ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಸೋಲಿಗೆ ಆರ್‌ಎಸ್‌ಎಸ್‌, ಬಿಜೆಪಿ ಕಾರಣ: .ಶರಣಪ್ರಕಾಶ ಪಾಟೀಲ ಆರೋಪ

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಆರೋಪ
Last Updated 5 ಏಪ್ರಿಲ್ 2021, 13:19 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಆರ್‌ಎಸ್‌ಎಸ್‌, ಬಿಜೆಪಿಯ ಕುತಂತ್ರವೇ ಕಾರಣ’ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ಅವರ ಸೋಲಿನಿಂದ ಎಷ್ಟು ಅನ್ಯಾಯವಾಗಿದೆ ಎಂಬುದು ಈ ಭಾಗದ ಜನರಿಗೆ ಗೊತ್ತಾಗಿದೆ. ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಈಗಲೂ ನೆನೆಸುತ್ತಾರೆ. ಆದರೆ, ಕಟೀಲ್ ಅವರ ಹೇಳಿಕೆ ಕೀಳುಮಟ್ಟದ್ದಾಗಿದೆ. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ’ ಎಂದರು.

‘ಖರ್ಗೆ ಅವರು ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸಂವಿಧಾನದ 371 (ಜೆ) ಕಾಯ್ದೆಗೆ ತಿದ್ದುಪಡಿ, ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಖರ್ಗೆ ಅವರ ಅವಧಿಯಲ್ಲಿ ಆಗಿವೆ. ಇವು ವಿಷಕಾರಿ ಕೆಲಸಗಳೇ’ ಎಂದು ಪ್ರಶ್ನಿಸಿದರು.

‘ಖರ್ಗೆ ಅವರು ಸಚಿವರಾಗಿದ್ದಾಗ ಮಂಜೂರಾಗಿದ್ದ ರೈಲ್ವೆ ವಿಭಾಗೀಯ ಕಚೇರಿ ರದ್ದಾಯಿತು. ಜವಳಿ ಪಾರ್ಕ್ ಮೈಸೂರಿಗೆ ಸ್ಥಳಾಂತರವಾಯಿತು. ನಿಮ್ಜ್ ರದ್ದುಪಡಿಸಲಾಯಿತು. ಈ ಬಗ್ಗೆ ಯಾರೂ ಕೇಳುತ್ತಿಲ್ಲ. ಇದನ್ನು ಕೇಳಬೇಕಾದ ಸಂಸದರು ಸಂಸತ್‌ನಲ್ಲಿ ನಿದ್ದೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಯೋಗ್ಯತೆ ಇಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇಂತಹ ಮೂರ್ಖತನದ ಹೇಳಿಕೆ ನೀಡುತ್ತಾರೆ. ಕಟೀಲ್ ಅವರು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು’ ಎಂದು ಎಚ್ಚರಿಸಿದರು.

‘ಕಾಂಗ್ರೆಸ್‌ನವರು ವಿಷಕಾರಿ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿಯವರಿಂದ ಆಗಿರುವ ಸಿ.ಡಿ ಪ್ರಕರಣ ವಿಷಕಾರಿ ಕೆಲಸ. ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರಜಾಪ್ರಭುತ್ವ, ರಾಜ್ಯದ ಅಭಿವೃದ್ಧಿಗೆ ಮಾರಕವಾಗುವಂತಹ ವಿಷಕಾರಿ ಕೆಲಸಗಳನ್ನೇ ಮಾಡಿದೆ. ಇವರ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಆರೋಪಿಸಿದರು.

‘ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ಸ್ವಜನಪಕ್ಷಪಾತದ ಆರೋಪ‍ ಮಾಡಿದ್ದಾರೆ. ಅವರಿಬ್ಬರ ನಡುವೆ ಪರ್ಸೆಂಟೇಜ್ ಜಗಳ ನಡೆಯುತ್ತಿದೆ’ ಎಂದು ದೂರಿದರು.

ಕಾಂಗ್ರೆಸ್‌ ಮುಖಂಡ ಬಿ.ಆರ್.ಪಾಟೀಲ ಮಾತನಾಡಿ,‘ಖರ್ಗೆ ಅವರ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ. ವಿಷಜಂತುಗಳಿಂದ ತುಂಬಿಕೊಂಡಿರುವ ಆರ್‌ಎಸ್‌ಎಸ್‌ ದೇಶವನ್ನು ಹಾಳು ಮಾಡಿರುವುದನ್ನು ನೋಡಿ ಖರ್ಗೆ ಅವರು ನೋವಿನಿಂದ ಈ ಹೇಳಿಕೆ ನೀಡಿದ್ದಾರೆ. ಅವರು ವೈಯಕ್ತಿಕವಾಗಿ ಯಾರ ಬಗ್ಗೆಯೂ ದ್ವೇಷದಿಂದ ಹೇಳಿಕೆ ನೀಡಿಲ್ಲ’ ಎಂದರು.

‘ಒಂದು ಬಾರಿ ಸೋತಿದ್ದಕ್ಕೆ ಖರ್ಗೆ ಅವರು ವಿಷಕಾರಿ ವ್ಯಕ್ತಿತ್ವದವರು ಎಂದು ಹೇಳುವುದಾದರೆ ಸೋಲು ಕಂಡಿದ್ದ ವಾಜಪೇಯಿ, ಅಡ್ವಾಣಿ ಅವರೂ ವಿಷಕಾರಿಯೇ. ಈ ಬಗ್ಗೆ ಕಟೀಲ್‌ ಅವರು ಕಲಬುರ್ಗಿಗೆ ಬಂದು ಸ್ಪಷ್ಟೀಕರಣ ನೀಡಬೇಕು. ಅಲ್ಲಿಯವರೆಗೆ ನಮ್ಮ ವೈಚಾರಿಕ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.

ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ,ದೊಡ್ಡ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು. ಖರ್ಗೆ ಸೋಲಿಗೆ ಮೋದಿಯೂ ಕಾರಣ. ಅಲ್ಲದೆ, ಸೋಲಿಗೆ ನಮ್ಮಲ್ಲಿಯೂ ಕಾರಣಗಳಿವೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಶಾಸಕಿ ಖನೀಜ್ ಫಾತಿಮಾ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT