ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲೋಥಾನ್‍ಗೆ ನಾಳೆ ಚಾಲನೆ

Last Updated 25 ಸೆಪ್ಟೆಂಬರ್ 2020, 13:32 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಖಾಸಗಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಸೆ. 27ರಂದು ಬೆಳಿಗ್ಗೆ 7 ಗಂಟೆಗೆ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ‘ಸೈಕ್ಲೋಥಾನ್ ಹಾಗೂ ಸ್ವಚ್ಛತಾ ಪಕ್ವಾಡ್’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃಧ್ಧಿ ಸಮಿತಿ ಅಧ್ಯಕ್ಷರಾದ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಚಾಲನೆ ನೀಡಲಿದ್ದಾರೆ.

ಕೊರೊನಾ ವೈರಾಣು ಹರಡದಂತೆ ಅಂತರವನ್ನು ಕಾಯ್ದುಕೊಂಡು ಈ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಲಿದ್ದಾರೆ. ಸೈಕ್ಲೋಥಾನ್ ಜಾಥಾವು ನಗರದ ಐವಾನ್ ಇ ಶಾಹಿ ಅತಿಥಿ ಗೃಹದಿಂದ ಕಲಬುರ್ಗಿಯ ಐತಿಹಾಸಿಕ ಕೋಟೆಯವರೆಗೆ ನಡೆಯಲಿದೆ.

ಸ್ವಚ್ಛತಾ ಪಕ್ವಾಡ್ ಅಭಿಯಾನದ ಅಂಗವಾಗಿ ನಗರದ ಕೋಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳುವ ಮೂಲಕ ವಿಶೇಷ ರೀತಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ ಎಂದು ಕಲಬುರ್ಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ ಅವರು ತಿಳಿಸಿದ್ದಾರೆ.

ಬಾ‌‌ಕ್ಸ–1

ಬೆಳೆ ಸಮೀಕ್ಷೆ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಕಲಬುರ್ಗಿ: ಕಲಬುರ್ಗಿ ಹಾಗೂ ಕಮಲಾಪುರ ತಾಲ್ಲೂಕುಗಳಲ್ಲಿ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ರೈತರು ತಮ್ಮ ಬೆಳೆಗಳ ಫೋಟೊ ಅಪ್‍ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ, ‘ಬೆಳೆ ದರ್ಶಕ್ 2020’ ಆ್ಯಪ್‍ನಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಕಲಬುರ್ಗಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ರೈತರು ಮೊಬೈಲ್‍ನಲ್ಲಿನ ಪ್ಲೇ ಸ್ಟೋರ್‍ನಲ್ಲಿ ‘ಬೆಳೆ ದರ್ಶಕ್‌ 2020’ ಎಂಬ ಆ್ಯಪ್‍ಅನ್ನು ಡೌನ್‍ಲೋಡ್ ಮಾಡಿಕೊಂಡು ಖಚಿತಪಡಿಸಿಕೊಳ್ಳಬೇಕು. ಬೆಳೆಗಳ ಫೋಟೊ ಅಪ್‍ಲೋಡ್ ಮಾಡಿರುವುದರಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ 15ರೊಳಗಾಗಿ ಸಲ್ಲಿಸಬೇಕು.

ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆ ನಡೆಸುತ್ತಿದ್ದು, ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿ, ಮೇಲ್ವಿಚಾರಕರ ಮೂಲಕ ಅನುಮೋದನೆ ನಂತರ, ಈ ಮಾಹಿತಿಯನ್ನು ಬೆಂಬಲ ಬೆಳೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ, ಬೆಳೆ ವಿಮೆ ಯೋಜನೆಗೆ ಹಾಗೂ ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT