ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಐಕ್ಯ ಮುರಿಯುವ ಬಿಜೆಪಿ, ಕಾಂಗ್ರೆಸ್: ಎಂ.ಆರ್.ಶೆಣೈ

ಸಿಐಟಿಯು, ಕೆಪಿಆರ್‌ಎಸ್‌ನಿಂದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕುರಿತು ಕಾರ್ಯಾಗಾರ
Last Updated 2 ಮಾರ್ಚ್ 2020, 10:30 IST
ಅಕ್ಷರ ಗಾತ್ರ

ಕಲಬುರ್ಗಿ: ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತರುತ್ತಿರುವ ನೀತಿಗಳ ಉದ್ದೇಶ ಜನರ ಐಕ್ಯವನ್ನು ಮುರಿಯುವುದಾಗಿದೆ ಎಂದು ಬ್ಯಾಂಕ್‌ ನೌಕರರ ಸಂಘಟನೆಯ ರಾಜ್ಯ ನಾಯಕರಾದ ಎಂ.ಆರ್‌.ಶೆಣೈ ಟೀಕಿಸಿದರು.

ಸಿಐಟಿಯು ಕಾರ್ಮಿಕ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕಗಳ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ದೇಶದ ಆರ್ಥಿಕ ಬಿಕ್ಕಟ್ಟಿನ ನೀತಿಗಳು, ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್‌), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಸಿಆರ್‌) ಜಾರಿಯಿಂದ ಉಂಟಾಗುವ ಪರಿಣಾಮಗಳ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈ ಎರಡೂ ಪಕ್ಷಗಳ ಮುಖ್ಯ ಉದ್ದೇಶ ಉದ್ಯಮಿಗಳ ಹಿತವನ್ನು ಕಾಪಾಡುವುದಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಗರೀಬಿ ಹಠಾವೊ ಘೋಷಣೆ ಮಾಡಿತ್ತು. ಆದರೆ, ಇಲ್ಲಿಯವರೆಗೆ ಭಾರತ ಬಡತನದಿಂದ ಮುಕ್ತವಾಗಿಲ್ಲ. ಬಿಜೆಪಿಯ ಪೊಳ್ಳು ಭರವಸೆ, ಜನವಿರೋಧಿ ನೀತಿಗಳನ್ನು ಕಾರ್ಮಿಕ ವರ್ಗವು ವಿರೋಧಿಸಬೇಕಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ. ಕಾರ್ಮಿಕರ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ. ಜನರ ಹಿತರಕ್ಷಣೆ ಮಾಡಬೇಕಿದ್ದ ಸರ್ಕಾರಗಳು ಜನರ ಕೂಗನ್ನೇ ಕಡೆಗಣಿಸುತ್ತಿವೆ. ಆದರೂ ಇಂತಹ ಸರ್ಕಾರಗಳ ವಿರುದ್ಧ ಜನ ಏಕೆ ದಂಗೆ ಏಳುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ದೇಶದಲ್ಲಿ ಮೋದಿ ಹಿಟ್ಲರ್‌ ರಾಜ್ಯಭಾರ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಗಂಡಾಂತರ ಪರಿಸ್ಥಿತಿ ಎದುರಾಗಿದೆ. ಇಂತಹ ನೀತಿಗಳ ವಿರುದ್ಧ ಈಗಾಗಲೇ ದೇಶದೆಲ್ಲೆಡೆ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಸಿಐಟಿಯು ಜಿಲ್ಲಾ ಸಂಚಾಲಕಿ ಶಾಂತಾ ಘಂಟಿ, ಗಂಗಮ್ಮ ಬಿರಾದಾರ, ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ, ಪಾಂಡುರಂಗ ಮಾವಿನಕರ, ರಾಜಶ್ರೀ ಸಿಮೆಂಟ್‌ ಕಂಪನಿ ಯೂನಿಯನ್‌ ಅಧ್ಯಕ್ಷ ಅಯ್ಯಪ್ಪ, ಆನಂದ ಎನ್‌.ಜೆ, ಸುಧಾಮ ಧನ್ನಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಿದ್ಧಲಿಂಗ ಪಾಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT