ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಫಲಿತಾಂಶ ಪ್ರಕಟಣೆಯ ಸತ್ವ‘ಪರೀಕ್ಷೆ’

Published 23 ಅಕ್ಟೋಬರ್ 2023, 4:35 IST
Last Updated 23 ಅಕ್ಟೋಬರ್ 2023, 4:35 IST
ಅಕ್ಷರ ಗಾತ್ರ

ಕಲಬುರಗಿ: ‘ಸಮುದ್ರದ ನಂಟು ಉಪ್ಪಿಗೆ ಬರ’ ಎಂಬ ಗಾದೆ ಮಾತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಪರೀಕ್ಷೆಗಳನ್ನು ನಡೆಸುವ ವಿಶ್ವವಿದ್ಯಾಲಯಕ್ಕೆ ಸಕಾಲದಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.

ಪ್ರಶ್ನೆ ಪತ್ರಿಕೆಗಳ ಅದಲು ಬದಲು, ಏಕಾಏಕಿ ಪರೀಕ್ಷೆಯ ದಿನಾಂಕ ಮುಂದೂಡಿಕೆಯ ನಡುವೆಯೂ ಪರೀಕ್ಷೆಗಳನ್ನು ನಡೆಸುವ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಿಸಲು ತಿಂಗಳಾನುಗಟ್ಟಲೆ ತೆಗೆದುಕೊಳ್ಳುತ್ತಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‌ಗೂ ಚಾತಕ ಪಕ್ಷಿಯಂತೆ ಫಲಿತಾಂಶಕ್ಕಾಗಿ ಎದುರು ನೋಡುತ್ತಾರೆ. ವಿ.ವಿ.ಯ ವಿಳಂಬ ದೋರಣೆಗೆ ವಿದ್ಯಾರ್ಥಿಗಳು ‘ಯಾಕಾದರೂ ಇಲ್ಲಿ ಅಡ್ಮಿಷನ್ ಮಾಡಿದೆ’ ಎಂಬ ಬೇಸರ ಹೊರಹಾಕುತ್ತಿದ್ದಾರೆ.

ವಿಳಂಬದ ಬಗ್ಗೆ ವಿ.ವಿ.ಗೆ ಪ್ರಶ್ನಿಸಿದರೆ, ‘ಮಾನವ ಸಂಪನ್ಮೂಲದ ಕೊರತೆ ಇದೆ. ಯುಯುಸಿಎಂಎಸ್‌ನಲ್ಲಿ ತಾಂತ್ರಿಕ ಸಮಸ್ಯೆ ಇದೆ. ವಿದ್ಯಾರ್ಥಿಗಳ ಹಾಜರಾತಿ ದಾಖಲೆ, ಆಂತರಿಕ ಅಂಕಗಳು ಹೊಂದಾಣಿಕೆ ಆಗುತ್ತಿಲ್ಲ. ಎನ್‌ಇಪಿಯಲ್ಲಿ ಹಲವು ವಿಷಯಗಳಿವೆ...’ ಹೀಗೆ ಸಿದ್ಧಸೂತ್ರದ ಕಾರಣಗಳನ್ನು ಕೊಡುತ್ತಾರೆ.

ರಾಜ್ಯದ ತುಮಕೂರು ವಿಶ್ವವಿದ್ಯಾಲಯ ಸೆ.24ರಂದು ಬಿಸಿಎ 6ನೇ ಸೆಮಿಸ್ಟರ್ ಪರೀಕ್ಷೆ ನಡೆಸಿ 24 ಗಂಟೆಗಳ ಒಳಗೆ (ಸೆ.26ಕ್ಕೆ) ಫಲಿತಾಂಶ ಪ್ರಕಟಿಸಿತ್ತು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಬಿಸಿಎ 5 ಮತ್ತು 6ನೇ ಸೆಮಿಸ್ಟರ್‌ ಪರೀಕ್ಷೆ ಮುಗಿದ 48 ತಾಸಿನೊಳಗೆ ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕ ಅಂಕಗಳ ಮಾಹಿತಿ ಕಳುಹಿಸಿತ್ತು. ಬೆಂಗಳೂರು ವಿಶ್ವವಿದ್ಯಾಲಯ ಪರೀಕ್ಷೆಗಳು ಮುಗಿದ 12 ದಿನಗಳಲ್ಲೇ ಬಿಸಿಎ, ಬಿಬಿಎ ಮತ್ತು ಬಿಕಾಂನ 6ನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟಿಸಿತ್ತು. ಇಂತಹುದೆ ಕೆಲಸ ಗುಲಬರ್ಗಾ ವಿ.ವಿ.ಯಿಂದ ಏಕೆ ಆಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಪ್ರಶ್ನೆ.

‘ಅನ್ಯ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಕೊರತೆ ಕಾಡುತ್ತಿದೆ. ಯುಯುಸಿಎಂಎಸ್‌ ತಾಂತ್ರಿಕ ಸಮಸ್ಯೆ ಇದೆ. ಅಲ್ಲಿಯೂ ಇಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ಇದ್ದಾರೆ. ಆದರೂ ದಾಖಲೆಯ ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿ ಸ್ನೇಹಿ ಶೈಕ್ಷಣಿಕ ವಾತಾವರಣ ಸೃಷ್ಟಿಸುತ್ತಿದ್ದಾರೆ. ಆದರೆ, ಗುಲಬರ್ಗಾ ವಿ.ವಿ. ಐದಾರು ತಿಂಗಳ ಕಳೆದರೂ ಮೌಲ್ಯಮಾಪನವೇ ಆರಂಭಿಸುವುದಿಲ್ಲ’ ಎಂದು ಖಾಸಗಿ ಕಾಲೇಜಿನ ಉಪನ್ಯಾಸಕ ಗುರುದತ್ತ ಬೇಸರ ವ್ಯಕ್ತಪಡಿಸಿದರು.

