ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ ರೈಲು ಓಡಿದ್ದು ಒಂದೇ ವಾರ: ಸಚಿವ ಪ್ರಿಯಾಂಕ್ ಖರ್ಗೆ

Published 22 ಏಪ್ರಿಲ್ 2024, 16:30 IST
Last Updated 22 ಏಪ್ರಿಲ್ 2024, 16:30 IST
ಅಕ್ಷರ ಗಾತ್ರ

ಕಲಬುರಗಿ: ‘ಸಂಸದ ಡಾ.ಉಮೇಶ ಜಾಧವ ಅವರು ವಂದೇ ಭಾರತ ರೈಲು ಬಿಡಿಸಿದ್ದೆ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ವಂದೇ ಭಾರತ ರೈಲು ನಡೆದಿದ್ದು ಕೇವಲ ಒಂದೇ ವಾರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಗರದ ಕಪನೂರು ಬಡಾವಣೆಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಐದು ವರ್ಷಗಳ ಕೆಲಸದ ಲೆಕ್ಕ ಕೊಡುವಂತೆ ಜನರು ಕೇಳುತ್ತಿದ್ದಾರೆ. ಜಾಧವರಿಗೆ ಜನರ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಹೋದಲೆಲ್ಲ ಅವರದ್ದೇ ಪಕ್ಷದ ಕಾರ್ಯಕರ್ತರು ಜಾಧವ ಗೋ ಬ್ಯಾಕ್ ಎಂದು ಕೂಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸ್ವಂತ ಪರಿವಾರವನ್ನೇ ನೋಡಿಕೊಳ್ಳಲು ಆಗದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ತಮ್ಮ ಪರಿವಾರ ಎಂದು ಕರೆದಿದ್ದಾರೆ’ ಎಂದು ಮೋದಿ ಪರಿವಾರ ಜಾಹೀರಾತು ಪ್ರಸ್ತಾಪಿಸಿ ವ್ಯಂಗ್ಯವಾಡಿದರು.

‘ಜಾಧವ ಅವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅವರು ಓದಿದ್ದು ಕಾಂಗ್ರೆಸ್ ಕಟ್ಟಿಸಿದ್ದ ಕಾಲೇಜಿನಲ್ಲಿ. ಕೆಲಸ ಸಿಕ್ಕಿದ್ದು ಕಾಂಗ್ರೆಸ್ ಸ್ಥಾಪಿಸಿದ ಆಸ್ಪತ್ರೆಯಲ್ಲಿ. ರಾಜಕೀಯ ಪ್ರವೇಶ ಮಾಡಿ ಶಾಸಕರೂ ಆಗಿದ್ದು ಕಾಂಗ್ರೆಸ್‌ನಿಂದ. ಇಷ್ಟೆಲ್ಲ ಮಾಡಿದ ಕಾಂಗ್ರೆಸ್ ಮತ್ತೇನು ಮಾಡಬೇಕಿತ್ತು’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ‘ಇದು ಅತ್ಯಂತ ಮಹತ್ವದ ಚುನಾವಣೆ. ಇದು ಕೇವಲ ನನ್ನ ಚುನಾವಣೆಯಲ್ಲ.‌ ದೇಶ ಹಾಗೂ ಕಲಬುರಗಿ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆ. ಈ ಸಲ ನನ್ನನ್ನು ಆಯ್ಕೆ ಮಾಡಿ ಅಭಿವೃದ್ಧಿಗೆ ಸಹಕರಿಸಿ’ ಎಂದು ಮನವಿ ಮಾಡಿದರು.

ಸಚಿವ ರಹೀಂ ಖಾನ್ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಕಲ್ಯಾಣ ಕರ್ನಾಟಕ ಜನರ ಸೇವೆ ಮಾಡುತ್ತಿದೆ. ಈಗ ಮತ್ತೊಮ್ಮೆ ನಿಮ್ಮ ಬಳಿಗೆ ಮತಯಾಚನೆಗೆ ಬಂದಿದ್ದು, ಆಶೀರ್ವಾದ ಮಾಡಿ’ ಎಂದರು

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಗಟ್ಟಿಮುಟ್ಟಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದರು. ಆದರೆ ಕಾಂಗ್ರೆಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಬಿ.ಡಿ. ಜತ್ತಿ ಸೇರಿದಂತೆ ಹಲವರನ್ನು ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಿತ್ತು’ ಎಂದು ಹೇಳಿದರು.

ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಒಳಿತು ಹಾಗೂ ಸಂವಿಧಾನದ ರಕ್ಷಣೆಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ‌. ಬಿಜೆಪಿ ಕೇವಲ ಅಲ್ಪಸಂಖ್ಯಾತರ ವಿರೋಧಿಯಲ್ಲ, ಅದು ಎಲ್ಲರ ವಿರೋಧಿ’ ಎಂದು ಟೀಕಿಸಿದರು.

ಬಿಜೆಪಿಯ ಹಲವು ಕಾರ್ತಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಅರವಿಂದ ಅರಳಿ, ಕಾಂಗ್ರೆಸ್ ಜಿಲ್ಲಾ ಘಟಕದ ಅದ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ರೇಣುಕಪ್ಪ ಪೊಲೀಸ್ ಪಾಟೀಲ, ದೇವೇಂದ್ರಪ್ಪ ಮರತೂರು, ರಾಜು ಕಪನೂರು, ದೇವೇಂದ್ರಪ್ಪ ಕಪನೂರು, ರಾಜಗೋಪಾಲರೆಡ್ಡಿ, ಲಚ್ಚಪ್ಪ ಜಮಾದಾರ್, ರಮೇಶ ಬಿರಾದಾರ ಉಪಸ್ಥಿತರಿದ್ದರು.

ಕಲಬುರಗಿಯ ಗಂಗಾನಗರದಲ್ಲಿ ಸೋಮವಾರ ನಡೆದ ಪ್ರಚಾರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಿದವರಿಗೆ ಬಾವುಟ ನೀಡಿ ಬರಮಾಡಿಕೊಂಡ ಮುಖಂಡರು
ಕಲಬುರಗಿಯ ಗಂಗಾನಗರದಲ್ಲಿ ಸೋಮವಾರ ನಡೆದ ಪ್ರಚಾರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಿದವರಿಗೆ ಬಾವುಟ ನೀಡಿ ಬರಮಾಡಿಕೊಂಡ ಮುಖಂಡರು

Cut-off box - ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ ಗಂಗಾ ನಗರದಲ್ಲಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಪ್ರಚಾರ ಕಚೇರಿಯನ್ನು ಸೋಮವಾರ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಿದರು. ಇದೇ ವೇಳೆ ಗಂಗಾ ನಗರ ಮಾಣಿಕೇಶ್ವರಿ ಕಾಲೊನಿ ಚೌಡೇಶ್ವರಿ ಕಾಲೊನಿ ರಾಘವೇಂದ್ರ ಕಾಲೊನಿ ನ್ಯೂ ರಾಘವೇಂದ್ರ ಕಾಲೊನಿ ಸೇರಿ ವಿವಿಧ ಗ್ರಾಮಗಳ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಮುಖಂಡ ಮಾಲೀಕಯ್ಯ ಗುತ್ತೇದಾರ ಮಾತನಾಡಿ ‘ಬಿಜೆಪಿಯಲ್ಲಿನ ಉಸಿರುಗಟ್ಟುವ ವಾತಾವರಣದಿಂದಾಗಿ ಮರಳಿ ಕಾಂಗ್ರೆಸ್‌ಗೆ ಬಂದಿದ್ದೇನೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ರಾಧಾಕೃಷ್ಣ ಅವರನ್ನು ಗೆಲ್ಲಿಸಬೇಕು’ ಎಂದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ ‘ಮಾಲೀಕಯ್ಯ ಅವರಿಂದಾಗಿ ಪಕ್ಷಕ್ಕೆ ಶಕ್ತಿ ಬಂದಿದೆ. ಅವರ ಮಾರ್ಗದರ್ಶನದಲ್ಲಿ ರಾಧಾಕೃಷ್ಣ ಅವರಿಗೆ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು’ ಎಂದು ಹೇಳಿದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಮುಖಂಡರಾದ ಅನುಪಮಾ ರಮೇಶ ಕಮಕನೂರ ರಾಜಗೋಪಾಲ್ ರೆಡ್ಡಿ ಸಂದೇಶ ಕಮಕನೂರ ಪ್ರಕಾಶ ಕಮಕನೂರ ವಿಜಯಕುಮಾರ್ ಹದಗಲ್ ನಿಂಗರಾಜ ಕಣ್ಣಿ ಹಾಜರಿದ್ದರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಸುಂದರನಗರ ಗೋದುತಾಯಿ ನಗರ ಹಾಗೂ ಕಲಬುರಗಿ ಹೈಕೋರ್ಟ್‌ ಪೀಠದ ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಹಾಲ್‌ನಲ್ಲಿ ಚುನಾವಣಾ ಪ್ರಚಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT