ಶುಕ್ರವಾರ, ಮೇ 27, 2022
23 °C

ಕಾಯಕ–ದಾಸೋಹ ಶರಣರ ಮಹತ್ವದ ಪರಿಕಲ್ಪನೆಗಳು: ಶಿವರಂಜನ್ ಸತ್ಯಂಪೇಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿ ಐತಿಹಾಸಿಕ ಮಹತ್ವವುಳ್ಳ ಅಪರೂಪದ ಚಳವಳಿ ಎಂದು ಪತ್ರಕರ್ತ, ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ತಾಜಸುಲ್ತಾನಪುರದ ಕೆ.ಎಸ್.ಆರ್.ಪಿ. ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಲಿಂ. ಶಿವಪ್ಪ ವಿರೂಪಾಕ್ಷಪ್ಪ ಅಂಡಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಯಕ ಮತ್ತು ದಾಸೋಹ ಕುರಿತು ಮಾತನಾಡಿದರು.

ಶರಣರ ಮಹತ್ವದ ಅನೇಕ ಪರಿಕಲ್ಪನೆಗಳಲ್ಲಿ ಕಾಯಕ–ದಾಸೋಹ ಸಿದ್ಧಾಂತವು ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ವಕಯಗಳನ್ನು ಒಂದು ಕಟ್ಟಿನಲ್ಲಿ ಸುಭದ್ರವಾಗಿ ಕಟ್ಟಬಲ್ಲ ತತ್ವ ಇದೆ ಎಂದು ತಿಳಿಸಿದರು.

ಕೆಲಸಕ್ಕೆ ಕಾಯಕ, ದಾನಕ್ಕೆ ದಾಸೋಹದ ಸ್ಪರ್ಶ ನೀಡಿದ ಶರಣರು, ಸದೃಢ–ಸ್ವಾವಲಂಬಿ ಸಮಾಜದ ನಿರ್ಮಾತೃಗಳಾಗಿದ್ದಾರೆ. ಕಲ್ಯಾಣ ನಾಡಿನ ಕನಸು ಕಂಡಿದ್ದ ಶರಣರು ಸಮಾಜದ ಏಳ್ಗೆಗೆ ಶ್ರಮಿಸಿದವರು ಎಂದರು.

ಮುಖ್ಯ ಅತಿಥಿಯಾಗಿದ್ದ ಕೆಎಸ್ಆರ್‌ಪಿ 6ನೇ ಬಟಾಲಿಯನ್ ಕಮಾಂಡೆಂಟ್ ಬಸವರಾಜ ಜಿಳ್ಳೆ ಮಾತನಾಡಿ, ಮನದ ಮಲಿನತೆಯನ್ನು ತೊಳೆದ ಶರಣರ ವಚನಗಳಲ್ಲಿ ಸನ್ನಡತೆ, ಸದಾಚಾರ ಮುಂತಾದ ವ್ಯಕ್ತಿತ್ವ ವಿಕಸನದ ಅಂಶಗಳಿವೆ. ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಓದು, ಬರಹದಲ್ಲಿ ತೊಡಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಡಾ. ರಾಜಕುಮಾರ ಪಾಟೀಲ ಮಾತನಾಡಿ, ಮನುಷ್ಯ ತನ್ನ ಬದುಕಿನಲ್ಲಿ ಏನಾದರೊಂದು ಮಹತ್ವದ್ದನ್ನು ಸಾಧಿಸಬೇಕಾದರೆ, ವಚನ ಸಾಹಿತ್ಯ ತುಂಬ ಸಹಕಾರಿಯಾಗಿದೆ. ಯುವಜನರ ಮನಸ್ಸು ಪರಿವರ್ತನೆಗೆ ತೆರೆದುಕೊಳ್ಳಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಕುಪೇಂದ್ರ ಪಾಟೀಲ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ದತ್ತಿ ದಾಸೋಹಿ ಹಾಗೂ ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಸ್ವಾಗತಿಸಿದರು. ವಿನೋದ ಜೇನವೆರಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು