ಭಾನುವಾರ, ಸೆಪ್ಟೆಂಬರ್ 19, 2021
29 °C
ಕಲಬುರ್ಗಿಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾಗೆ ಅದ್ಧೂರಿ ಸ್ವಾಗತ

‘ಸದನದಲ್ಲಿ ಅಡ್ಡಿ ಮಾಡಿದ ಕುತಂತ್ರಿ ಕಾಂಗ್ರೆಸ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ 43 ಸಚಿವರನ್ನು ಸದನಕ್ಕೆ ಪರಿಚಯಿಸುವ ಸಂದರ್ಭದಲ್ಲಿ ಕುತಂತ್ರಿ ಕಾಂಗ್ರೆಸ್‌ ಪಕ್ಷದವರು ಪದೇ ಪದೇ ಅಡ್ಡಿ ಮಾಡುವ ಮೂಲಕ ಸಂಸತ್ತಿಗೆ ಅಪಚಾರ ಎಸಗಿದರು’ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕವು ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಏಳು ವರ್ಷಗಳಿಂದ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ. ಇದನ್ನು ಸಹಿಸದ ಕಾಂಗ್ರೆಸ್‌ ಪಕ್ಷದವರು ಸದನ ಸೇರಿದ ಸಂದರ್ಭದಲ್ಲಿ ಪ್ರಧಾನಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಮಾತನಾಡಲೂ ಅವಕಾಶ ನೀಡಲಿಲ್ಲ. ಆದ್ದರಿಂದ ಸದನದ ಬದಲು ಜನರ ಬಳಿ ಬಂದು ಅವರ ಆಶೀರ್ವಾದ ಪಡೆಯಬೇಕಾಗಿದೆ’ ಎಂದರು.

‘ಬಿಜೆಪಿ ಪದಾಧಿಕಾರಿಯಾಗುವುದೇ ಪೂರ್ವಜನ್ಮದ ಪುಣ್ಯ. ಅಂಥದರಲ್ಲಿ ಮೋದಿ ಅವರು ನನ್ನನ್ನು ಸಚಿವನನ್ನಾಗಿ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ 53 ಕೋಟಿ ಜನರಿಗೆ ಕೊರೊನಾ ಲಸಿಕೆಯನ್ನು ಕೊಡಿಸಿದ್ದಾರೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆಯಡಿ ₹ 60 ಸಾವಿರ ಕೋಟಿ ಹಣವನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಬರೀ ₹ 40 ಸಾವಿರ ಕೋಟಿ ಮೊತ್ತದ ರೈತರ ಸಾಲ ಮನ್ನಾ ಮಾಡಿ ಅದನ್ನೇ ದೊಡ್ಡದಾಗಿ ಬಿಂಬಿಸಿಕೊಂಡರು’ ಎಂದು ಹೇಳಿದರು.

‘ಜನಾಶೀರ್ವಾದ ಯಾತ್ರೆಯ ಪ್ರಯುಕ್ತ ಪಕ್ಷದ ವತಿಯಿಂದ ಅಳವಡಿಸಿದ್ದ ಕಟೌಟ್‌ಗಳನ್ನು ಕಾಂಗ್ರೆಸ್‌ ಮುಖಂಡರ ಒತ್ತಡದ ಮೇರೆಗೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಕಟೌಟ್‌ಗಳನ್ನು ತೆರವುಗೊಳಿಸಬಹುದೇ ಹೊರತು ಪಕ್ಷದ ಬಗ್ಗೆ ಜನಮಾನಸದಲ್ಲಿರುವ ಒಲವನ್ನು ಕಿತ್ತುಹಾಕುವುದು ಸಾಧ್ಯವಿಲ್ಲ’ ಎಂದರು.

ಸಂಸದ ಡಾ. ಉಮೇಶ ಜಾಧವ ಮಾತನಾಡಿ, ‘ಬೀದರ್‌ ಜಿಲ್ಲೆಯ ಸಂಸದರಾಗಿದ್ದರೂ ಭಗವಂತ ಖೂಬಾ ಅವರು ಜಿಲ್ಲೆಯ ಎರಡು ತಾಲ್ಲೂಕುಗಳ ವ್ಯಾಪ್ತಿಯೊಳಗೊಂಡ ಕ್ಷೇತ್ರವನ್ನೂ ಪ್ರತಿನಿಧಿಸುತ್ತಿದ್ದಾರೆ. ಆದ್ದರಿಂದ ಅವರು ಸಮಗ್ರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ‘ಮೋದಿ ಅವರ ಸಂಪುಟದಲ್ಲಿ ಸಚಿವರಾಗಿರುವುದು ಈ ಭಾಗದ ಹೆಮ್ಮೆ. ಇಲ್ಲಿನ ಉದ್ದಿಮೆಗಳ ಬೆಳವಣಿಗೆ ನಿಟ್ಟಿನಲ್ಲಿ ಅಗತ್ಯವಿರುವ ಅನುದಾನ ಹಾಗೂ ಸಹಕಾರವನ್ನು ಕೇಂದ್ರ ಸರ್ಕಾರದಿಂದ ಕೊಡಿಸಬೇಕು. ಡಾ. ಉಮೇಶ ಜಾಧವ ಅವರು ಸಂಪುಟದಲ್ಲಿ ಸೇರ್ಪಡೆಯಾಗಲು ಅಗತ್ಯವಾದ ನೆರವನ್ನು ನೀಡಬೇಕು’ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ‘ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕೇಂದ್ರ ಹಾಗೂ ರಾಜ್ಯದ ವಿವಿಧ ಸ್ಥಾನಗಳಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ಪರಿಗಣಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಹೇಳಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸ್ವಾಗತಿಸಿದರು.

ಶಾಸಕರಾದ ಬಸವರಾಜ ಮತ್ತಿಮೂಡ, ಶರಣು ಸಲಗರ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಪಕ್ಷದ ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ, ಉಪಾಧ್ಯಕ್ಷ ಶಿವ ಅಷ್ಠಗಿ, ಮುಖಂಡರಾದ ಮಂಜು ರೆಡ್ಡಿ, ಮಹಾದೇವ ಬೆಳಮಗಿ ಇತರರು ವೇದಿಕೆಯಲ್ಲಿದ್ದರು.

 

ಐದು ಗಂಟೆ ತಡವಾಗಿ ಆರಂಭ

ಮಧ್ಯಾಹ್ನ 3.30ಕ್ಕೆ ಆರಂಭವಾಗಬೇಕಿದ್ದ ಜನಾಶೀರ್ವಾ ಯಾತ್ರೆಯ ಸಭಾ ಕಾರ್ಯಕ್ರಮ ಐದು ಗಂಟೆ ತಡವಾಗಿ ರಾತ್ರಿ 8.30ಕ್ಕೆ ಆರಂಭವಾಯಿತು. ಸಭೆಯಲ್ಲಿ ಮಾತನಾಡುವ ಜನಪ್ರತಿನಿಧಿಗಳಿಗೆ ಸಂಘಟಕರು ತಲಾ 3 ನಿಮಿಷ ಸಮಯ ನಿಗದಿ ಮಾಡಿದ್ದರೂ ಸಚಿವ ಭಗವಂತ ಖೂಬಾ ಅವರ ಕೊನೆ ಭಾಷಣ ಮುಕ್ತಾಯವಾಗುವಷ್ಟರಲ್ಲಿ ರಾತ್ರಿ 9.40 ಆಗಿತ್ತು. ಸಭೆ ಆರಂಭಕ್ಕೂ ಮುನ್ನ ಗಂಜ್‌ ಬಳಿಯ ನಗರೇಶ್ವರ ಶಾಲೆಯಿಂದ ಮೆರವಣಿಗೆ ಮೂಲಕ ವೀರಶೈವ ಕಲ್ಯಾಣ ಮಂಟಪಕ್ಕೆ ಸಚಿವರನ್ನು ಕರೆತರಲಾಯಿತು.

ಸಂಜೆಯ ಬಳಿಕ ಮಳೆ ಸುರಿದಿದ್ದರಿಂದ ದೂರದ ಕುಂಚಾವರಂ, ಮಿರಿಯಾಣ, ಮಾಶಾಳ ಭಾಗದಿಂದ ಬಂದಿದ್ದ ಕಾರ್ಯಕರ್ತರು ವಾಪಸಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು