ಕೊಟ್ಟು ಗಂಟು ಬಿದ್ದಿದ್ದರು.‌ ನ‌ನ್ನನ್ನೇ ಅಧ್ಯಕ್ಷರಾಗಿ ಮಾಡಬೇಕು ಎಂದು ಒತ್ತಾಯ ಪೂರ್ವಕವಾಗಿ ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷರಾದರು. ‌ಅಂದು ಬೈಯ್ದು ಅಧ್ಯಕ್ಷ ಸ್ಥಾನ ಕೊಟ್ಟಿದ್ದಕ್ಕೆ ಸಾರ್ಥಕವಾಗಿದೆ. ಇಂದು ಮುಚ್ಚಿ ಹೋಗುತ್ತಿದ್ದ ಡಿಸಿಸಿ ಬ್ಯಾಂಕ್ ಅನ್ನು ಎತ್ತರಕ್ಕೆ ತಂದಿದ್ದಾರೆ.

–ರಾಜೂಗೌಡ, ಶಾಸಕ

ಪ್ರತಿಯೊಬ್ಬರಿಗೂ ಸಾಲ ಲಭ್ಯ

ರಾಜಕುಮಾರ ‌ಪಾಟೀಲ ತೇಲ್ಕೂರ ಅವರನ್ನು ಡಿಸಿಸಿ ಬ್ಯಾಂಕ್‌ಗೆ ಆಧ್ಯಕ್ಷರನ್ನಾಗಿ‌ ಮಾಡಿದಾಗ ಸಾಕಷ್ಟು ಕಷ್ಟ ಎದುರಿಸಿದ್ದೆವು. ತೇಲ್ಕೂರರು ಅಧ್ಯಕ್ಷರಾದ ಮೇಲೆ ಡಿಸಿಸಿ ಬ್ಯಾಂಕ್ ಕ್ರಾಂತಿ‌ಯನ್ನೇ ಮಾಡುತ್ತಿದೆ. ಈ ಹಿಂದೇ ಮಧ್ಯವರ್ತಿಗಳಿಗೆ, ಗೂಂಡಾಗಳಿಗೆ ಸಾಲ ಕೊಡುತ್ತಿದ್ದರು. ಈಗ ಪ್ರತಿಯೊಬ್ಬ ರೈತರಿಗೆ ಸಾಲ‌ ಸಿಗುತ್ತಿದೆ.

–ಡಾ.ಉಮೇಶ ಜಾಧವ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT