ಮಂಗಳವಾರ, ಸೆಪ್ಟೆಂಬರ್ 21, 2021
21 °C
ರೌಡಿಶೀಟರ್‌ ಪಟ್ಟಿಯಲ್ಲಿದ್ದ ಆರೋಪಿ

ಕಲಬುರ್ಗಿ: ಸ್ನೇಹಿತನ ಕೊಲೆ, ಮುಖ್ಯ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಎಂಎಸ್‌ಕೆ ಮಿಲ್ ರಸ್ತೆಯಲ್ಲಿ ಈಚೆಗೆ ನಡೆದ ಸ್ನೇಹಿತನ ಕೊಲೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಫಿಲ್ಟರ್‌ಬೆಡ್ ಪ್ರದೇಶದ ನಿವಾಸಿ ಅಭಿಷೇಕ ಬಸವರಾಜ (20) ಬಂಧಿತ ಆರೋಪಿ. ದುಬೈ ಕಾಲೊನಿಯ ಅನಿಲ್ ಭಜಂತ್ರಿ (22) ಕೊಲೆಯಾದವ. ಈತ ಕೂಡ ಆರ್‌.ಜಿ. ನಗರ ಠಾಣೆಯ ರೌಡಿಶೀಟರ್‌ ಪಟ್ಟಿಯಲ್ಲಿದ್ದ. ಅನಿಲನ ಕೊಲೆ ಮಾಡಿದವರಲ್ಲಿ ಈತ ಪ್ರಮುಖನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರ ಎದುರಾಳಿ ಗುಂಪಿನ ಹುಡುಗರು ವಿಜಯಕುಮಾರ್ ಎಂಬಾತನನ್ನು ಭಾನುವಾರ ಥಳಿಸಿದ್ದರು. ವಿಜಯಕುಮಾರ್‌ನನ್ನು ಎದುರಾಳಿ ಗುಂಪಿಗೆ ಸಿಗುವಂತೆ ಮಾಹಿತಿ ನೀಡಿದ್ದು ಇದೇ ಅನಿಲ್‌ ಎಂದು ಈತನ ಸ್ನೇಹಿತರು ಸಂದೇಹಗೊಂಡಿದ್ದರು. ಇದೇ ಕಾರಣಕ್ಕೆ ಆತನೊಂದಿಗೆ ಜಗಳ ತೆಗೆದು ಸೋಮವಾರ ರಾತ್ರಿ ಚಾಕು ಇರಿದು ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರ ಮಾಹಿತಿ.

ಕೊಲೆಯಾದ ಅನಿಲ್ ಭಜಂತ್ರಿ ಮತ್ತು ಸ್ನೇಹಿತ ವಿಜಯಕುಮಾರ ಸೇರಿದಂತೆ ಐವರು ಗೆಳೆಯರು ಕಳೆದ ಭಾನುವಾರ ಸಂಜೆ ಪಟ್ಟಣ ಬಳಿಯ ದಾಬಾ ಒಂದಕ್ಕೆ ಊಟಕ್ಕೆ ಹೋಗಿದ್ದರು. ಊಟದ ಬಿಲ್ ಕೊಡಲು ವಿಜಯಕುಮಾರ ಕೌಂಟರ್‌ಗೆ ಬಂದಾಗ ಎದುರಾಳಿ ತಂಡದವರು ಆತನನ್ನು ಅಪಹರಣ ಮಾಡಿದ್ದರು. ಬಬಲಾದ್‌ ಸ್ಪೇಷನ್ ಹತ್ತಿರ ಕರೆದುಕೊಂಡು ಹೋಗಿ ಕಾಲು ಕತ್ತರಿಸಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಕುಮಾರ್‌ನನ್ನು ನೋಡಿಕೊಂಡು ಮರಳುವಾಗ ಸ್ನೇಹಿತರ ಗುಂಪಿನಲ್ಲಿ ಚರ್ಚೆ ನಡೆಯಿತು. ಅನಿಲನೇ ಈ ಪಿತೂರಿ ನಡೆಸಿದ್ದು ಎಂದು ಎಲ್ಲರೂ ಆತನ ಮೇಲೆ ಹಲ್ಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲಿಸ್‌ ಕಮಿಷನರ್‌ ಡಾ.ರವಿಕುಮಾರ, ಡಿಸಿಪಿ ಅಡ್ಡೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸಿದ್ದರಾಮೇಶ ಗಡೇದ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಸ್ಪೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಕ್ಸ್

ಎಟಿಎಂ, ಬ್ಯಾಂಕ್‌ ಕಳವು: ಆರೋಪಿ ಬಂಧನ

ಕಲಬುರ್ಗಿ: ನಗರದ ಬ್ಯಾಂಕ್‌ ಹಾಗೂ ವಿವಿಧ ಎಟಿಎಂಗಳನ್ನು ಒಡೆದು ಹಣ ಕಳ್ಳತನ ಮಾಡಿದ ಆರೋಪಿಯನ್ನು ರೋಜಾ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಖಮರ್ ಕಾಲೊನಿಯ ಶೇಖ್ ಆವೇಜ್ ಬಂಧಿತ. ಶುಕ್ರವಾರ ಬೆಳಿಗ್ಗೆ ಹಾಗರಗಾ ಕ್ರಾಸ್ ಹತ್ತಿರದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಪೊಲೀಸರು ತಡೆದು ತಪಾಸಣೆ ನಡೆಸಿದರು. ತಾನು ಎಟಿಎಂ ಕಳ್ಳತನ ಮಾಡಿದ್ದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ಣಾಟಕ ಬ್ಯಾಂಕಿನ ನೆಹರೂ ಗಂಜ್‌ನ ಶಾಖೆಯಲ್ಲೂ ಕಳವು ಮಾಡಲು ಯತ್ನಿಸಿದ್ದ. ಎಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್‌ಗಳ ಎಟಿಎಂ ಯಂತ್ರಗಳಲ್ಲಿನ ಹಣ ಕಳ್ಳತನಕ್ಕೂ ಕೈ ಹಾಕಿದ್ದ.

ಸೂಪರ್‌ ಮಾರ್ಕೆಟ್‌ನಲ್ಲಿರುವ ಎಸ್‌ಬಿಐ ಮುಖ್ಯ ಶಾಖೆಯ ಎಟಿಎಂ, ಆರ್.ಎಸ್ ಕಾಲೊಯ ಎಕ್ಸಿಸ್ ಬ್ಯಾಂಕ್ ಎಟಿಎಂ ಕಳವು ಮಾಡಿದ್ದು ಸೇರಿ ಆರು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.‌

ನಗರ ಪೊಲೀಸ್‌ ಕಮಿಷನರ್ ಡಾ.ವೈ.ಎಸ್. ರವಿಕುಮಾರ, ಡಿಸಿಪಿಗಳಾದ ಅಡ್ಡೂರ ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ ಹಾಗೂ ಸಹಾಯಕ ಆಯುಕ್ತರಾದ ಜೆ.ಎಚ್.ಇನಾಮದಾರ, ಗಿರೀಶ ಎಸ್.ಬಿ. ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅಸ್ಲಾಂಬಾಷಾ ನೇತೃತ್ವದಲ್ಲಿ ಎಎಸ್‌ಐ ಶಿವಪ್ಪ ಕಮಾಂಡೊ ಮತ್ತು ಸಿಬ್ಬಂದಿ ಸಿಕಂದರಖಾನ್, ರಫೀಕ್, ಮದರಸಾಬ್, ನಿತ್ಯಾನಂದ, ಗೋಪಾಲ, ಈರಣ್ಣ, ಶರಣು ಅವರು ಈ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.