ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಆವಿಷ್ಕಾರಗಳಿಗೆ ₹ 1 ಲಕ್ಷ ಕೋಟಿ ಮೀಸಲು: ಸಚಿವ ಭಗವಂತ ಖೂಬಾ

₹84 ಕೋಟಿ ಮೊತ್ತದ ವಿವಿಧ ಕಟ್ಟಡ, ಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮ
Published 20 ಫೆಬ್ರುವರಿ 2024, 15:32 IST
Last Updated 20 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಕಲಬುರಗಿ: ‘ಯುವಜನತೆಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಬಜೆಟ್‌ನಲ್ಲಿ ಸ್ಟಾರ್ಟಪ್‌ ಹಾಗೂ ವಿನೂತನ ಆವಿಷ್ಕಾರಗಳಿಗೆ ಉತ್ತೇಜನ ನೀಡಲು ₹ 1 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಇದರಿಂದಾಗಿ ಜಾಗತಿಕವಾಗಿ ನಮ್ಮ ದೇಶದ ಯುವಶಕ್ತಿ ಹೊಸ ಜ್ಞಾನಗಳನ್ನು ಸಂಪಾದಿಸಲಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಅಭಿಪ್ರಾಯ‍ಟ್ಟರು.

ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಧಾನಿಯವರು ವರ್ಚುವಲ್ ವೇದಿಕೆ ಮೂಲಕ ₹ 84 ಕೋಟಿ ಮೊತ್ತದ ವಿವಿಧ ಕಟ್ಟಡಗಳು ಹಾಗೂ ಪ್ರಯೋಗಾಲಯಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ವರ್ಷಗಳಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ದಿಕ್ಕು ಬದಲಾಗಿದೆ. ಯುವಜನತೆಗೆ ಕೌಶಲ ಕೊಡುವ ಬಗ್ಗೆ ಹಿಂದಿನ ಸರ್ಕಾರಗಳು ಯೋಚಿಸಿರಲಿಲ್ಲ. ಮೋದಿ ಅವರು ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದರಿಂದ ಲಕ್ಷಾಂತರ ಕುಟುಂಬಗಳು ಇಂದು ಸ್ವಯಂ ಉದ್ಯೋಗವನ್ನು ಮಾಡುತ್ತಿವೆ. ಮುದ್ರಾ ಸಾಲ ಯೋಜನೆಯ ಮೂಲಕ ಯುವಕರಿಗೆ ಸಾಲಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹೀಗಾಗಿ, ಗಣನೀಯ ಪ್ರಮಾಣದಲ್ಲಿ ನಿರುದ್ಯೋಗ ಕಡಿಮೆಯಾಗಿದೆ ಎಂದರು.

‘ಇಂದು ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಜಿಡಿಪಿ ಜಗತ್ತಿನ ಗಮನ ಸೆಳೆಯುವಂತಿದೆ. ಇದಕ್ಕೆ ಪೂರಕವಾಗಿ 2.60 ಲಕ್ಷ ತಜ್ಞರು ಹಾಗೂ ಸಾರ್ವಜನಿಕ ಕ್ಷೇತ್ರದ ಪರಿಣತರಿಂದ ಸಲಹೆಗಳನ್ನು ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದರಿಂದಾಗಿ, ದೇಶದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಗುಣಮಟ್ಟದ ಶಿಕ್ಷಣ ದೊರಕುವಂತಾಗಿದೆ. 2047ರ ಹೊತ್ತಿಗೆ ಭಾರತದ ವಿಶ್ವಗುರು ಆಗುವುದರಲ್ಲಿ ಸಂಶಯವಿಲ್ಲ’ ಎಂದು ಆಶಿಸಿದರು.

‘ಭಾರತದ ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಬಹುಶಿಸ್ತೀಯ ಜ್ಞಾನಶಾಖೆಗಳನ್ನು ಬೋಧಿಸಲಾಗುತ್ತಿತ್ತು. ವಿಜ್ಞಾನ, ವೈದ್ಯಕೀಯ, ಸಂಸ್ಕೃತಿ, ಅಧ್ಯಾತ್ಮ, ಯೋಗ ಹಾಗೂ ಗಣಿತಶಾಸ್ತ್ರದಲ್ಲಿ ಭಾರತದ ಕೊಡುಗೆಯನ್ನು ಇಡೀ ಜಗತ್ತು ಶ್ಲಾಘಿಸುತ್ತಿದೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ನಿರ್ಮಿಸಿರುವ ಎಂಜಿನಿಯರಿಂಗ್ ಲ್ಯಾಬ್, ಇನ್‌ಕ್ಯುಬೇಷನ್ ಮತ್ತು ಕೌಶಲ ಅಭಿವೃದ್ಧಿ ಕೇಂದ್ರ, ತರಗತಿಗಳ ಕೊಠಡಿ, ಇನ್‌ಸ್ಟ್ರುಮೆಂಟೇಶನ್ ಸೆಂಟರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಲೋಕಾರ್ಪಣೆಗೊಳಿಸಿದರು. ಪ್ರಧಾನಿಯವರು ಜಮ್ಮುವಿನಲ್ಲಿ ನೆರವೇರಿಸಿದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಸಿಯುಕೆಯಲ್ಲಿ ನೇರ ಪ್ರಸಾರ ಮಾಡಲಾಯಿತು. 

ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿದರು.

ಕುಲಸಚಿವ ಆರ್.ಆರ್.ಬಿರಾದಾರ ವೇದಿಕೆಯಲಿದ್ದರು. ಪ್ರೊ.ಅಂಕಿತಾ ಸತ್ಪತಿ ಹಾಗೂ ಪ್ರೊ.ಸ್ವಪ್ನಿಲ್ ಚಾಪೇಕರ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ವಂದೇಮಾತರಂ ಗೀತೆಯನ್ನು ಪ್ರೊ.ಜಯದೇವಿ ಜಂಗಮಶೆಟ್ಟಿ, ಪ್ರೊ.ಸ್ವಪ್ನಿಲ್ ಚಾಪೇಕರ್ ಪ್ರಸ್ತುತಪಡಿಸಿದರು.

ಕಟ್ಟಡಗಳನ್ನು ಪೂರ್ಣಗೊಳಿಸುವಲ್ಲಿ ಶ್ರಮಿಸಿದ ಎಂಜಿನಿಯರ್‌ ಇಷ್ಟಲಿಂಗಪ್ಪ ಮಹಾಗಾಂವ್ಕರ್, ಬಿ.ಶ್ರೀನಿವಾಸ, ಮಂಜುನಾಥ್ ಅವರನ್ನು ಸಚಿವರು ಸನ್ಮಾನಿಸಿದರು.

ಸಿಯುಕೆಯ ವಿವಿಧ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು 
ಸಿಯುಕೆಯ ವಿವಿಧ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು 

ಸಿಯುಕೆಗೆ ಓಪನ್ ಜಿಮ್ ನೀಡಿದ ಖೂಬಾ ಕೇಂದ್ರ ಸಚಿವ

ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಓಪನ್ ಜಿಮ್ ಮಂಜೂರು ಮಾಡಿದರು.  ಈ ವಿಚಾರವನ್ನು ಸಭೆಯಲ್ಲಿ ತಿಳಿಸಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ‘ಬುಧವಾರದಿಂದಲೇ ಕಾಮಗಾರಿ ಶುರುವಾಗಲಿದ್ದು ಒಂದು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT