ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡುವ ಸಂಕಟಗಳೇ ಕಾವ್ಯಗಳಾಗಲಿ’

ನಾಗಾವಿ ಘಟಿಕಾಸ್ಥಾನದ ಆವರಣದಲ್ಲಿ ಕವಿಗೋಷ್ಠಿ
Last Updated 15 ನವೆಂಬರ್ 2020, 2:42 IST
ಅಕ್ಷರ ಗಾತ್ರ

ಚಿತ್ತಾಪುರ: ಸಮಾಜವು ಎಲ್ಲಾ ರಂಗಗಳಲ್ಲಿ ಅಸಮಾನತೆಯಿಂದ ತಲ್ಲಣಿಸುತ್ತಾ ಸಂಕಟದಿಂದ ನರಳುತ್ತಿದೆ. ಹೃದಯಕ್ಕೆ ಕಾಡುವ ಸಂಕಟಗಳೆ ಕಾವ್ಯಗಳಾಗಬೇಕು ಎಂದು ಸಾಹಿತಿ ಕೆ.ಎಂ ವಿಶ್ವನಾಥ ಮರತೂರ ಹೇಳಿದರು.

ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿನ ಘಟಿಕಾಸ್ಥಾನದ (ಅರವತ್ತು ಕಂಬದ ದೇಗುಲ) ಆವರಣದಲ್ಲಿ ಈಚೆಗೆ ಸಾಹಿತ್ಯ- ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ಲೋಕದ ತಲ್ಲಣಗಳು’ ಕುರಿತ ಕವಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಟ್ಟುಪಾಡುಗಳಿಗೆ ಬಿದ್ದ ಸಾಹಿತ್ಯ ಬಹುಕಾಲ ಉಳಿಯಲಾರದು. ಬದುಕಿನಲ್ಲಿ ಅನುಭವಿಸಿದ ನೋವುಗಳು ಅಕ್ಷರಗಳಾಗಿ ಹೊರಬರಬೇಕು. ಹೊಗಳುವ ಮತ್ತು ತೆಗಳುವ ಸಾಹಿತ್ಯ ಇಂದಿನ ಅವಶ್ಯಕತೆಯಲ್ಲ. ಕವಿಯ ಮನಸ್ಸು ತಟ್ಟುವ ಸುತ್ತಲಿನ ಪರಿಸರದಲ್ಲಿನ ತೊಳಲಾಟಗಳು ಕಾವ್ಯದ ಸಾಲುಗಳಾಗಿ ರೂಪುಗೊಳ್ಳಬೇಕು. ಸುಂದರ ಮತ್ತು ಸಮಾನತೆಯ ಸಮಾಜ ನಿರ್ಮಿಸಲು ಕವಿ ಮತ್ತು ಸಾಹಿತಿಗಳು ಪ್ರಬುದ್ಧ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ಹೇಳಿದರು.

ಯುವ ಉದಯೋನ್ಮುಖ ಬರಹಗಾರರು ಕುವೆಂಪು ಅವರ ಸಮಗ್ರ ಸಾಹಿತ್ಯ ಅಧ್ಯಯನ ಮಾಡಬೇಕು. ತರಾಸು, ಬೇಂದ್ರೆ, ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಮುಂತಾದ ನಾಡಿನ ಹಿರಿಯ ಸಾಹಿತಿಗಳ ಸಾಹಿತ್ಯವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಕಲ್ಯಾಣ ನಾಡಿನ ಉದಯೋನ್ಮುಖ ಕವಿ, ಸಾಹಿತಿಗಳ ಸಾಹಿತ್ಯವನ್ನು ನಾಡಿಗೆ ಪರಿಚಯಿಸಲು ಆಸಕ್ತಿ ತೋರುವ ಹೃದಯಗಳ ಕೊರತೆ ಕಾಡುತ್ತಿದೆ. ತಮ್ಮ ಮೊದಲ ಕೃತಿ ಪ್ರಕಟಿಸಲು ಯುವ ಸಾಹಿತಿಗಳು ತೀವ್ರ ಪರದಾಡುವ ಪರಿಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವ ಕವಿಗಳಾದ ಮಡಿವಾಳಪ್ಪ ಹೇರೂರ, ಕಿರಣಕುಮಾರ ಕುಮಸಿ, ದೇವಿಂದ್ರ ಕರದಳ್ಳಿ, ಕಾಶಿನಾಥ ಹಿಂದಿನಕೇರಿ, ನಾಗಯ್ಯಸ್ವಾಮಿ ಅಲ್ಲೂರ್, ವೀರಣ್ಣ ಯಾರಿ, ದಯಾನಂದ ಖಜೂರಿ, ರವಿಕುಮಾರ ಕೋಳಕೂರ, ಚಂದ್ರು ಕರಣಿಕ್, ಖೇಮಲಿಂಗ ಬೆಳಮಗಿ ಅವರು ಸ್ವರಚಿತ ಕವನ ವಾಚಿಸಿದರು.

ವಿಕ್ರಮ್ ನಿಂಬರ್ಗಾ ಅಧ್ಯಕ್ಷತೆ ವಹಿಸಿದ್ದರು. ರಾಯಪ್ಪ ಕೊಟಗಾರ ನಿರೂಪಿಸಿದರು. ಶಿಕ್ಷಕ ಸುನಿಲಕುಮಾರ ರಾಠೋಡ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT