ಸೋಮವಾರ, ಜನವರಿ 27, 2020
26 °C
ಮಹಾಪರಿನಿರ್ವಾಣದ ಅಂಗವಾಗಿ ದಲಿತ ಸಾಹಿತ್ಯ ಪರಿಷತ್‌ನಿಂದ ಕವಿಗೋಷ್ಠಿ

‘ಕಾವ್ಯ ಜನರ ಮನಸು ಕಟ್ಟಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಮಾಜ ಪ್ರಗತಿಯಾಗಬೇಕು. ಅಲ್ಲಿ ವಾಸಿಸುವ ಜನರ ಒಡೆದ ಮನಸುಗಳನ್ನು ಕಟ್ಟುವ ಕೆಲಸವನ್ನು ಕಾವ್ಯ ಮಾಡಬೇಕಾಗಿದೆ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಅಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು.

ನಗರದ ಎಂಪಿಎಚ್, ಎಸ್ ಪಿಯು ಕಾಲೇಜಿನಲ್ಲಿ ಬೋಧಿವೃಕ್ಷ ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕರ್ನಾಟಕ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ 63ನೇ ಮಹಾ ಪರಿನಿರ್ವಾಣ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ‘ಕವಿಗೋಷ್ಠಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅಸಮಾನತೆ, ಲಿಂಗಬೇಧ ತಾರತಮ್ಯ ತೊಲಗಿಸಲು ಬುದ್ಧ ಬಸವ ಹಾಗೂ ಡಾ ಅಂಬೇಡ್ಕರ್, ಪೆರಿಯಾರ್, ನಾರಾಯಣ ಗುರು ಅವರೆಲ್ಲರ ವಿಚಾರಗಳನ್ನು ಇಂದಿನ ಸಾಹಿತಿಗಳು ಪ್ರಸಾರ ಮಾಡುವಂತೆ ಸಲಹೆ ನೀಡಿದರು. ಮನೆ ಮನಕ್ಕೆ ತಲುಪಿಸಲು ನಾವು ರಚಿಸುವ ಕವಿತ್ವ ಗಟ್ಟಿಯಾಗಿರಬೇಕು. ಬಹು ಜನ ನಾಯಕರ ವಿಚಾರಧಾರೆಗಳು ಸಾಹಿತ್ಯದಲ್ಲಿ ಬರಬೇಕು ಎಂದು ಅಭಿಪ್ರಾಯ ಪಟ್ಟರು. 

ಮುಖ್ಯ ಅತಿಥಿ ಭೀಮಕವಿ ಡಾ.ಕೆ.ಎಸ್.ಬಂಧು ಮಾತನಾಡಿ, ಡಾ.ಅಂಬೇಡ್ಕರ್‌ ಅವರನ್ನು ಓದುವ, ಬರೆಯುವ ಸಾಹಿತ್ಯ ಪ್ರಕಟಿಸಬೇಕಾಗಿದೆ. ಅಂಥ ಸಾಹಿತ್ಯ ಸಮಾಜವನ್ನು ತಿದ್ದುತ್ತದೆ ಎಂದರು.

ಕರ್ನಾಟಕ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಹನುಮಂತರಾವ ಬಿ.ದೊಡ್ಡಮನಿ, ಡಾ.ಅಂಬೇಡ್ಕರರು ನಮ್ಮೆಲ್ಲರಿಗೆ ಜ್ಞಾನದ ಬೆಳಕನ್ನು ನೀಡಿದ್ದು, ಅದನ್ನು ಕಾವ್ಯದಲ್ಲಿ ಬರೆಯುವ ಪ್ರಯತ್ನವನ್ನು ಕವಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಐಐಎಂ ಮಾಜಿ ವ್ಯವಸ್ಥಾಪಕ ಸುಬ್ಬಣ್ಣ ಬಿಹಾರಿ, ವೈದ್ಯಾಧಿಕಾರಿ ಡಾ.ಚಿದಾನಂದ ಮೂರ್ತಿ, ರೇವಗ್ಗಿಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಶರೀಫ್ ಅಹ್ಮದ್ ಮಾತನಾಡಿದರು. ಕರ್ನಾಟಕ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉಪಾಧ್ಯಕ್ಷ ಧರ್ಮಣ್ಣ ಧನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಅಶೋಕ ತಳಕೇರಿ, ಬೋಧಿವೃಕ್ಷ ಸಾಂಸ್ಕೃತಿಕ ಸೇವಾ ಸಂಘ ಅಧ್ಯಕ್ಷ ಸುಭಾಷ್ ಚಕ್ರವರ್ತಿ ಭಾಗವಹಿಸಿದ್ದರು.

ಪರಮೇಶ್ವರ ಶೆಟಗಾರ್, ಭೀಮರಾವ ದೊಡ್ಡಮನಿ ಸ್ವರಚಿತ ಕವನಗಳನ್ನು ವಾಚಿಸಿದರು.

ಕಿರಣಕುಮಾರ ಪೂಜಾರಿ ಅವರ ಬಾಬಾಸಾಹೇಬ ಬದುಕು ಹೇಗೆ ಗೊತ್ತೇನು? ಹಾಗೂ ಕಾಶಿನಾಥ ಮುಖರ್ಜಿ ಅವರು ಭೀಮಯುಗ ಎಂಬ ಕವಿತೆ, ಡಾ ಅಂಬೇಡ್ಕರರ ಜೀವನದ ಕುರಿತಾದ ಕವಿತೆಗಳನ್ನು ವಾಚಿಸಿದರು. ಕಲಾವಿದರಾದ ಎಂ.ಎನ್.ಸುಗಂಧಿ ರಾಜಾಪೂರ, ಸಂದೀಪ ಕಾಳಕಿಂಗೆ, ಸಿದ್ದರಾಮ ಸರಡಗಿ, ಹಣಮಂತ ಘಂಟೆಕರ್ ತಮ್ಮ ಸ್ವರಚಿತ ಕವನಗಳನ್ನು ಹಾಡುವ ಮೂಲಕ ಕವಿಗೋಷ್ಠಿಗೆ ಕಳೆ ಕಟ್ಟಿದರು.

ಸಿದ್ದಾರ್ಥ ಚಿಮ್ಮಾಇದ್ಲಾಯಿ ಅವರು ಡಾ ಚೆನ್ನಣ್ಣ ವಾಲೀಕಾರರ ‘ನೀ ಹೋದ ಮರುದಿನ, ಮೊದಲಿನಂಗ್ ಆಗ್ಯಾದೊ ಬಾಬಾಸಾಹೇಬ’ ಎಂಬ ಕವನವನ್ನು ಹಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು