ಮಂಗಳವಾರ, ಜನವರಿ 18, 2022
16 °C

ಭ್ರಷ್ಟಾಚಾರ; ಆರೋಪ ಸಾಬೀತುಪಡಿಸಿ- ಸ್ನೇಹಾ ಸೊಸೈಟಿಯ ಸದಸ್ಯೆ ಮನಿಷಾ ಚವ್ಹಾಣ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ನನ್ನ ಮೇಲೆ ಯಾವುದೇ ಆಧಾರ ಇಲ್ಲದೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸ್ನೇಹಾ ಸೊಸೈಟಿಯಲ್ಲಿ ನಾನು ಅಧ್ಯಕ್ಷ ಸ್ಥಾನದಲ್ಲಿ ಇದ್ದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆನೆ’ ಎಂದು ಸ್ನೆಹಾ ಸೊಸೈಟಿಯ ಸದಸ್ಯೆ ಮನಿಷಾ ಚವ್ಹಾಣ ಹೇಳಿದರು.

ಶನಿವಾರ ಪತ್ರಿಕಾಗೋಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ನಾನು ಭಾಗಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಸಿದ್ಧನಿದ್ದೇನೆ. ನನ್ನ ಮೇಲೆ ಆರೋಪ ಮಾಡಿದವರು ಇದಕ್ಕೆ ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.

‘ಡಿ.12ರಂದು ನನ್ನ ಮೇಲೆ ಮತ್ತು ನನ್ನ ಮನೆಯಲ್ಲಿದ್ದ ಬೀರಲಿಂಗ, ಮೌನೇಶ ಅವರ ಮೇಲೂ ಹಲ್ಲೆ ನಡೆದಿದೆ. ಈ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರು ರಾಜಿ ಮಾಡಲು ಯತ್ನಿಸಿದರು. ಆದಕ್ಕೆ ಅವರು ನಾವು ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದಾಗ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ದೂರಿದರು.

‘ಪ್ರಕರಣದಲ್ಲಿ ನನ್ನ ತಪ್ಪು ಇಲ್ಲ ಎಂದು ಗೊತ್ತಿದ್ದರೂ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಲೆಕ್ಕಪತ್ರ ಇದ್ದುದು ಕಚೇರಿಯಲ್ಲಿ. ಆದರೆ, ನನ್ನ ಮನೆಗೆ ಬಂದು ಹಲ್ಲೆ ನಡೆಸಿರುವುದರ ಉದ್ದೇಶ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.‌

‘ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಮಂಗಳಮುಖಿಯರು ಒಂದು ಗುಂಪು ಅಷ್ಟೇ. ನಾನು ದಲಿತ ಸಮುದಾಯಕ್ಕೆ ಸೇರಿದ್ದೇನೆ. ನನಗೆ ಜಾತಿ ನಿಂದನೆ ಮಾಡಿದ್ದಕ್ಕೆ ಅವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ್ದೇನೆ’ ಎಂದು ಹೇಳಿದರು.

ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಛಲವಾದಿ ಮಾತನಾಡಿ, ‘ಲೈಂಗಿಕ ಅಲ್ಪಸಂಖ್ಯಾತರ ಅಸ್ಮಿತೆಯನ್ನು ಉಳಿಸಲು ಕೆಲಸ ಮಾಡುತ್ತಿರುವ ಕೆಲಸ ಮಾಡುತ್ತಿರುವ ಮನಿಷಾ ಚವ್ಹಾಣ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ’ ಎಂದರು.‌

‘ಆರೋಪಿತರು ಸ್ನೇಹಾ ಸೊಸೈಟಿಯಲ್ಲಿ ಡಿ.11ರಂದು ನಡೆದ ಸಭೆಯಲ್ಲಿ ಲೆಕ್ಕಪತ್ರ ಕೇಳಿದ್ದರು. ಕಾರ್ಯಕ್ರಮ ವ್ಯವಸ್ಥಾಪಕರಾಗಿದ್ದ ಮೌನೇಶ ಅವರು ಜನವರಿ 4ರಂದು ನೀಡುವುದಾಗಿ ಹೇಳಿದ್ದರು. ಇದಕ್ಕೆ ಒಪ್ಪಿದ್ದ ಆರೋಪಿತರು ಡಿ.12ರಂದು ಲೆಕ್ಕ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ’ ಎಂದು ಹೇಳಿದರು.

‘ಸ್ನೇಹಾ ಸೊಸೈಟಿಯಲ್ಲಿ ಕಾಯ್ದಿರಿಸಿದ ನಿಧಿ ₹8.65 ಲಕ್ಷ ಇದೆ. ಅದರಲ್ಲಿ ₹50 ಸಾವಿರ ಡಿಪಾಸಿಟ್‌ ಇಡಲಾಗಿದೆ. ಮನಿಷಾ ಅವರು ಭ್ರಷ್ಟಾಚಾರ ನಡೆಸಿದ್ದರೆ ಅವರು ಇಷ್ಟು ಹಣ ಉಳಿಸಲು ಹೇಗೆ ಸಾಧ್ಯವಾಗುತ್ತಿತ್ತು’ ಎಂದು ಹೇಳಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ 9 ಸಾವಿರ ಆಹಾರ ಕಿಟ್‌ಗಳು ಬಂದಿವೆ. ಅವುಗಳನ್ನು ಮಾರಿಕೊಳ್ಳಲಾಗಿದೆ ಎಂದು ಹಣಮಂತ ಯಳಸಂಗಿ ಅವರು ಆರೋಪಿಸಿದ್ದಾರೆ. ಆದರೆ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಿಂದ 2019ರಲ್ಲಿ 1,200 ಮತ್ತು 2020–21ರಲ್ಲಿ 600, ಡಾನ್ ಬಾಸ್ಕೊ ಸಂಸ್ಥೆಯು 150, ಜೀವಾ ಸಂಸ್ಥೆಯು 50, ಸಂಗಮ ಸಂಸ್ಥೆಯು 170 ಕಿಟ್‌ಗಳನ್ನು ನೀಡಿವೆ. ಒಟ್ಟು 2170 ಕಿಟ್‌ಗಳು ಬಂದಿವೆ. ಯಳಸಂಗಿ ಅವರು ಇದನ್ನು ಸಾಬೀತುಪಡಿಸದಿದ್ದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದರು.

‘2010–11ರಲ್ಲಿ ಸೊಸೈಟಿ ನೋಂದಣಿ ನೋಂದಣಿ ಆಗಿದೆ. 2016 ರಲ್ಲಿ ಸಂಸ್ಥೆಯು ಏಡ್ಸ್ ನಿಯಂತ್ರಣ ಕಾರ್ಯಕ್ರಮ ಯೋಜನೆ ಪಡೆದಿದೆ. ಆ ನಂತರ ಬಂದ ಹಣವನ್ನು ಏಡ್ಸ್ ನಿಯಂತ್ರಣ ಕಾರ್ಯಕ್ರಮಕ್ಕೆ ಬಳಸಲಾಗಿದೆ. ಎಲ್ಲದಕ್ಕೂ ದಾಖಲೆಗಳನ್ನು ನಿರ್ವಹಿಸಲಾಗಿದೆ’ ಎಂದು ಹೇಳಿದರು.

‘ಮನಿಷಾ ಚವ್ಹಾಣ ಅವರ ಬೆಳವಣಿಗೆ ಸಹಿಸದವರು ಅವರ ವಿರುದ್ಧ ಆರೋಪ ಮಾಡಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಸ್ನೇಹಾ ಸೊಸೈಟಿಯ ಕಾರ್ಯಕ್ರಮ ವ್ಯವಸ್ಥಾಪಕ ಮೌನೇಶ ಮಾತನಾಡಿ, ‘ಸ್ನೇಹಾ ಸೊಸೈಟಿಯಲ್ಲಿ 34 ಜನ ಸಿಬ್ಬಂದಿ ಇದ್ದಾರೆ. ವ್ಯವಹಾರಗಳ ಕುರಿತು ಈ ಬಗ್ಗೆ ಪ್ರತಿ ವರ್ಷ ಆಡಿಟ್ ನಡೆಯುತ್ತದೆ. ಈಗಾಗಲೇ ಸೊಸೈಟಿಗೆ ಮೂರು ಪ್ರಶಸ್ತಿಗಳು ಬಂದಿವೆ. ಹೀಗಿದ್ದರೂ ಆರೋಪ ಮಾಡುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ’ ಎಂದರು.

ಮಲ್ಲು ಕುಂಬಾರ, ಚಾಂದಿನಿ, ಪದ್ದಣ್ಣ, ಆದಿತ್ಯ, ಬೀರಲಿಂಗ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು