ಬುಧವಾರ, ಮಾರ್ಚ್ 29, 2023
32 °C
ಮಾರುಕಟ್ಟೆಯಲ್ಲಿ ಖರೀದಿ ಭರಾಟೆ, ಕಿಡಿಗಡಚಿಕ್ಕಿದ ಪಟಾಕಿಗಳ ಸದ್ದು

ಕಲಬುರಗಿ: ಅದ್ಧೂರಿ ದೀಪಾವಳಿ ಆಚರಣೆಗೆ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕೊರೊನಾ ಭೀತಿಯನ್ನೂ ಮರೆಸುವಂತೆ ದೀಪಾವಳಿ ಹಬ್ಬವನ್ನು ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಅಮಾವಾಸ್ಯೆಯ ದಿನವಾದ ಗುರುವಾರ ಹಬ್ಬದ ಅದ್ಧೂರಿ ಆಚರಣೆಗೆ ಜನರು ಮುನ್ನುಡಿ ಬರೆದರು.

ನಗರದ ಸೂಪರ್ ಮಾರ್ಕೆಟ್, ಎಂಎಸ್‌ಕೆ ಮಿಲ್ ರಸ್ತೆಯ ಕಣ್ಣಿ ಮಾರ್ಕೆಟ್ ಹಾಗೂ ಬಡಾವಣೆಯಲ್ಲಿರುವ ಸಣ್ಣಪುಟ್ಟ ಮಾರುಕಟ್ಟೆಗಳಲ್ಲಿಯೂ ಹೂ ಹಣ್ಣು, ಬಾಳೆ ಗಿಡಗಳ ಮಾರಾಟ ಜೋರಾಗಿದ್ದು, ಬೆಳಿಗ್ಗೆಯಿಂದಲೇ ಹಬ್ಬದ ಆಚರಣೆಯ ಮೂಡ್‌ನಲ್ಲಿದ್ದ ಜನರು ಮಕ್ಕಳನ್ನೂ ತಮ್ಮೊಂದಿಗೆ ಕರೆದುಕೊಂಡು ಮಾರುಕಟ್ಟೆಗೆ ಹೋದರು.

ಹಬ್ಬದ ನಿಮಿತ್ತ ಸರ್ಕಾರ ರಜೆ ಬುಧವಾರ ಹಾಗೂ ಶುಕ್ರವಾರ ರಜೆ ಘೋಷಿಸಿದ್ದರಿಂದ ಗುರುವಾರ ಬಹುತೇಕ ಸರ್ಕಾರಿ ನೌಕರರು ಒಂದು ದಿನ ರಜೆ ಹಾಕಿದ್ದರು. ಹೀಗಾಗಿ, ಸರಣಿ ರಜೆಗಳು ಇರುವುದರಿಂದ ಹಬ್ಬ ಆಚರಿಸಲೆಂದೇ ದೂರದ ಊರುಗಳಿಂದ ಬಂದಿದ್ದಾರೆ.

ಬೆಳಿಗ್ಗೆಯಿಂದಲೇ ಮನೆಯ ಬಾಗಿಲಿಗೆ ತಳಿರು ತೋರಣ ಕಟ್ಟಿ, ವಾಹನಗಳನ್ನು ತೊಳೆದು ಸ್ವಚ್ಛಗೊಳಿಸಿ ಬಾಳೆಯ ದಿಂಡು, ಚಂಡು ಹೂ, ಬೂದಗುಂಬಳಕಾಯಿಗಳನ್ನು ಇಟ್ಟು ಪೂಜಿಸಿದರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿದರು. ಸಂಜೆಯಾಗುತ್ತಿದ್ದಂತೆಯೇ ಹೊಸ ಬಟ್ಟೆ ಧರಿಸಿದ ಮಹಿಳೆಯರು, ಮಕ್ಕಳು ಸುರು ಸುರು ಬತ್ತಿ, ಪಟಾಕಿ ಹಿಡಿದು ಮನೆಯ ಮುಂದೆ ಬಂದು ಪಟಾಕಿ ಹಚ್ಚಿ ಸಂಭ್ರಮಿಸಿದರು.

ಹಬ್ಬ ಆರಂಭವಾಗಿ ಎರಡು ದಿನಗಳಾದರೂ ನಗರದ ಸೂಪರ್ ಮಾರ್ಕೆಟ್‌ನ ಬಟ್ಟೆ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಅಲ್ಲದೇ, ಹಣ್ಣಿನ ಅಂಗಡಿ, ಹೂ ಮಾರಾಟಗಾರರು ಹಾಗೂ ಖರೀದಿದಾರರಿಂದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಹೀಗಾಗಿ, ಕೆಲ ಹೊತ್ತು ಪೊಲೀಸರು ಮಾರ್ಕೆಟ್‌ನ ಅಲ್ಲಲ್ಲಿ ಸಂಚಾರ ನಿಯಂತ್ರಣ ಮಾಡುತ್ತಿದ್ದರು. ಬೈಕ್, ಕಾರುಗಳ ಸಂಚಾರವನ್ನು ಒಳಗಿನ ರಸ್ತೆಗಳಲ್ಲಿ ನಿರ್ಬಂಧಿಸಿದ್ದರು. ಮಾರ್ಕೆಟ್‌ನಿಂದ ಸಿಟಿ ಮಾರ್ಕೆಟ್ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯು ಸಂಪೂರ್ಣ ಜನರಿಂದ ತುಂಬಿ ಹೋಗಿತ್ತು.

ಅಂಗಡಿ ಪೂಜೆಯ ಮೆರುಗು: ದೀಪಾವಳಿಯು ವ್ಯಾಪಾರಿಗಳಿಗೆ ದೊಡ್ಡ ಹಬ್ಬ. ಹೀಗಾಗಿ, ಈ ಹಬ್ಬದಿಂದಲೇ ಹೊಸ ವಹಿವಾಟು ಶುರುವಾಗುತ್ತದೆ. ಅದಕ್ಕಾಗಿ ಗುರುವಾರ ದಿನದ ವಹಿವಾಟು ಬಂದ್ ಮಾಡಿ ಪುರೋಹಿತರು, ಸ್ವಾಮಿಗಳನ್ನು ಅಂಗಡಿಗೆ ಕರೆಸಿ ಲಕ್ಷ್ಮಿ ಪೂಜೆ ಮಾಡಿಸಿದರು. ಪೂಜೆಗೆ ಬಂದ ಬಂಧು ಬಳಗದವರಿಗೆ ಸಿಹಿ, ಹಣ್ಣು, ಫಲಾಹಾರ ನೀಡಿ ಸತ್ಕರಿಸಿದರು.

ಹಬ್ಬದ ನಿಮಿತ್ತ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಜನರ ಸಂಚಾರ ವಿರಳವಾಗಿತ್ತು. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಕಚೇರಿಗಳು ತೆರೆದಿದ್ದವಾದರೂ ಹಾಜರಾತಿ ಕಡಿಮೆ ಇತ್ತು. ಕಚೇರಿಗೆ ಬಂದವರೂ ತಮ್ಮ ಇಷ್ಟದ ಸೀರೆ ಉಟ್ಟುಕೊಂಡು ಬಂದು ಹಬ್ಬದ ಸಂಭ್ರಮವನ್ನು ಇಮ್ಮಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.