ಶನಿವಾರ, ಡಿಸೆಂಬರ್ 7, 2019
22 °C
ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ, ರಸ್ತೆ ಸುರಕ್ಷತಾ ಸಪ‍್ತಾಹ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ತಾಕೀತು

ಶೇ 10ರಷ್ಟು ಅಪಘಾತ ಕಡಿಮೆ ಮಾಡಲು ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ. ಇದನ್ನು ತಡೆಯಲು ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಂದೋಲನದ ರೂಪದಲ್ಲಿ ಆಚರಿಸಬೇಕು’ ಎಂದು ಜಿಲಾಧಿಕಾರಿ ಬಿ. ಶರತ್ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಪ್ತಾಹದ ಅಂಗವಾಗಿ ಧ್ವನಿವರ್ಧಕ ಮೂಲಕ ಮಾಹಿತಿ, ಕರಪತ್ರ ಹಂಚಿಕೆ, ಬೀದಿ ನಾಟಕ, ಜಾಥಾ, ಅಪಘಾತದ ಚಿತ್ರಗಳು ಹೆದ್ದಾರಿ ಫಲಕಗಳಲ್ಲಿ ಪ್ರದರ್ಶನ ಸೇರಿದಂತೆ ನಾನಾ ರಿತಿಯ ಚಟುವಟಿಕೆಗಳನ್ನು, ಶಾಲಾ– ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು’ ಎಂದರು.

‘ಆಟೊ ರಿಕ್ಷಾ ಚಾಲಕರು ನಿಯಮಗಳನ್ನು ಗಾಳಿಗೆ ತೂರಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕೂಡಲೇ ಇಂತಹ ಆಟೊ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳಬೇಕು. ಶಾಲಾ– ಕಾಲೇಜುಗಳ ಮುಖ್ಯಸ್ಥರ ಸಭೆ ಕರೆದು ಮನವರಿಕೆ ಮಾಡಿ’ ಎಂದೂ ಸೂಚಿಸಿದರು.

ಆರ್‌.ಸಿ ರದ್ದುಪಡಿಸಿ:

‘18 ವರ್ಷದೊಳಗಿನ ಮಕ್ಕಳು ಕೂಡ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಮೊದಲು ಇದಕ್ಕೆ ಅಂಕುಶ ಹಾಕಿ. ಕಾರ್ಖಾನೆಗಳು, ಬಸ್ ಡಿಪೋಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಚಟುವಟಿಕೆಗಳನ್ನು ಆರ್.ಟಿ.ಒ. ಮತ್ತು ಜಿಲ್ಲಾ ಕೈಗಾರಿಕೆ ಕೇಂದ್ರಗಳು ಜಂಟಿಯಾಗಿ ಹಮ್ಮಿಕೊಳ್ಳಬೇಕು. ಸರಕು ವಾಹನಗಳಲ್ಲಿ ಸಾರ್ವಜನಿಕರನ್ನು ಪ್ರಯಾಣಿಸವುದು ನಿಯಂತ್ರಿಸಬೇಕು. ಅಕ್ರಮ ಮರಳು ದಂಧೆಗೆ ಬಳಸಿದ ವಾಹನಗಳ ಆರ್.ಸಿ. ಅಮಾನತುಗೊಳಿಸಿ’ ಎಂದೂ ಅವರು ಖಡಕ್‌ ಎಚ್ಚರಿಕೆ ನೀಡಿದರು.

ಆಟೊ, ಕ್ರೂಸರ್, ಮ್ಯಾಕ್ಸಿ ಕ್ಯಾಬ್ ಮಾಲೀಕರಿಗೆ ಎಚ್ಚರಿಕೆ:

‘ಕೇಂದ್ರ ಸರ್ಕಾರವು ಮೋಟಾರ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕಾಯ್ದೆ ಉಲ್ಲಂಘಿಸುವ ವಾಹನಗಳಿಗೆ ಭಾರಿ ಮೊತ್ತದ ರೂಪದಲ್ಲಿ ದಂಡ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲೆ ಕಾಯ್ದೆ ಬಗ್ಗೆ ಆಟೊ ಚಾಲಕರು, ಮ್ಯಾಕ್ಸಿ ಕ್ಯಾಬ್, ಟಂಟಂ ಮತ್ತು ಕ್ರೂಸರ್, ಜೀಪ್ ಮಾಲೀಕರ ಸಭೆ ಕರೆದು ಕಾಯ್ದೆ ಪಾಲಿಸುವಂತೆ ಅವರಿಗೆ ಎಚ್ಚರಿಕೆ ನೀಡಿ’ ಎಂದು ತಿಳಿಸಿದರು.

ಪರಿಷ್ಕೃತ ಪ್ರಸ್ತಾವ ಸಲ್ಲಿಸಿ:

‘ಪ್ರಸಕ್ತ ವರ್ಷ ರಸ್ತೆ ಅಪಘಾತಗಳನ್ನು ಕನಿಷ್ಠ ಶೇಕಡ 10ರಷ್ಟಾದರೂ ಕಡಿಮೆ ಮಾಡಬೇಕೆಂಬುದು ಸರ್ಕಾರದ ನಿರ್ದೇಶನ. ಅಪಘಾತಗಳ ತಡೆಗೆ ವಿವಿಧ ಸಹಭಾಗಿತ್ವ ಇಲಾಖೆಗಳ ಪ್ರಸ್ತಾವ ಪಡೆದು ಜಿಲ್ಲಾ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ. ಪೊಲೀಸ್, ಲೋಕೋಪಯೋಗಿ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು ಸೇರಿದಂತೆ ಸಹಭಾಗಿತ್ವ ಇಲಾಖೆಗಳು ಕೂಡಲೇ ಪರಿಷ್ಕೃತ ಪ್ರಸ್ತಾವ ಸಲ್ಲಿಸಬೇಕು’ ಎಂದು ಶರತ್‌ ಸೂಚಿಸಿದರು.

ಉಪವಿಭಾಗಾಧಿಕಾರಿ ರಾಹುಲ ಪಾಂಡ್ವೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಚಿಂಚೋಳಿ ಎ.ಎಸ್.ಪಿ. ಅಕ್ಷಯ ಕುಮಾರ ಸೇರಿದಂತೆ ಪೊಲೀಸ್ ಇಲಾಖೆ, ಕಾರ್ಮಿಕ, ಲೋಕೋಪಯೋಗಿ ಇಲಾಖೆ, ಕೆ.ಎಸ್.ಆರ್.ಟಿ.ಸಿ. ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)