‘ಎನ್‌ಇಪಿ ಯುಜಿ ಕೋರ್ಸ್‌ಗಳ ಪರೀಕ್ಷೆ 2022ರ ಜೂನ್‌ ತಿಂಗಳಲ್ಲಿ ನಡೆದಿತ್ತು. ಇದುವರೆಗೂ ಫಲಿತಾಂಶ ಪ್ರಕಟವಾಗಿಲ್ಲ. 2ನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿದ್ದರೂ ಅಂಕಗಳಲ್ಲಿ ಸಾಕಷ್ಟು ಗೊಂದಲ ಇದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಮರುಮೌಲ್ಯ ಮಾಪನ ಸರಿಯಾಗಿ ನಡೆಯುತ್ತಿಲ್ಲ. ಕೆಲವೊಮ್ಮೆ ಏಕಾಏಕಿ ಪರೀಕ್ಷೆ ದಿನಾಂಕ ಮುಂದೂಡಿಕೆ ಮಾಡುತ್ತಾರೆ. ಅಂಕಪಟ್ಟ ಸಹ ಸಿಗುತ್ತಿಲ್ಲ’ ಎಂದು ಅಲವತ್ತುಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ‘3ನೇ ಸೆಮಿಸ್ಟರ್ ಮೌಲ್ಯಮಾಪನ ನಡೆಯುತ್ತಿದೆ. 2ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಲಾಗಿದೆ. ಫಲಿತಾಂಶ ಅಂಕಗಳಲ್ಲಿ ಏನಾದರೂ ವ್ಯತ್ಯಾಸ ಬಂದಿದ್ದರೆ ದೂರು ಕೊಟ್ಟು, ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಹಾಕಬಹುದು. ಎನ್‌ಇಪಿ ವಿಷಯಗಳ ಅಂಕಪಟ್ಟಿಗಳು ಹೊಸ ನಮೂನೆಯಲ್ಲಿ ಬರಲಿವೆ. ಅದು ರಾಜ್ಯದಾದ್ಯಂತ ಏಕರೂಪದಲ್ಲಿ ಇರಲಿದೆ. ಹೀಗಾಗಿ, ಭೌತಿಕವಾಗಿ ಅಂಕಪಟ್ಟಿಗಳು ಲಭ್ಯ ಇಲ್ಲ. ವಿದ್ಯಾರ್ಥಿಗಳು ಡಿಜಿಟಲ್ ಪ್ರತಿ ತೆಗೆದುಕೊಳ್ಳಬಹುದು’ ಎಂದರು.

ಕೈತಪ್ಪುತ್ತಿರುವ ಅನ್ಯ ವಿ.ವಿ.ಗಳ ಪ್ರವೇಶಾತಿ

‘ಸೆ.25ರಿಂದ 6ನೇ ಸೆಮಿಸ್ಟರ್ ಸೇರಿ ಇತರೆ ಪರೀಕ್ಷೆಗಳು ನಡೆದಿವೆ. ಮೌಲ್ಯಮಾಪನ ಪ್ರಕ್ರಿಯೆ ಶುರುವಾಗಿಲ್ಲ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಧಾರವಾಡ ಮೈಸೂರು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಗಳ ಪ್ರವೇಶಾತಿ ಮುಗಿದು ತರಗತಿಗಳು ಆರಂಭವಾಗಿವೆ. ಈ ವಿ.ವಿ.ಗಳ ಪ್ರವೇಶ ಪಡೆಯುವ ಕನಸು ಹೊತ್ತಿದ್ದ ಗುಲಬರ್ಗಾ ವಿ.ವಿ.ಯ ಸಾವಿರಾರು ವಿದ್ಯಾರ್ಥಿಗಳು ಫಲಿತಾಂಶ ದೊರೆಯದೇ ಪರಿತಪಿಸುತ್ತಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವಿ.ವಿ.ಯ ಪ್ರಾಧ್ಯಾಪಕರೊಬ್ಬರು ಹೇಳಿದರು. ‘ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪ್ರವೇಶಕ್ಕೆ ನ.6 ಕೊನೆಯ ದಿನವಾಗಿದೆ. ಅಷ್ಟರ ಒಳಗೆ ಫಲಿತಾಂಶ ಕೊಟ್ಟರೆ ಮಾತ್ರ ನಮ್ಮ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ’ ಎಂದರು. ‘ಕಳೆದ ವರ್ಷ ವಿಳಂಬ ಫಲಿತಾಂಶ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವಿ.ವಿ.ಯ ಮೇಲೆ ಒತ್ತಡ ತಂದು ವಾರದೊಳಗೆ ಫಲಿತಾಂಶ ಪ್ರಕಟಿಸುವಂತೆ ತಾಕೀತು ಮಾಡಿದ್ದರು. ಹೀಗಾಗಿ ರಾತ್ರಿ 10ರವರೆಗೆ ಉತ್ತರ ಪತ್ರಿಕಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿತ್ತು’ ಎಂದರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT