ಭಾನುವಾರ, ಸೆಪ್ಟೆಂಬರ್ 25, 2022
29 °C
ವಾಡಿಯಲ್ಲಿ ಚಿತ್ತಾಪುರ ತಾಲ್ಲೂಕು ಮಟ್ಟದ ಕಾಂಗ್ರೆಸ್ ‘ಯುವಘರ್ಜನೆ’

‘ಜನರನ್ನು ಮೂರ್ಖರನ್ನಾಗಿಸಿದ್ದೇ ಮೋದಿ ಸಾಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ‘ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ? ಜನರನ್ನು ಮೂರ್ಖರನ್ನಾಗಿ ಮಾಡಿದ್ದೇ ಮೋದಿಯವರ ಅತಿದೊಡ್ಡ ಸಾಧನೆ’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮಹಮ್ಮದ್ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಯುವ ಘಟಕದ ವತಿಯಿಂದ ಪಟ್ಟಣದಲ್ಲಿ ಜರುಗಿದ ಚಿತ್ತಾಪುರ ತಾಲ್ಲೂಕು ಮಟ್ಟದ ಯುವಘರ್ಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರ ಭಾವನೆ ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿಯವರಿಗೆ ಕರಗತವಾಗಿದೆ. ಬೆಲೆ ಏರಿಕೆ, ಭ್ರಷ್ಟಾಚಾರ ತಡೆಗಟ್ಟಲು ಬಿಜೆಪಿಗೆ ಮತ ಹಾಕಿ ಎಂದು ಮೋದಿ ಮನವಿ ಮಾಡಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ, ಕಪ್ಪು ಹಣ ತರುವುದಾಗಿ ನೀಡಿದ್ದ ಭರವಸೆಗಳು ಎಲ್ಲಿಗೆ ಹೋದವು’ ಎಂದು ಪ್ರಶ್ನಿಸಿದ ಅವರು, ಜನರ ಸಮಸ್ಯೆಗಳ ಬಗ್ಗೆ ನಾವು ಮಾತನಾಡಿದರೆ ಕೇಸರಿ ಶಾಲು, ಕಾಶ್ಮೀರದ ಬಗ್ಗೆ ಮಾತಾಡ್ತಾರೆ. ಜಾತಿ ಧರ್ಮಗಳ ಹೆಸರಲ್ಲಿ ಏಕತೆ ಮುರಿದು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವುದು ಬಿಜೆಪಿಯ ಅನೈತಿಕ ನಡೆ’ ಎಂದು ಕಿಡಿಕಾರಿದರು.

‘ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದಿಡುತ್ತಿರುವ ಪ್ರಿಯಾಂಕ್ ಅವರು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದ್ದಾರೆ. ಅವರನ್ನು ಸೋಲಿಸಬೇಕು ಎನ್ನುವ ಗುರಿ ಹೊಂದಿದ್ದಾರೆ. ಚಿತ್ತಾಪುರ ಜನರು ಅಭಿವೃದ್ಧಿಯ ಚಿಂತನೆಯ ಪ್ರಿಯಾಂಕ್ ಅವರ ಪರ ಧ್ವನಿ ಎತ್ತಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಿಯಾಂಕ್ ಖರ್ಗೆ ಸಚಿವರಾಗುತ್ತಾರೆ. ಮುಂದಿನ ವರ್ಷಗಳಲ್ಲಿ ಅವರು ಮುಖ್ಯಮಂತ್ರಿಗಳೂ ಆಗಲಿದ್ದಾರೆ’ ಎಂದರು.

‘ಯುವಕರ ಎಲ್ಲ ಸಮಸ್ಯೆ ಬಗೆಹರಿಯಬೇಕಾದರೆ, 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ನೀವೆಲ್ಲ ಇದಕ್ಕೆ ಪರಿಶ್ರಮ ಪಡಬೇಕು’ ಎಂದು ಮನವಿ ಮಾಡಿದರು.

‘ಜನರನ್ನು ಜಾತಿ ಧರ್ಮದ ಆಧಾರದ ಮೇಲೆ ಒಡೆಯುವುದನ್ನು ತಡೆಯಲು‌ ಭಾರತ್ ಜೋಡೊ ಯಾತ್ರೆ ಕೈಗೊಳ್ಳಲಾಗುತ್ತಿದೆ.‌ ನೀವೆಲ್ಲ ಹೆಜ್ಜೆ ಹಾಕಬೇಕು. ನಾವೆಲ್ಲ ಒಂದೇ, ನಾವು ಮಾನವೀಯತೆ ಉಳ್ಳವರು ಎಂದು ಸಾಬೀತುಪಡಿಸಿ’ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಯುವ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿದರು.

ಸುಭಾಷ ರಾಠೋಡ, ಮೆಹಮೂದ್ ಸಾಹೇಬ್, ಶಂಕ್ರಯ್ಯ ಸ್ವಾಮಿ ಮದ್ರಿ, ಟೋಪಣ್ಣ ಕೋಮಟೆ, ಶಿವಾನಂದ ಪಾಟೀಲ, ಅಜೀಜ್ ಶೇಟ್, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ, ತಾಲ್ಲೂಕು ಯುವ ಅಧ್ಯಕ್ಷ ಸಂಜಯ ಬುಳಕರ, ಬಸವರಾಜ ಚಿನಮಳ್ಳಿ ಇದ್ದರು.

 

‘ಚಿಂಚನಸೂರ ಕೊಡುಗೆ ಏನು’

ವಿಧಾನಪರಿಷತ್ ಸದಸ್ಯ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಕೋಲಿ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪ್ರಶ್ನಿಸಿದರು.

‘ಸಮಾಜಕ್ಕೆ ಏನೂ ಕೊಡುಗೆ ಕೊಡದ ಅವರ ಪತ್ನಿಗೆ ಉನ್ನತ ಸ್ಥಾನ ಕೊಡಿಸಿದ್ದಾರೆ. ಸಮಾಜದ ಬೇರೆ ಯಾರೂ ಅವರ ಕಣ್ಣಿಗೆ ಕಾಣಲಿಲ್ಲವೇ? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸದಿದ್ದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು. ಅದಕ್ಕೆ ಅವರೇ ಉತ್ತರ ನೀಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.