ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಡಾ. ಜಗಜೀವನರಾಂ ಸ್ಮರಣೆ

ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ಮೆರವಣಿಗೆ, ಬಹಿರಂಗ ಸಭೆ
Last Updated 5 ಏಪ್ರಿಲ್ 2022, 16:04 IST
ಅಕ್ಷರ ಗಾತ್ರ

ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 115ನೇ ಜಯಂತ್ಯುತ್ಸವವನ್ನು ಜಿಲ್ಲೆ ಹಾಗೂ ನಗರದ ಹಲವೆಡೆ ಅದ್ಧೂರಿಯಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಟೌನ್‌ಹಾಲ್‌ ಬಳಿ ಇರುವ ಜಗಜೀವನರಾಂ ಅವರ ಪುತ್ಥಳಿ ಬಳಿ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ‘ಡಾ.ಬಾಬು ಜಗಜೀವನರಾಂ ಅವರ ಕೊಡುಗೆ ಕೃಷಿ ಮತ್ತು ಕಾರ್ಮಿಕ ಕ್ಷೇತ್ರದಲ್ಲಿ ಅಪಾರವಾಗಿದೆ. ಒಂದು ಕಡೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಶೋಷಿತರನ್ನು ಮೇಲೆತ್ತುವ ಕೆಲಸ ಮಾಡಿದರೆ, ಇನ್ನೊಂದೆಡೆ ಡಾ.ಜಗಜೀವನರಾಂ ಅವರು ಕಾರ್ಮಿಕರು, ದಲಿತರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ ಅವರಿಗೆ ಹಕ್ಕುಗಳು ಲಭಿಸುವಂತೆ ಹೋರಾಡಿದವರು. ಬರಗಾಲದ ಸಂದರ್ಭದಲ್ಲಿ ಆಹಾರ ಧಾನ್ಯದ ಕೊರತೆ ನೀಗಿಸಿದ ಮಹಾನ್ ಚೇತನ ಅವರಾಗಿದ್ದಾರೆ’ ಎಂದರು.

‘ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. 371 (ಜೆ) ವಿಶೇಷ ಮೀಸಲಾತಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಅಸ್ತ್ರವಾಗಿದ್ದು, ಹಿಂದುಳಿದ, ಶೋಷಿತರಿಗೆ ಇದು ವರದಾನವಾಗಿ ಮಾರ್ಪಡಲಿ’ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ‘ಡಾ. ಜಗಜೀವನರಾಂ ಅವರೊಬ್ಬ ಉತ್ತಮ ಸಂಸದೀಯ ಪಟುವಾಗಿದ್ದರು. ತಮ್ಮ ಇಡೀ ಜೀವನ ಶೋಷಿತರ ವರ್ಗದ ಕಲ್ಯಾಣಕ್ಕಾಗಿ ಮುಡುಪಾಗಿಟ್ಟ ಧೀಮಂತ ವ್ಯಕ್ತಿಯಾಗಿದ್ದರು. ಸದ್ಯ ದೇಶದಲ್ಲಿ ಆತ್ಮ ನಿರ್ಭರ ಯೋಜನೆ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಅಂದು ಬಾಬು ಜಗಜೀವನರಾಂ ಅವರು ರೈತರೊಂದಿಗೆ ಸೇರಿ ದೇಶದಲ್ಲಿ ’ಹಸಿರು ಕ್ರಾಂತಿ’ ಮೂಲಕ ಮೊದಲ ಆತ್ಮ ನಿರ್ಭರ ಮಾಡಿದರು’ ಎಂದರು,

ಅಫಜಲಪುರ ತಾಲ್ಲೂಕು ಕರಜಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಎಂ. ಸಾವರಕರ್ ವಿಶೇಷ ಉಪನ್ಯಾಸ ನೀಡಿದರು.

ವಿತರಣೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕೆಲಸದ ಸಂದರ್ಭದಲ್ಲಿ ಅಪಘಾತಗೊಂಡು ಮರಣ ಹೊಂದಿದ ಕಾರ್ಮಿಕ ಅರ್ಜುನ್ ಅವರ ಪತ್ನಿ ನಾಗಮ್ಮ ಅವರಿಗೆ ₹ 2 ಲಕ್ಷದ ಚೆಕ್ ಹಾಗೂ ಕಾರ್ಮಿಕ ಮರಿಲಿಂಗಯ್ಯ ಅವರ ಮಗನ ಮದುವೆ ಖರ್ಚಿಗಾಗಿ ₹ 50 ಸಾವಿರ ಧನಸಹಾಯ ಮಂಜೂರಾತಿ ಪತ್ರವನ್ನು ಜಿಲ್ಲಾಧಿಕಾರಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಸಾಸಿ, ಎಸ್ಪಿ ಇಶಾ ಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆಯ ಆಯುಕ್ತ ಡಾ. ಶಂಕರ ವಣಿಕ್ಯಾಳ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್, ಡಾ. ಬಾಬು ಜಗಜೀವನರಾಂ ಜಿಲ್ಲಾ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಅಲ್ಲಾಬಕಷ್ ಸ್ವಾಗತಿಸಿದರು. ಜಿಲ್ಲಾ ಸಮನ್ವಯಾಧಿಕಾರಿ ಶಿವರಾಂ ಚವ್ಹಾಣ ವಂದಿಸಿದರು. ಕೊರಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ್ ನಿರೂಪಿಸಿದರು.

ಜಿಲ್ಲಾ ಜಯಂತ್ಯುತ್ಸವ ಸಮಿತಿ: ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದಿಂದ ಟೌನ್‌ಹಾಲ್‌ ಬಳಿ ಇರುವ ಪುತ್ಥಳಿವರೆಗೆ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ನಂತರ ಪುತ್ಥಳಿ ಮುಂಭಾಗದಲ್ಲಿ ಬಹಿರಂಗ ಸಭೆ ನಡೆಯಿತು.

ಬಿಜೆಪಿ: ಭಾರತೀಯ ಜನತಾ ಪಕ್ಷದ ವತಿಯಿಂದ ನಗರದಲ್ಲಿ ಜಯಂತಿ ಆಚರಿಸಲಾಯಿತು. ಶಾಸಕ ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ. ಪಾಟೀಲ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಪಕ್ಷದ ಮುಖಂಡರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಕಾಂಗ್ರೆಸ್: ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಪುತ್ಥಳಿಗೆ ನಮನ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ವಿಧಾನಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಹಾಗೂ ಕಾಂಗ್ರೆಸ್ ಮುಖಂಡ ಲಿಂಗರಾಜ ತಾರಫೈಲ್, ಕಲಬುರಗಿ, ಬೀದರ್, ಯಾದಗಿರಿ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್‌.ಕೆ. ಪಾಟೀಲ, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ್ ಸೇರಿದಂತೆ ಹಲವರು ಗೌರವ ಸಲ್ಲಿಸಿದರು.

ಜೆಡಿಎಸ್‌: ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಪಕ್ಷದ ಕಚೇರಿಯಲ್ಲಿ ಬಾಬೂಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

ರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿ: ಸಮಿತಿ ಜಿಲ್ಲಾ ಘಟಕದ ವತಿಯಿಂದ ಡಾ. ಜಗಜೀವನರಾಂ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಶಿವಸ್ವಾಮಿ, ಕಾರ್ಯಾಧ್ಯಕ್ಷ ಸತೀಶ ಸ್ವಾಮಿ, ಪದಾಧಿಕಾರಿಗಳಾದ ಸಿದ್ರಾಮಯ್ಯ ಪುರಾಣಿಕ, ಎನ್.ಎಸ್. ಹಿರೇಮಠ, ದಯಾನಂದ ಪಾಟೀಲ, ಸಂಪತ್ ಜೆ ಹಿರೇಮಠ ಇದ್ದರು.

ಬಿಜೆಪಿ ಯುವ ಮೋರ್ಚಾ: ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರೀತಮ್ ಪಾಟೀಲ, ವಿಜಯಪುರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಹುಬ್ಬಳ್ಳಿ ಯುವ ಮೋರ್ಚಾ ಅಧ್ಯಕ್ಷ ಪ್ರೀತಮ್ ಅರಕೇರಿ, ಶಹಾಬಾದ ನಗರಸಭೆ ಸದಸ್ಯ ದತ್ತು ಪಂಡ್, ಆಶಿಷ್ ಸೆಹಗಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT