ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರಾಹುಲ್‌ ಗಾಂಧಿಯ ವಿಚಾರಣೆ ಕೈಬಿಡಿ'

Last Updated 23 ಜೂನ್ 2022, 2:59 IST
ಅಕ್ಷರ ಗಾತ್ರ

ಕಲಬುರಗಿ: ಕೇಂದ್ರದ ಬಿಜೆಪಿ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹಣಿಯಲು ಜಾರಿ ನಿರ್ದೇಶನಾಲಯವನ್ನು (ಇ.ಡಿ) ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಲಬುರಗಿ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಸದ್ಯಸರು ಜಿಲ್ಲಾಧಿಕಾರಿ ಕಚೇರಿ ಮುಂಭಾಗಬುಧವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಬಳಿಕ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸೈಯದ್ ಅಹಮ್ಮದ್, ‘ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಅವರನ್ನು ಅನಾಗತ್ಯವಾಗಿ ಸಿಲುಕಿಸಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರನ್ನು ಬಂಧಿಸುತ್ತಿರುವುದು ಖಂಡನೀಯ’ ಎಂದರು.

‘ಬಿಜೆಪಿ ಸರ್ಕಾರ ಪೊಲೀಸ್ ಬಲವನ್ನು ಬಳಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಕೆಲವರನ್ನು ಬಂಧಿಸಿ, ಹೆದರಿಸುವ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯ ಯಾವುದೇ ತಂತ್ರಕ್ಕೆ ನಾವು ಹೆದರುವುದಿಲ್ಲ. ರಾಹುಲ್‌ ಗಾಂಧಿ ಅವರನ್ನು ವಿಚಾರಣೆಯಿಂದ ಕೈಬಿಡುವವರೆಗೂ ನಾವು ಹೋರಾಟ ಮಾಡುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

‘ರಾಹುಲ್ ಗಾಂಧಿ ಅವರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ಕೈಬಿಡಬೇಕು. ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರು ಹಾಗೂಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು’ ಎಂದು ಕೋರಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶಿವಾನಂದ ಹೊನಗುಂಟಿ, ಮಜರ್ ಅಲಂಖಾನ್, ವಹಜ್ ಬಾಬಾ, ಹಣಮಂತ ಒಂಟಿ, ಅಜ್ಮಲ್ ಗೋಲಾ, ಈರಣ್ಣ ಝಳಕಿ, ಅಬ್ದುಲ್ ಹಮೀದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT