ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಬೊಮ್ಮಾಯಿ ಮೇಲೆ ಹೆಚ್ಚಿದ ನಿರೀಕ್ಷೆ

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ನಗರಕ್ಕೆ ಭೇಟಿ
Last Updated 17 ಸೆಪ್ಟೆಂಬರ್ 2021, 3:00 IST
ಅಕ್ಷರ ಗಾತ್ರ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನ ಎಂದು ಹೆಸರು ಬದಲಾಯಿಸಿದ ಬಳಿಕ ನಡೆಯುತ್ತಿರುವ ಮೂರನೇ ವರ್ಷದ ಕಾರ್ಯಕ್ರಮವು ಇದೇ 17ರಂದು ನಗರದಲ್ಲಿ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿ ಅವರು ಇದೇ ಮೊದಲ ಬಾರಿಗೆ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಬರಲಿರುವ ಬೊಮ್ಮಾಯಿ ಅವರು ಮೊದಲಿಗೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದು, ನಂತರ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿರುವ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಸರ್ದಾರ್‌ ಪಟೇಲರ ಪ್ರತಿಮೆ, ಜಿಲ್ಲಾಧಿಕಾರಿ ಕಚೇರಿ ಇರುವ ಮಿನಿ ವಿಧಾನಸೌಧ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿ, ಐವಾನ್ ಇ ಶಾಹಿ ಅತಿಥಿ ಗೃಹ, ಜಗತ್ ವೃತ್ತದಲ್ಲಿ ಆಕರ್ಷಕ ವಿದ್ಯುತ್ ಅಲಂಕಾರವನ್ನು ಮಾಡಲಾಗಿದೆ. ಮುಖ್ಯಮಂತ್ರಿ ಅವರನ್ನು ಸ್ವಾಗತಿಸಲು ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.

ಸರ್ದಾರ್ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕೆಲ ಹೊತ್ತು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಎಸ್‌ವಿಪಿ ವೃತ್ತದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ. ಪೊಲೀಸ್ ಪರೇಡ್ ಮೈದಾನದಲ್ಲಿ ಮೈದಾನವನ್ನು ಸ್ವಚ್ಛಗೊಳಿಸಲಾಗಿದ್ದು, ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಗುರುವಾರ ರಾತ್ರಿ ವೇಳೆಗೆ ಪೂರ್ಣಗೊಂಡಿತ್ತು.

ಪೊಲೀಸರಿಂದ ತಾಲೀಮು: ವಿಮಾನ ನಿಲ್ದಾಣದಿಂದ ಬಸವರಾಜ ಬೊಮ್ಮಾಯಿ ಅವರು ಸಂಪುಟದ ಸಹೋದ್ಯೋಗಿಗಳೊಂದಿಗೆ ನೇರವಾಗಿ ಎಸ್‌ವಿಪಿ ವೃತ್ತಕ್ಕೆ ಬರಲಿದ್ದಾರೆ. ಹೀಗಾಗಿ, ವಿಮಾನ ನಿಲ್ದಾಣದಿಂದ ವೃತ್ತದವರೆಗೆ ಕರೆತರುವ ನಿಟ್ಟಿನಲ್ಲಿ ಪೊಲೀಸರು ಪೈಲಟ್ ವಾಹನ,
ಮುಖ್ಯಮಂತ್ರಿ ಅವರ ಕಾರು, ಆಂಬುಲೆನ್ಸ್ ಸೇರಿದಂತೆ ವಿವಿಧ ವಾಹನಗಳನ್ನು ಚಾಲನೆ ಮಾಡುವ ತಾಲೀಮನ್ನು ಸಂಜೆ ನಡೆಸಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಎಸ್‌ವಿಪಿ ವೃತ್ತದಲ್ಲಿ ಒಂದು ಬದಿಯ ಸಂಚಾರವನ್ನು ತಡೆಯಲಾಗಿತ್ತು.

ಬೊಮ್ಮಾಯಿ ಅವರು ತಮಗೆ ಝೀರೊ ಟ್ರಾಫಿಕ್ ಸೌಲಭ್ಯ ಬೇಡ ಎಂದು ಅಧಿಕಾರ ವಹಿಸಿಕೊಂಡ ಹೊತ್ತಿನಲ್ಲಿ ಹೇಳಿದ್ದಾರೆ. ಹೀಗಾಗಿ, ಅವರಿಗೆ ಯಾವ ಬಗೆಯ ಭದ್ರತೆ ನೀಡಬೇಕು ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಭದ್ರತೆಗೆ ಸಾವಿರಕ್ಕೂ ಅಧಿಕ ಪೊಲೀಸರು

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಅವರು ಭಾಗವಹಿಸಲಿರುವುದರಿಂದ ಭದ್ರತೆಗಾಗಿ ಕಲಬುರ್ಗಿ ಪೊಲೀಸ್‌ ಕಮಿಷನರ್ ಡಾ. ವೈ.ಎಸ್‌. ರವಿಕುಮಾರ್ ಅವರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಇಬ್ಬರು ಡಿಸಿಪಿಗಳು, ನಾಲ್ವರು ಎಸಿಪಿಗಳು, 13 ಜನ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು, 23 ಪಿಎಸ್‌ಐಗಳು, 58 ಎಎಸ್‌ಐಗಳು, 426 ಹೆಡ್‌ಕಾನ್‌ಸ್ಟೆಬಲ್‌ಗಳು, 200 ಗೃಹ ರಕ್ಷಕ ದಳದ ಸಿಬ್ಬಂದಿ, ಎರಡು ಕೆಎಸ್‌ಆರ್‌ಪಿ ತುಕಡಿಗಳು, 5 ಸಿಎಆರ್‌ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಪ್ರಗತಿ ಕೇಂದ್ರಕ್ಕೆ ಚಾಲನೆ

ಬೆಳಿಗ್ಗೆ 9ಕ್ಕೆ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ಮಾಡಿದ ಬಳಿಕ ವಿವಿಧ ಕಾಮಗಾರಿಗಳಿಗೆ ಅಲ್ಲಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಚಾಲನೆ ನೀಡಲಿದ್ದು, ನಂತರ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಐವಾನ್ ಇ ಶಾಹಿ ರಸ್ತೆಯಲ್ಲಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಭೇಟಿ ನೀಡಲಿದ್ದಾರೆ.

ಸಂಘದ ವತಿಯಿಂದ ಆರಂಭಿಸಲಾಗುವ ಪ್ರಗತಿ ಕೇಂದ್ರ ಹಾಗೂ ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

ಕಲಬುರ್ಗಿಗೆ ಕೊಡುಗೆ ನೀಡುವರೇ ಸಿ.ಎಂ

ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಬಸವರಾ ಬೊಮ್ಮಾಯಿ ಅವರು ಯಡಿಯೂರಪ್ಪ ಸರ್ಕಾರದ ಮೊದಲ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಹೀಗಾಗಿ ಸಹಜವಾಗಿಯೇ ಅವರು ಭೇಟಿ ನೀಡುತ್ತಿರುವುದರಿಂದ ಹಲವು ನಿರೀಕ್ಷೆಗಳು ಗರಿಗೆದರಿವೆ. ಆ ಬಗ್ಗೆ ಶುಕ್ರವಾರ ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಮಾಡುವರೇ ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಮುಖ್ಯವಾಗಿ ಬೆಂಗಳೂರಿನಲ್ಲಿರುವ 371 (ಜೆ) ಕೋಶವನ್ನು ಕಲಬುರ್ಗಿಗೆ ಸ್ಥಳಾಂತರ ಮಾಡುವುದು, ಯಡಿಯೂರಪ್ಪ ಅವರು ನಗರಕ್ಕೆ ಬಂದಾಗ ಘೋಷಿಸಿದ್ದ ಪ್ರತ್ಯೇಕ ಸಚಿವಾಲಯ ಆರಂಭಿಸುವ ಭರವಸೆ, ಕಲ್ಯಾಣ ಕರ್ನಾಟಕ ಭಾಗದ ವಿಶ್ವವಿದ್ಯಾಲಯ ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿ ಹಾಗೂ ಕೆಕೆಆರ್‌ಡಿಬಿಗೆ ಈಗ ನೀಡುತ್ತಿರುವ ₹ 1500 ಕೋಟಿ ಅನುದಾನವನ್ನು ₹ 2 ಸಾವಿರ ಕೋಟಿಗೆ ಹೆಚ್ಚಿಸುವ ಬಗ್ಗೆ ಸಿಹಿ ಸುದ್ದಿ ಕೊಡಲಿದ್ದಾರೆ ಎಂಬ ಆಸೆಯಿಂದ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT