ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಸೇತುವೆ ಮೇಲೆ ಆತಂಕದ ಪ್ರಯಾಣ

ಶಂಕರವಾಡಿ: 4 ದಶಕಗಳ ಕಾಲದ ಹಳೆಯ ಸೇತುವೆ ಕಾಯಕಲ್ಪಕ್ಕೆ ಮನವಿ
Last Updated 15 ನವೆಂಬರ್ 2020, 2:46 IST
ಅಕ್ಷರ ಗಾತ್ರ

ವಾಡಿ: ಶಹಾಬಾದ್‌ ಸಮೀಪದ ಶಂಕರವಾಡಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ವಾಹನ ಸವಾರರು ಆತಂಕದಲ್ಲೇ ಪ್ರಯಾಣ ಮಾಡುವಂತಾಗಿದೆ.

ಈ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ–150ರಲ್ಲಿ ಕಾಗಿಣಾ ನದಿಗೆ ಲೋಕೋಪಯೋಗಿ ಇಲಾಖೆಯಿಂದ 4 ದಶಕಗಳ ಹಿಂದೆ ನಿರ್ಮಿಸಲಾಗಿದೆ.

ಕಲಬುರ್ಗಿ– ಗುತ್ತಿ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ವಾಹನಗಳ ಓಡಾಟ ಅತಿ ಹೆಚ್ಚಾಗಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸರಕು ಸಾಗಣೆ ಲಾರಿಗಳು, ಸಿಮೆಂಟ್ ಸಾಗಿಸುವ ಟ್ಯಾಂಕರ್‌ಗಳು, ಮರಳು ಸಾಗಣೆ ಟಿಪ್ಪರ್‌ಗಳು ಹಾಗೂ ಕಲಬುರ್ಗಿ ಯಾದಗಿರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳುವ ಬಸ್‌ಗಳು ಓಡಾಡುತ್ತಿದ್ದು, ಆತಂಕ ಇಮ್ಮಡಿಗೊಳಿಸಿದೆ.

ಸೇತುವೆ ಶಿಥಿಲಗೊಂಡಿದೆ ಎಂಬ ದೂರು 2 ವರ್ಷಗಳಿಂದ ಬಲವಾಗಿ ಕೇಳಿ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಜೊತೆಯಲ್ಲಿ ಸೇತುವೆ ನಿರ್ಮಾಣವಾಗುವ ಭರವಸೆ ಇತ್ತು. ಆದರೆ ಹೆದ್ದಾರಿ ನಿರ್ಮಾಣ ಪ್ರಾಧಿಕಾರ ಸೇತುವೆ ನಿರ್ಮಾಣ ಕಾಮಗಾರಿ ನಡೆಸದೇ ಕೇವಲ ರಸ್ತೆ ನಿರ್ಮಿಸಿದ್ದು, ಸಾರ್ವಜನಿಕರಿಂದ
ಟೀಕೆ ವ್ಯಕ್ತವಾಗುತ್ತಿದೆ.

ಸೇತುವೆಗೆ ಅಳವಡಿಸಿದ ತಡೆಗೋಡೆಗಳು ಕುಸಿದು ಬಿದ್ದಿವೆ. ಉಳಿದಿರುವ ತಡೆ ಕಂಬಗಳ ನಡುವೆ ಭಾರೀ ಅಂತರವಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಬ್ಬಿಣದ ತಡೆಗೋಡೆಗಳು ರಸ್ತೆಗೆ ಹೊಂದಿಕೊಂಡು ಬಿದ್ದಿವೆ. ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಗುಂಡಿಗಳು ಬಿದ್ದಿವೆ. ಸ್ವಲ್ಪ ಮಳೆ ಬಂದರೂ ಸೇತುವೆ ರಸ್ತೆ ಮೇಲೆಲ್ಲಾ ನೀರು ಆವರಿಸಿಕೊಳ್ಳುತ್ತದೆ. ಇದು ವಾಹನಗಳ ಸಂಚಾರಕ್ಕೆ ತೀವ್ರ ತೊಡಕು ಉಂಟುಮಾಡುತ್ತಿದೆ.

ಸೇತುವೆಯು ಎರಡು ವಾಹನಗಳು ಏಕಕಾಲಕ್ಕೆ ಹೋಗಲು ಸಾಧ್ಯವಿಲ್ಲದಷ್ಟು ಚಿಕ್ಕದಾಗಿದೆ. ಇದರಿಂದ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ರಾತ್ರಿ ಸಮಯದಲ್ಲಿ ಅಪಾಯದ ಸಾಧ್ಯತೆ ಅತಿ ಹೆಚ್ಚು ಕಂಡು ಬರುತ್ತಿದೆ.

ಮಳೆ ಬಂದರೆ ಸೇತುವೆ ಮುಳುಗಡೆಯಾಗುತ್ತದೆ. ಕಳೆದ ತಿಂಗಳು ಬಾರಿ ಮಳೆಯಿಂದ ಸೇತುವೆ ಮುಳುಗಡೆಯಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಪ್ರತಿ ವರ್ಷ ಸೇತುವೆ ಮುಳುಗಡೆಯಾಗಿ ಸಮಸ್ಯೆ ಎದುರಾಗುತ್ತಿದ್ದರೂ ಹೊಸ ಸೇತುವೆ ನಿರ್ಮಾಣ ಕನಸು ಸಾಕಾಗೊಳ್ಳುತ್ತಿಲ್ಲ. ಹೊಸ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT