ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ತರಗತಿಗಳಲ್ಲಿ ಮೂಡಿದ ಲವಲವಿಕೆ

Last Updated 1 ಜನವರಿ 2021, 8:26 IST
ಅಕ್ಷರ ಗಾತ್ರ

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಹಲವು ಶಾಲೆ– ಕಾಲೇಜುಗಳಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಹಾಗೂ ದ್ವಿತಿಯ ಪಿಯು ತರಗತಿಗಳು ಆರಂಭವಾದವು. ಕಳೆದ ಎಂಟು ತಿಂಗಳಿಂದ ಮೌನ ಹೊದ್ದು ಮಲಗಿದ್ದ ತರಗತಿಗಳಲ್ಲಿ ಈಗ ಲವಲವಿಕೆ ಕಂಡುಬರುತ್ತಿದೆ.

ನಗರದ ಬಹುಪಾಲು ಶಾಲೆ– ಕಾಲೇಜುಗಳಲ್ಲಿ ಶೇ 60ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾದರು. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಹಾಜರಾತಿ ಕಡಿಮೆ ಕಂಡುಬಂದಿದೆ.

ಬೆಳಿಗ್ಗೆ 10ರ ಸುಮಾರಿಗೆ ಹಲವು ವಿದ್ಯಾರ್ಥಿ– ವಿದ್ಯಾರ್ಥಿನಿಯರು ಶಾಲೆಗಳತ್ತ ಹೆಜ್ಜೆ ಹಾಕಿದರು. ಪ್ರಾಂಶುಪಾಲರು, ಶಿಕ್ಷಕರು, ಉಪನ್ಯಾಸಕರು ಎದುರುಗೊಂಡು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಕೈಗೆ ಸ್ಯಾನಿಟೈಸರ್‌ ಹಾಕಿ, ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿದ ನಂತರ ತರಗತಿಗಳ ಒಳಗೆ ಬಿಡಲಾಯಿತು. ಒಂದು ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿ, ಅಂತರ ಕಾಯ್ದುಕೊಳ್ಳಲಾಯಿತು.

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕೂಡ ಶೇ 50 ಹಾಗೂ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಶೇ 40ರಷ್ಟು ಹಾಜರಾತಿ ಕಂಡುಬಂತು. ಶಿಕ್ಷಕಿಯರೇ ತರಗತಿಗಳ ಮುಂದೆ ಬಣ್ಣದ ರಂಗೋಲಿ ಹಾಕಿ ವಿದ್ಯಾರ್ಥಿನಿಯರನ್ನು ಸ್ವಾಗತಿಸಿದರು. ಹಲವು ಪಾಲಕರು ಸಹ ವಿದ್ಯಾರ್ಥಿನಿಯರನ್ನು ಕರೆತಂದು ಶಾಲೆಗಳ ಮುಂದೆ ಬಿಟ್ಟು ಹೋಗುತ್ತಿರುವುದು ಸಾಮಾನ್ಯವಾಗಿ ಕಂಡುಬಂತು. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ತರಗತಿಗಳು ಬೆಳಿಗ್ಗೆ 10.30ರಿಂದಲೇ ಮೊದಲ ತರಗತಿಗಳು ಆರಂಭವಾದವು. ಕನ್ಯಾ ಪ್ರೌಢಶಾಲೆಯಲ್ಲಿ 8 ಹಾಗೂ 9ನೇ ತರಗತಿ ವಿದ್ಯಾರ್ಥಿನಿಯರು ಕೂಡ ತರಗತಿಗೆ ಬಂದರು. ಅವರಿಗೆ ಪ್ರತ್ಯೇಕ ಕೋಣೆಯಲ್ಲಿ ತರಗತಿಗಳನ್ನು ಆರಂಭಿಸಲಾಯಿತು.

ಆದರೆ, ಮಾರ್ಕೆಟ್‌ ಪ್ರದೇಶದ ಎಂಪಿಎಚ್ಎಸ್‌ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 11.30ರವರೆಗೆ ಕೇವಲ ನಾಲ್ವರು ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು ಕಂಡುಬಂತು.

ಖಾಸಗಿ ಕಾಲೇಜುಗಳಲ್ಲಿ ಉತ್ತಮ ಹಾಜರಾತಿ: ಕಲಬುರ್ಗಿ ನಗರದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಎಸ್‌ಬಿಆರ್‌ ಪದವಿಪೂರ್ವ ವಸತಿ ಕಾಲೇಜು, ಎಸ್‌ಆರ್‌ಎನ್‌ ಮೆಹ್ತಾ, ಮದರ್‌ ತೆರೆಸಾ ಇಂಗ್ಲಿಷ್‌ ಮಾಧ್ಯಮ ಶಾಲೆ, ಮದರ್‌ ತೆರೆಸಾ ಇಂಗ್ಲಿಷ್‌ ಮಾಧ್ಯಮ ಶಾಲೆ, ಸರ್ವಜ್ಞ ಸ್ಕೂಲ್‌, ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ, ವಿಶಾಲ್‌ ಪದವಿಪೂರ್ವ ಕಾಲೇಜ್‌, ಎಸ್‌ಆರ್‌ಎನ್‌ ಮೆಹ್ತಾ ಸ್ಕೂಲ್‌, ಚಂದ್ರಕಾಂತ ಪಾಟೀಲ ಶಿಕ್ಷಣ ಸಂಸ್ಥೆ, ಜಾಜಿ ಶಿಕ್ಷಣ ಸಂಸ್ಥೆ ಸೇರಿದಂತೆ ಬಹುಪಾಲು ಖಾಸಗಿ ಕಾಲೇಜುಗಳಲ್ಲಿ ಶೇ 70ಕ್ಕೂ ಹೆಚ್ಚು ಮಕ್ಕಳು ತರಗತಿಗಳಿಗೆ ಹಾಜರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT