ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಕಲುಷಿತ ನೀರು ಪೂರೈಕೆ

Published 10 ಜೂನ್ 2024, 7:10 IST
Last Updated 10 ಜೂನ್ 2024, 7:10 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣಕ್ಕೆ ಭೀಮಾ ನದಿಯಿಂದ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ನದಿಯಲ್ಲಿ ಜಾಕ್‌ವೆಲ್ ಅಳವಡಿಸಿ ಆ ಮೂಲಕ ಟ್ಯಾಂಕಿಗೆ ನೀರು ಪೂರೈಕೆ ಮಾಡಿ ಅಲ್ಲಿಂದ ಪಟ್ಟಣದ ಎಲ್ಲಾ ವಾರ್ಡಗಳಿಗೂ ಕುಡಿಯಲು ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಸರಿಯಾದ ಶುದ್ಧೀಕರಣ ಘಟಕ ಇಲ್ಲದಿರುವುದರಿಂದ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಇದರಿಂದ ಕಾಯಿಲೆಗಳು ಬರುತ್ತಿವೆ’ ಎಂದು ಸಾರ್ವಜನಿಕರು ಹೇಳುತ್ತಾರೆ.

ಪಟ್ಟಣದಲ್ಲಿ ಸುಮಾರು 40 ಸಾವಿರ ಜನಸಂಖ್ಯೆ ಇದೆ. ಪುರಸಭೆಯವರು ವಾರದಲ್ಲಿ ಎರಡು ಬಾರಿ ಭೀಮಾ ನದಿಯಲ್ಲಿ ಹರಿಯುವ ನೀರನ್ನು ನೇರವಾಗಿ ಪೂರೈಕೆ ಮಾಡುತ್ತಾರೆ. ಜನರು ಅನಿವಾರ್ಯವಾಗಿ ಕಲುಷಿತ ನೀರು ಕುಡಿಯುತ್ತಾರೆ. ಕೆಲವರು ಸ್ನಾನಕ್ಕಾಗಿ, ಬಟ್ಟೆ ಒಗೆಯಲು ಬಳಸುತ್ತಾರೆ. ಅನುಕೂಲಸ್ಥರು ಶುದ್ಧೀಕರಣ ನೀರನ್ನು ಖರೀದಿ ಮಾಡಿ ಕುಡಿಯುತ್ತಾರೆ.

ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ಹಲವಾರು ಸಂಘಟನೆಗಳು ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ಹೋರಾಟ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೊಂದೆಡೆ ಸರ್ಕಾರ ಭೀಮಾ ಬ್ಯಾರೇಜ್ ಕಮ್ ಬ್ರಿಡ್ಜ್‌ನಿಂದ ಪಟ್ಟಣಕ್ಕೆ ಸುಮಾರು ₹ 82 ಕೋಟಿ ವೆಚ್ಚದಲ್ಲಿ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಕಾಮಗಾರಿ ಆರಂಭವಾಗಿ 5 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಈ ಕುರಿತು ಪುರಸಭೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಕೆಲಸ ನಡೆದಿದೆ ಮುಗಿಯುತ್ತದೆ ಎಂದು ಹೇಳುತ್ತಾರೆ. ಪುರಸಭೆಯ ಎಂಜಿನಿಯರ್ ಅಜಯ್ ಅವರನ್ನು ವಿಚಾರಿಸಿದಾಗ ನಾವು ಎಲ್ಲ ವಾರ್ಡ್‌ಗಳಿಗೂ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದೇವೆ. ವಾರ್ಡ್ ನಂ.2ರಲ್ಲಿ ಏನಾದರೂ ಒಂದು ಸಮಸ್ಯೆ ಆಗಿರಬೇಕು. ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತೇವೆ ಎನ್ನುತ್ತಾರೆ.

ತಾಲ್ಲೂಕು ವಕೀಲರ ಸಂಘದ ಸದಸ್ಯರಾದ ಸುರೇಶ್ ಆವಟೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಕುರಿತು ಮಾಹಿತಿ ನೀಡಿ, ‘ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ವಾರದಲ್ಲಿ ಎರಡು ಬಾರಿ ನೀರು ಪೂರೈಕೆ ಮಾಡಿದರೂ ಕುಡಿಯಲು ಯೋಗ್ಯವಿಲ್ಲ. ಸ್ನಾನ ಮಾಡಲು ಸಾಧ್ಯವಿಲ್ಲ. ಸುಮಾರು ವರ್ಷಗಳಿಂದ ಪರಿಸ್ಥಿತಿ ಸುಧಾರಣೆ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ 2 ವಾರ್ಡಿಗೆ ಪೂರೈಕೆ ಮಾಡುವ ನೀರು ಕೆಂಪು ಮತ್ತು ಹಳದಿ ಬಣ್ಣದಲ್ಲಿ ಇರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು
ಈಶ್ವರಪ್ಪ ಗವಣ್ಣ ಅಂಜುಟಗಿ, ನಿವೃತ್ತ ಪ್ರಾಚಾರ್ಯ
ಪುರಸಭೆಯವರ ಬೇಜವಾಬ್ದಾರಿಯಿಂದ ಪಟ್ಟಣದ ನಾಗರಿಕರು ಕಲುಷಿತ ನೀರು ಕುಡಿಯುವಂತಾಗಿದೆ
ಸುರೇಶ್ ಆವಟೆ, ತಾಲ್ಲೂಕು ವಕೀಲರ ಸಂಘದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT