ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ದಲಿತ ಮುಖಂಡರಲ್ಲಿ ಸೈದ್ಧಾಂತಿಕ ದಿವಾಳಿತನ’

Published 29 ಫೆಬ್ರುವರಿ 2024, 15:38 IST
Last Updated 29 ಫೆಬ್ರುವರಿ 2024, 15:38 IST
ಅಕ್ಷರ ಗಾತ್ರ

ಕಲಬುರಗಿ: ‘ನಗರದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಆಯೋಜಿಸಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಆ ಪಕ್ಷದ ದಲಿತ ನಾಯಕರು ರಾಜಕೀಯ ಮತ್ತು ಅಭಿವೃದ್ಧಿಯ ವಿಚಾರಗಳನ್ನು ಬದಿಗಿಟ್ಟು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ತಮ್ಮ ಸೈದ್ಧಾಂತಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರು ಆಪಾದಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಸುಭಾಷ ರಾಠೋಡ್, ‘ಬಿಜೆಪಿಯ ದಲಿತ ಮುಖಂಡರು ಹೈಕಮಾಂಡ್ ಬರೆದುಕೊಟ್ಟಿದ್ದನ್ನು ಜನರ ಮುಂದೆ ಒಪ್ಪಿಸುವ ಮೂಲಕ ತಮ್ಮ ಬೌದ್ಧಿಕ ದಿವಾಳಿತನ ಪ್ರದರ್ಶಿಸಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್ ಅವರು ಹೈಕಮಾಂಡ್ ಓಲೈಕೆಗೆ ಇಂತಹ ಕೆಳಮಟ್ಟಕ್ಕೆ ಇಳಿದಿದ್ದಾರೆ. ಖರ್ಗೆ ಕುಟುಂಬ ಬಗ್ಗೆ ಮಾತಾಡುವ ಬಿಜೆಪಿಗರಿಗೆ ಆತ್ಮಸಾಕ್ಷಿ ಇದ್ದರೆ ಶಿಕಾರಿಪುರಕ್ಕೆ ಹೋಗಿ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣವನ್ನು ವಿರೋಧಿಸಲಿ’ ಎಂದು ಸವಾಲು ಹಾಕಿದರು.

‘ಮಹೇಶ್ ಅವರು ಖರ್ಗೆ ಬಗ್ಗೆ ಮಾತನಾಡಿ ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆ. ತಲೆಮಾರುಗಳಿಂದ ಶೋಷಣೆ ಮಾಡಿಕೊಂಡ ಬಂದವರ ಈಗಿನ ವಾರಸುದಾರರ ಆಸ್ತಿಯ ಬಗ್ಗೆ ಪ್ರಶ್ನಿಸುವುದನ್ನು ಬಿಟ್ಟು, ಶೋಷಿತರ ಪರ ನಿಲ್ಲುವ ಖರ್ಗೆ ಅವರ ಆಸ್ತಿ ಬಗ್ಗೆ ಕೇಳಿದ್ದು ಖಂಡನೀಯ’ ಎಂದರು.

ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿ, ‘ಖರ್ಗೆ ಅವರ ಕುಟುಂಬದ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವುದು ಸರಿಯಲ್ಲ. ಪ್ರಚಾರ ಮಾಡಿಕೊಳ್ಳಲಿ, ಟೀಕೆ ಮಾಡಲಿ. ಆದರೆ, ವೈಯಕ್ತಿಕ ಟೀಕೆ ಮಾಡಿದರೆ ನಾವು ಸುಮ್ಮನಿರಲ್ಲ’ ಎಂದು ಎಚ್ಚರಿಸಿದರು.

‘ಹೈಕಮಾಂಡ್ ಟಿಕೆಟ್ ನೀಡಿದ್ದರಿಂದ ಪ್ರಿಯಾಂಕ್ ಖರ್ಗೆ ಅವರು ಜನರಿಂದ ಗೆದ್ದು ಕೆಲಸ ಮಾಡುತ್ತಿದ್ದಾರೆ. ಖರ್ಗೆ ಅವರ ಅಳಿಯ ರಾಜಕಾರಣದಿಂದ ದೂರ ಇದ್ದರೂ ಅನಗತ್ಯವಾಗಿ ಎಳೆದು ತರಲಾಗಿದೆ. ಎನ್.ಮಹೇಶ್ ಅವರು ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದರು. ಕಾಂಗ್ರೆಸ್‌– ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರು ಆಗಿದ್ದಾಗ ಮಾತನಾಡದೆ ಈಗ ಮಾತಾಡುತ್ತಿದ್ದಾರೆ. ಚುನಾವಣೆಯ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಿಕಾ ಪರಮೇಶ್ವರಿ, ತಿಪ್ಪಣ್ಣ ಒಡೆಯರಾಜ, ಮಲ್ಲಿಕಾರ್ಜುನ, ಅಶೋಕ ವೀರನಾಯಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT