ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡೋತಿ ಸೇತುವೆ ಮುಳುಗಡೆ: ಸಂಚಾರ ಸ್ಥಗಿತ

Last Updated 7 ಅಕ್ಟೋಬರ್ 2022, 4:17 IST
ಅಕ್ಷರ ಗಾತ್ರ

ಚಿತ್ತಾಪುರ(ಕಲಬುರಗಿ): ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಬರುತ್ತಿರುವುದರಿಂದ ಕಾಗಿಣಾ ನದಿಗೆ ಪ್ರವಾಹ ಉಕ್ಕಿ ಬಂದು, ತಾಲ್ಲೂಕಿನ ದಂಡೋತಿ ಸಮೀಪದ ಸೇತುವೆ ಮುಳುಗಡೆಯಾಗಿ ಸಾರಿಗೆ ಸಂಚಾರ ಸ್ಥಗಿತವಾಗಿದೆ.

ಗುರುವಾರ ರಾತ್ರಿ ನದಿಯಲ್ಲಿ ಪ್ರವಾಹ ವೇಗವಾಗಿ ಏರುಗತಿಯಲ್ಲಿ ಹೆಚ್ಚಾಗಿ ಸೇತುವೆ ಮುಳುಗಿದೆ. ರಾತ್ರಿಯಿಂದಲೇ ಸೇತುವೆ ಮಾರ್ಗದ ವಾಹನ ಸಂಚಾರ ಬಂದ್ ಆಗಿದೆ. ಹೀಗಾಗಿ, ಶುಕ್ರವಾರ ಬೆಳಿಗ್ಗೆ ಸೇತುವೆಯ ಮೇಲೆ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದೆ. ನದಿ ಆಚೆಗಿರುವ ಜನರು ಚಿತ್ತಾಪುರಕ್ಕೆ ಬರಲಾಗದೆ ಪರದಾಡುತ್ತಿದ್ದಾರೆ.

ದಂಡೋತಿ ಸೇತುವೆಯ ಮೂಲಕ ಚಿತ್ತಾಪುರಕ್ಕೆ ಬಂದು ಹೋಗುತ್ತಿದ್ದ ಅನೇಕ ಗ್ರಾಮಗಳ ಸಾರ್ವಜನಿಕರು ತಾಲ್ಲೂಕಿನ ಭಾಗೋಡಿ ಸೇತುವೆ ಮೂಲಕ ಪ್ರಯಾಣಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಾಗಿಣಾ ನದಿ ಮೇಲ್ಭಾಗದ ಸೇಡಂ, ಚಿಂಚೋಳಿ, ಕಾಳಗಿ ತಾಲ್ಲೂಕುಗಳಲ್ಲಿ ಮಳೆಯಾಗಿದ್ದರಿಂದ ನದಿಯಲ್ಲಿ ಪ್ರವಾಹ ಉಕ್ಕೇರಿ ಹರಿಯುತ್ತಿದೆ. ನೆರೆಯ ತೆಲಂಗಾಣದಲ್ಲೂ ಮಳೆಯಾದರೆ ಕಾಗಿಣಾ ಮೈದುಂಬುತ್ತದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಯ ಪ್ರವಾಹ ಬೆಳಿಗ್ಗೆ 9ರ ಬಳಿಕ ಇಳಿಮುಖವಾಗುತ್ತಿದೆ.

ಸೇತುವೆ ಮಾರ್ಗವಾಗಿ ನಿತ್ಯವೂ ಕಲಬುರಗಿಗೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ರಾವೂರು, ಶಹಾಬಾದ್ ಮಾರ್ಗಕ್ಕೆ ಬದಲಾಯಿಸಲಾಗಿದೆ. ಸರ್ಕಾರಿ ನೌಕರರು, ಸಾರ್ವಜನಿಕ ಪ್ರಯಾಣಿಕರು ಚಿತ್ತಾಪುರಕ್ಕೆ ಬರಲು ಮತ್ತು ಕಲಬುರಗಿಗೆ ಹೋಗಲು ಶಹಾಬಾದ್ ಮಾರ್ಗದ ಸಂಚಾರ ಅವಲಂಬಿಸಿದ್ದಾರೆ.

ರಾತ್ರಿಯಿಡಿ ಮಳೆ: ಗುರುವಾರ ದಿನವಿಡಿ ಬಿಡದಂತೆ ಸುರಿದ ಮಳೆ ರಾತ್ರಿಯಿಡಿ ಜಿಟಿಜಿಟಿ ಮಳೆಯಾಗಿದೆ. ಹೊಲ ಗದ್ದೆಗಳಲ್ಲಿ ಮಳೆ‌ ನೀರು ನಿಂತಿವೆ. ರೈತರ, ಕೃಷಿಕೂಲಿಕಾರರ ಕೆಲಸಗಳು ಸ್ಥಗಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT