ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಜಿಲ್ಲೆಗೆ ₹185 ಕೋಟಿ ಬೆಳೆ ವಿಮೆ ಪರಿಹಾರ: ಶಾಸಕ ಬಿ.ಆರ್.ಪಾಟೀಲ

Published 16 ಜೂನ್ 2024, 15:41 IST
Last Updated 16 ಜೂನ್ 2024, 15:41 IST
ಅಕ್ಷರ ಗಾತ್ರ

ಕಲಬುರಗಿ: ‘ಕಳೆದ ಸಾಲಿನಲ್ಲಿ ಜಿಲ್ಲೆಗೆ ₹185 ಕೋಟಿ ಬೆಳೆವಿಮೆ ಪರಿಹಾರ ದೊರಕಿದ್ದು, ಆಳಂದ ತಾಲ್ಲೂಕಿಗೆ ₹82.88 ಕೋಟಿ ಪರಿಹಾರ ಸಿಕ್ಕಿದೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ ಮಾಹಿತಿ ನೀಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳೆ ವಿಮೆ ಕಂಪನಿಗಳು ಈ ಮೊದಲು ತಮ್ಮ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದವು. ಅದಾನಿ ಒಡೆತನದ ಯುನಿವರ್ಸಲ್ ಸೊಂಪೊ ವಿಮಾ ಕಂಪನಿಯು ರೈತರು ಮತ್ತು ಸರ್ಕಾರದಿಂದ ಪ್ರೀಮಿಯಂ ಕಟ್ಟಿಸಿಕೊಂಡು ಹಣ ಲೂಟಿ ಮಾಡುತ್ತಿದ್ದರು. ನಾನು ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಎಚ್ಚರಿಸಿದ್ದರಿಂದ ಫಲ ಸಿಕ್ಕಿದೆ. ಹೀಗಾಗಿ ಕಂದಾಯ ಮತ್ತು ಕೃಷಿ ಇಲಾಖೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಬಾರಿ ಅದಾರಿ ಕಂಪನಿ ಜಿಲ್ಲೆಯಿಂದ ಕಾಲ್ಕಿತ್ತಿದ್ದು, ಬೀದರ್‌ ಜಿಲ್ಲೆಗೆ ಹೋಗಿದೆ. ಕಲಬುರಗಿ ಜಿಲ್ಲೆಗೆ ಈಗ ಇಫ್ಕೊ ಕಂಪನಿ ಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

‘ಆಳಂದ ತಾಲ್ಲೂಕಿನ 71,840 ರೈತರು ವಿಮೆ ಪರಿಹಾರದ ಫಲಾನುಭವಿಗಳಾಗಿದ್ದಾರೆ. ಆದರೂ ಹೊದಲೂರು ಮತ್ತು ಖಜೂರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುಲಿಂಗ ಜಂಗಮ, ಬಸವರಾಜ ಉಪ್ಪಿನ, ಧರ್ಮರಾಜ ಸಾಹು, ಚನ್ನಮಲ್ಲಪ್ಪ ಪಾಟೀಲ ಹಾಜರಿದ್ದರು. 

ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳನ್ನು ಅಶಕ್ತಗೊಳಿಸುವ ಹುನ್ನಾರ ನಡೆಸುತ್ತಿದೆ. ಜಿಎಸ್‌ಟಿಯಲ್ಲಿ ನಮ್ಮ ಪಾಲು ನಮಗೆ ಸಿಗುತ್ತಿಲ್ಲ. ಜಿಎಸ್‌ಟಿ ಬದಲು ವ್ಯಾಟ್‌ ವ್ಯವಸ್ಥೆಯೇ ಉತ್ತಮವಾಗಿತ್ತು
ಬಿ.ಆರ್‌.ಪಾಟೀಲ ಸಿಎಂ ರಾಜಕೀಯ ಸಲಹೆಗಾರ
‘ಅಕ್ಷರ ಆವಿಷ್ಕಾರ ಅಂಗನವಾಡಿ ಮುಚ್ಚಿಸುತ್ತದೆ’
‘ಅಕ್ಷರ ಆವಿಷ್ಕಾರದ ಯೋಜನೆ ಬಗ್ಗೆ ನಾವು ಏನೂ ಹೇಳದೇ ಅಧಿಕಾರಿಗಳು ಜಾರಿ ಮಾಡುತ್ತಿದ್ದಾರೆ. ಇದು ಅಂಗನವಾಡಿ ಕಾರ್ಯಕರ್ತೆಯರನ್ನು ಬೀದಿಗೆ ತರುತ್ತದೆ. ಅಂಗನವಾಡಿಯವರಿಗೆ ದ್ರೋಹ ಬಗೆಯುವುದು ಬೇಡ. ಅಂಗನವಾಡಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಮಾತುಕತೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ನಾನು ಮನವಿ ಮಾಡುತ್ತೇನೆ’ ಎಂದು ಬಿ.ಆರ್‌.ಪಾಟೀಲ ಹೇಳಿದರು. ‘ಕೆಕೆಆರ್‌ಡಿಬಿ ಅನುದಾನ ಬಳಸಿ ನಮ್ಮ ಭಾಗದಲ್ಲೇ ಅಕ್ಷರ ಆವಿಷ್ಕಾರ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಪುನರ್‌ ಪರಿಶೀಲನೆ ಮಾಡಬೇಕು. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅದಕ್ಕೆ ಐತಿಹಾಸಿಕ ಕಾರಣಗಳಿವೆ. ನಮ್ಮ ಭಾಗದ ಎಲ್ಲ ಶಾಸಕರು ಪಕ್ಷಾತೀತವಾಗಿ ಸೇರಿ ಈ ಬಗ್ಗೆ ಚಿಂತಿಸಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT