ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ತಪ್ಪಿಸಿ ಅಡಗಿದ್ದಾರೆ 16 ಮಂದಿ!

ದೆಹಲಿಯ ನಿಜಾಮುದ್ದಿನ್‌ ದರ್ಗಾ ಸಭೆಯಲ್ಲಿ ಪಾಲ್ಗೊಂಡು ಮರಳಿದವರ ಹುಡುಕಾಟ ತೀವ್ರ
Last Updated 31 ಮಾರ್ಚ್ 2020, 17:18 IST
ಅಕ್ಷರ ಗಾತ್ರ

ಕಲಬುರ್ಗಿ: ದೆಹಲಿಯ ನಿಜಾಮುದ್ದಿನ್‌ ದರ್ಗಾದ ಸಭೆಯಲ್ಲಿ ಪಾಲ್ಗೊಂಡು ನಗರಕ್ಕೆ ಮರಳಿದ 22 ಮಂದಿಯ ಹುಡುಕಾಟವನ್ನು ತೀವ್ರಗೊಳಿಸಲಾಗಿದೆ. ಮಂಗಳವಾರ ರಾತ್ರಿ 9ರವರೆಗೂ ಇಡೀ ಜಿಲ್ಲೆಯಲ್ಲಿ ಕೇವಲ 8 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಉಳಿದವರೆಲ್ಲ ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಅಧಿಕಾರಿಗಳ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ.

ನಗರದ ಇಸ್ಲಾಮಾಬಾದ್ ಕಾಲೊನಿಯಲ್ಲಿ –1, ವಾರ್ಡ್‌ ಸಂಖ್ಯೆ–4ರ ಬಿಲಾಲಾಬಾದ್‌ನ ಹೋಟೆಲ್‌ವೊಂದರಲ್ಲಿ ತಂಗಿದ್ದ–2, ಮೋಮಿನ್‌ಪುರ ಬಡಾವಣೆಯ ಖೂನಿ ಹವಾಲಾ ಪ್ರದೇಶದಲ್ಲಿ–1, ರೆಹಮತ್‌ನಗರ–3, ಖಮರುಲ್‌ ಇಸ್ಲಾಂ ಕಾಲಿನಿಯ ಗೋಲ್ಡ್‌ರೋಜ್‌ ಸ್ಕೂಲ್‌ ಎದುರಿಗೆ–1; ಹೀಗೆ ಅಲ್ಲಲ್ಲಿ ಎಂಟು ಮಂದಿಯನ್ನು ಪತ್ತೆ ಮಾಡಲಾಗಿದೆ.

ನಗರ ಹೊರವಲಯದ ಶಹಾಬಾದ್‌ವಾಡಿಯಿಂದಲೇ 8 ಮಂದಿ ಈ ಸಮಾವೇಶಕ್ಕೆ ತೆರಳಿದ್ದಾಗಿ ತಿಳಿದುಬಂದಿದೆ. ಎಲ್ಲರ ಹೆಸರು ಹಾಗೂ ವಿಳಾಸ ಪಟ್ಟಿ ಮಾಡಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಹುಡುಕಾಟ ನಡೆಸಿದ್ದಾರೆ. ದೆಹಲಿಗೆ ಹೋಗಿ ಬಂದವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿದೆ ಎನ್ನುವ ಸುದ್ದಿ ಹರಡಿದ ತಕ್ಷಣ ಹಲವರು ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡು, ಅಲ್ಲಲ್ಲಿ ಅಡಗಿ ಕುಳಿತಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಮತ್ತೆ ಆತಂಕದ ಕಾರ್ಮೋಡ:66 ವರ್ಷದ ವೃದ್ಧ ಸೇರಿ ಎಲ್ಲರೂ ಮಾರ್ಚ್‌ 18ರ ಹೊತ್ತಿಗೆ ಮರಳಿ ನಗರಕ್ಕೆ ಬಂದಿದ್ದರು. ಮಾರ್ಚ್‌ 23ರವರೆಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಇವರ ಪರಿಚಿತರು, ಸಂಪರ್ಕಿತರು, ಪ್ರಾರ್ಥನೆಯಲ್ಲಿ ಪಾಲ್ಗೊಂಡವರು, ವಾಸವಾ‌ಗಿದ್ದ ಕಾಲೊನಿಗಳಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ದೆಹಲಿಯ ನಿಜಾಮುದ್ದಿನ್‌ ದರ್ಗಾದಲ್ಲಿ ಮಾರ್ಚ್‌ 13ರಂದು ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 7 ಮಂದಿ ಕೋವಿಡ್‌–19 ಸೋಂಕಿನಿಂದ ಮೃತಪಟ್ಟು, ಇನ್ನೂ 24 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ಹೊರಬೀಳುತ್ತಿದ್ದಂತೆಯೇ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ನಗರದ ನಿವಾಸಿಗಳು ಬಚ್ಚಿಟ್ಟುಕೊಳ್ಳಲು ಮುಂದಾದರು.

ಅವರಲ್ಲಿ 66 ವರ್ಷದ ವೃದ್ಧ ತೀವ್ರ ಕೆಮ್ಮು, ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹೋಗುವಂತೆ ಮಸೀದಿಯ ಜನ ಸಾಕಷ್ಟು ಹೇಳಿದರೂ ಅವರು ಸ್ಪಂದಿಸಲಿಲ್ಲ. ಜನ ನೀಡಿದ ಮಾಹಿತಿ ಮೇರೆಗೆ ಅವರನ್ನು ಪತ್ತೆ ಮಾಡಲಾಗಿದೆ. ಇವರೊಂದಿಗೆ ಸಂಪರ್ಕದಲ್ಲಿದ್ದ ಯುವಕನೊಬ್ಬ ಬಡಾವಣೆಯಿಂದಲೇ ಪರಾರಿಯಾಗಿದ್ದಾನೆ ಎಂದು ತಿಳಿಸಲಾಗಿದೆ.

ಒಟ್ಟು ನಾಲ್ಕು ಪ್ರಕರಣಗಳು: ಮೃತಪಟ್ಟ ವೃದ್ಧ, ಅವರ ಪುತ್ರಿ ಹಾಗೂ ಚಿಕಿತ್ಸೆ ನೀಡಿದ ವೈದ್ಯ ಸೇರಿದಂತೆ ಕಲಬುರ್ಗಿ ನಗರದಲ್ಲಿ ಕೋವಿಡ್‌–19ನ ಮೂರು ಪ್ರಕರಣಗಳಷ್ಟೇ ಇಲ್ಲಿಯವರೆಗೆ ಬೆಳಕಿಗೆ ಬಂದಿದ್ದವು. ಮಂಗಳವಾರ ವೈದ್ಯನ ಪತ್ನಿಗೂ ಸೋಂಕು ಇರುವುದು ತಪಾಸಣೆಯಿಂದ ಗೊತ್ತಾಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ. ಆ ಮಹಿಳೆಯನ್ನೂ ಆಸ್ಪತ್ರೆಯ ಪ್ರತ್ಯೇಕಿಸಲಾದ ನಿಗಾದಲ್ಲಿ ಇರಿಸಲಾಗಿದೆ.

ಏತನ್ಮಧ್ಯೆ ವೈದ್ಯನಿಗೆ ಎರಡು ಬಾರಿ ಕೊರೊನಾ ತಪಾಸಣೆ ಮಾಡಲಾಗಿದ್ದು, ಎರಡರಲ್ಲಿಯೂ ನೆಗೆಟಿವ್ ಬಂದಿದೆ. ಹೀಗಾಗಿ, ಕೆಲವೇ ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT