ಸೋಮವಾರ, ಜನವರಿ 17, 2022
21 °C

ಬೆಳೆಹಾನಿ ಪರಿಹಾರ ನೀಡಿ: ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ಸಿ.ಎಂಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಕಳೆದ ನವೆಂಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ತೊಗರಿ, ಹತ್ತಿ, ಜೋಳ ಇತರೆ ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಶೀಘ್ರ ಪರಿಹಾರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಜೇವರ್ಗಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ತಾಲ್ಲೂಕಿನ ರೈತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

‘ಯಡ್ರಾಮಿ ತಹಶೀಲ್ದಾರ್ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿ ಒಟ್ಟು 66 ಸಾವಿರ ಎಕರೆ ಬೆಳೆಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ತೊಗರಿ ಬೆಳೆಯು ಶೇ 70ರಿಂದ 80ರಷ್ಟು ಹೂಬಿಡುವ ಹಂತದಲ್ಲಿದ್ದಯ, ತುಂತುರು ಮಳೆ, ಮೋಡಕವಿದ ವಾತಾವರಣದಿಂದ ಹೂ ಉದುರುವಿಕೆ, ಅತಿ ಹೆಚ್ಚಾಗಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಇದರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ’ ಎಂದು ಡಾ. ಅಜಯ್ ಸಿಂಗ್ ವಿವರಿಸಿದರು.

‘ಹವಾಮಾನ ವೈಪರೀತ್ಯದಿಂದ ಈ ವರ್ಷ ಗೊಡ್ಡು ರೋಗ ಬಾಧೆ ಹೆಚ್ಚಾಗಿದ್ದು, ಗಿಡಗಳು ಒಣಗಿ ಹೂ, ಕಾಯಿ ಉದುರಿಹೋಗಿವೆ. ತಾಲ್ಲೂಕಿನಲ್ಲಿ ಕಪ್ಪು ಆಳವಾದ ಮಣ್ಣಿನ ಗುಣಧರ್ಮ ಹೊಂದಿದ್ದು, ಮಣ್ಣಿನಲ್ಲಿ ಅತಿ ಹೆಚ್ಚು ತೇವಾಂಶದಿಂದಾಗಿ ತೊಗರಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಅವರು ತಿಳಿಸಿದರು.

ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯಿಸಿ ರೈತರು ಯಡ್ರಾಮಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರೈತರನ್ನು ಭೇಟಿ ಮಾಡಿ ಸಂಕಷ್ಟಗಳ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿಗೆ ನಿಯೋಗ ಕರೆತರುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಹೀಗಾಗಿ, ಪರಿಹಾರ ಬಿಡುಗಡೆಗೆ ಆದೇಶಿಸಬೇಕು ಎಂದರು.

ನಿಯೋಗದಲ್ಲಿ ರೈತರಾದ ಅಮರನಾಥ ಪಾಟೀಲ ಸಾಹು, ಹಣಮಂತ ಗುತ್ತೇದಾರ, ಅಪ್ಪು ಶಹಾಪುರ, ಮಾಳಪ್ಪ ಕಾರಗೊಂಡ, ಮಡಿವಾಳ ಯತ್ನಾಳ, ಶ್ರೀಶೈಲ ಗಂಗಾಕರ, ಸಿದ್ದು ಸಿರಸಗಿ, ಚಂದ್ರಶೇಖರ ಮಲ್ಲಾಬಾದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು