ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿವಿ; ಘಟಿಕೋತ್ಸವ ಪ್ರಮಾಣ ಪತ್ರಕ್ಕೆ ಲಂಚ?

Last Updated 8 ಅಕ್ಟೋಬರ್ 2022, 5:54 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ಭವನದಲ್ಲಿ ಘಟಿಕೋತ್ಸವ ಪ್ರಮಾಣ ಪತ್ರವನ್ನು (ಕಾನ್ವೋಕೇಷನ್‌ ಸರ್ಟಿಫಿಕೇಟ್‌) ಹಣ ಕೊಟ್ಟವರಿಗೆ ತ್ವರಿತವಾಗಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.‌

ಕರ್ನಾಟಕ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಪದವಿ ಉತ್ತೀರ್ಣರಾದ ಪ್ರಮಾಣ ಪತ್ರ ಹಾಜರಿ ಪಡಿಸುವುದು ಸಾರ್ವಜನಿಕ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಹೀಗಾಗಿ, ನೇಮಕಾತಿಗೆ ಅರ್ಹತೆ ಪಡೆದ ಗುಲಬರ್ಗಾ ವಿಶ್ವವಿದ್ಯಾಲಯದ ಸಾವಿರಾರು ಪದವೀಧರರು ಪರೀಕ್ಷಾ ಭವನಕ್ಕೆ ಮುಗಿ ಬಿದ್ದಿದ್ದಾರೆ.

‘ಏಕಕಾಲಕ್ಕೆ ಅಪಾರ ಸಂಖ್ಯೆಯಲ್ಲಿ ಪದವೀಧರರು ಮೊರೆಯಿಟ್ಟಿರುವ ಕಾರಣ ಪ್ರಮಾಣ ಪತ್ರ ವಿತರಣೆಗೆ ವಿಶ್ವವಿದ್ಯಾಲಯದದ ಪರೀಕ್ಷಾ ಭವನದ ಆಡಳಿತ ಮಂಡಳಿಗೆ ಅಡ್ಡಿ ಆಗಿದೆ. ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದ 25 ದಿನಗಳ ಒಳಗೆ ಪ್ರಮಾಣಪತ್ರವನ್ನು ಅರ್ಜಿದಾರರ ಮನೆಗೆ ನೇರವಾಗಿ ಕಳುಹಿಸಲಾಗುತ್ತದೆ. ಆದರೆ, ದಾಖಲೆಗಳ ಪರಿಶೀಲನೆಗೆ ಪ್ರಮಾಣಪತ್ರ ಅಗತ್ಯವಿರುವ ಕಾರಣ 24 ಗಂಟೆಗಳ ಅವಧಿಯಲ್ಲಿ ಅದನ್ನು ರವಾನಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ತ್ವರಿತವಾಗಿ ಪ್ರಮಾಣ ಪತ್ರ ವಿತರಿಸಲು ಕೆಲ ಮಧ್ಯವರ್ತಿಗಳು ಅರ್ಜಿ ದಾರ ಪದವೀಧರರಿಗೆ ₹ 5 ಸಾವಿರದಿಂದ ₹10 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದವರಿಗೆ ಸತಾಯಿಸಲಾಗುತ್ತದೆ. ಇದರಲ್ಲಿ ಕೆಲ ಅಧಿಕಾರಿಗಳೂ ಶಾಮೀಲಾಗಿರುವ ಬಗ್ಗೆ ಅನುಮಾನವಿದೆ’ ಎಂದು ಅರ್ಜಿ ಸಲ್ಲಿಸಿದ ಪದವೀಧರರೊಬ್ಬರು ಆರೋಪ ಮಾಡಿದ್ದಾರೆ.

‘ಉಳ್ಳವರು ಹೆಚ್ಚಿನ ಹಣ ಕೊಟ್ಟು ಪ್ರಮಾಣ ಪತ್ರ ಪಡೆದರೆ, ಇಲ್ಲದವರು ಪರೀಕ್ಷಾ ಭವನದಲ್ಲೇ ಇಡೀ ದಿನ ಕಳೆಯಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ. ಕಚೇರಿ ಸಿಬ್ಬಂದಿಗೆ ಪ್ರಶ್ನಿಸಿದರೂ ಹಾರಿಕೆ ಉತ್ತರ ಸಿಗುತ್ತದೆ. ಇನ್ನೂ ಕೆಲವರು ದಬಾಯಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರಮಾಣಪತ್ರಕ್ಕಾಗಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ವಿಶೇಷ ಅಧಿಕಾರಿ ಜೊತೆಗೆ ಪರೀಕ್ಷಾ ಭವನಕ್ಕೆ ತೆರಳಿ ಭೇಟಿ ನೀಡಿದೆ. ಎಲ್ಲಾ ಸಿಬ್ಬಂದಿಗಳ ಸಭೆ ನಡೆಸಿ, ಸಂಬಂಧಪಡದ ವ್ಯಕ್ತಿಯನ್ನು ಕಚೇರಿಯಲ್ಲಿ ಪ್ರವೇಶಿಸಲು ಅವಕಾಶ ನೀಡದಂತೆ ಸೂಚಿಸಿದ್ದೇನೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಎಸ್‌.ಕಟ್ಟಿ ತಿಳಿಸಿದರು.

‘ಅರ್ಜಿದಾರರಿಗೂ ಪ್ರವೇಶ ನೀಡಬಾರದು. ಕೌಂಟರ್‌ಗಳಲ್ಲೇ ಅರ್ಜಿ ‍ಪಡೆದು, ಪ್ರಮಾಣ ಪತ್ರದ ಅರ್ಹರ ಪಟ್ಟಿ
ಯನ್ನು ನೋಟಿಸ್ ಬೋರ್ಡ್‌ಗೆ ಅಂಟಿಸಬೇಕು. ಪ್ರಮಾಣ ಪತ್ರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ತಿಳಿಸಿದ್ದೇನೆ’ ಎಂದರು.

ಈ ಬಗ್ಗೆ ಪ್ರತಿಕ್ರಿಯೆಗೆ ವಿಶ್ವವಿದ್ಯಾಲಯದ ಕುಲಪತಿಯವರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಲಭ್ಯವಾಗಲಿಲ್ಲ.

‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ’

‘ಹಣ ಪಡೆದು ಪ್ರಮಾಣ ಪತ್ರ ನೀಡುತ್ತಿರುವ ಬಗ್ಗೆ ಸಿಂಡಿಕೇಟ್ ಸದಸ್ಯರು, ವಿದ್ಯಾರ್ಥಿಗಳು ನೀಡಿದ ದೂರನ್ನು ಆಧರಿಸಿ ಪರಿಶೀಲಿಸಿದಾಗ, ಅಂತಹ ಬೆಳವಣಿಗೆ ಕಂಡು ಬಂದಿಲ್ಲ’ ಎಂದು ಡಾ.ಮೇಧಾವಿನಿ ಎಸ್‌.ಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿ ಕೊರತೆಯಿದೆ. ಸಕಾಲದಲ್ಲಿ ಪ್ರಮಾಣ ಪತ್ರ ವಿತರಿಸಲು ಕಂಪ್ಯೂಟರ್ ಸೆಂಟರ್, ಆಡಳಿತ ಮತ್ತು ಶೈಕ್ಷಣಿಕ ವಿಭಾಗದಿಂದ ನೆರವು ಪಡೆದಿದ್ದೇವೆ. ಕೆಲವು ಸ್ನಾತಕೋತ್ತರ ವಿದ್ಯಾರ್ಥಿಗಳ ನೆರವನ್ನೂ ಪಡೆಯಲಾಗಿದೆ’ ಎಂದು ಅವರು ಹೇಳಿದರು.

*ಸಾಮಾನ್ಯವಾಗಿ 25 ದಿನಗಳಲ್ಲಿ ಪ್ರಮಾಣ ಪತ್ರ ನೀಡುತ್ತೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿತ್ಯ 500 ಪ್ರಮಾಣ ಪತ್ರ ವಿತರಿಸುತ್ತಿದ್ದೇವೆ
–ಡಾ.ಮೇಧಾವಿನಿ ಎಸ್‌.ಕಟ್ಟಿ, ಮೌಲ್ಯಮಾಪನ ಕುಲಸಚಿವೆ, ಗುಲಬರ್ಗಾ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT